ಸಚಿವ ಎಂ.ಬಿ. ಪಾಟೀಲರಿಗೆ ವಿಜಯಕುಮಾರ ಬಹಿರಂಗ ಸವಾಲು

0
36

ಕನ್ನಡಮ್ಮ ಸುದ್ದಿ-ವಿಜಯಪುರ: ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ತಾಕತ್ತಿದ್ದರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸೀರೆ, ಗೃಹೋಪಯೋಗಿ ವಸ್ತುಗಳನ್ನು ಹಂಚುವುದನ್ನು ಬಿಟ್ಟು ಮನೆಯಲ್ಲಿಯೇ ಕುಳಿತುಕೊಳ್ಳಿ, ನಾನು ಸಹ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ. ಆಗ ನೋಡೋಣ ಯಾರು ಗೆಲ್ಲುತ್ತಾರೆ ಎಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ವಿಜಯಕುಮಾರ ಪಾಟೀಲ ಬಹಿರಂಗ ಸವಾಲು ಹಾಕಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಕಂಬಾಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಬಲೇಶ್ವರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ, ನಾನು ಮತ ಕೇಳಲು ನಿಮ್ಮ ಕಡೆ ಬರುವುದಿಲ್ಲ. ನೀವೇ ಮತ ಹಾಕಬೇಕು ಎಂದು ಮಾತುಗಳನ್ನಾಡಿದ ಎಂ.ಬಿ. ಪಾಟೀಲರು ಈಗ ಅವರಷ್ಟೇ ಅಲ್ಲ ಸಹೋದರರು, ಕುಟುಂಬ ಸದಸ್ಯರೆಲ್ಲರೂ ಪ್ರಚಾರ ಮಾಡುತ್ತಿದ್ದಾರೆ, ಎಲ್ಲಿ ಹೋಯಿತು ಅವರ ಬದ್ಧತೆ? ತಾಕತ್ತಿದ್ದರೆ ನನ್ನ ಸವಾಲು ಸ್ವೀಕರಿಸಿ ಎಂದು ಸವಾಲು ಹಾಕಿದರು.
ಈ ಮೊದಲು ಹೆಲ್ಮೇಟ್‌ ಹಂಚಿದರು, ನಂತರ ಸೀರೆ, ಕಳಶ ಹಂಚಿದರು, ಈಗ ಕ್ರಿಕೆಟ್‌ ಬ್ಯಾಟ್‌, ಸ್ಟಂಪ್‌, ರಿಂಗ್‌ ಮೊದಲಾದವುಗಳನ್ನು ಹಂಚುತ್ತಿದ್ದಾರೆ. ನೀರಾವರಿ ಕಾರ್ಯಗಳನ್ನು ಮಾಡದೇ ‘ಆಧುನಿಕ ಭಗೀರಥ’ ಎಂದು ಕರೆಯಿಸಿಕೊಳ್ಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಆಧುನಿಕ ಭಗರೀಥ ಅಲ್ಲವೇ ಅಲ್ಲ, ಅವರೊಬ್ಬ ‘ಬಾಂಡೇ, ಸೀರೆ ಭಗೀರಥ’ ಎಂದು ವ್ಯಂಗ್ಯವಾಡಿದರು.
ಜನರಿಗೆ ನಿಮ್ಮ ಅಭಿವೃದ್ಧಿ ಕಾರ್ಯ ತೋರಿಸಿ ಮತ ಕೇಳಿ ಹೊರತು ಬಾಂಡೆ, ಸೀರೆ, ಹೆಲ್ಮೇಟ್‌ ಕೊಟ್ಟು ಅಲ್ಲ. ಚರಗಿ-ಚೊಂಬು, ತಾಟು, ಚಮಚೆ ಇಲ್ಲದೇ ಜೀವನ ನಡೆಸುವಷ್ಟು ಕ್ಷೇತ್ರದ ಜನತೆ ನಿರ್ಗತಿಕರಲ್ಲ. ಹಣದ ಹೊಳೆಯನ್ನೇ ಹರಿಸುತ್ತಿದ್ದೀರಿ? ಎಲ್ಲಿಂದ ಬಂತು ಈ ದುಡ್ಡು ಎಂದು ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಬೀಜಾಸುರರಿದ್ದಂತೆ. ಈ ಹಿಂದೆ ಬೀಜಾಸುರರು ದೇವರಿಗೆ ಚಾಲೆಂಜ್‌ ಹಾಕುತ್ತಿದ್ದರು. ಈಗ ಆ ಪರಂಪರೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆಸಿದ್ದಾರೆ. ಬ್ರಹ್ಮ, ವಿಷ್ಣು ಮಹೇಶ್ವರರೂ ಬಂದರೂ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ದೇವರಿಗೆ ಸವಾಲು ಹಾಕಿದ್ದಾರೆ. ನಾನು ಪರಮಾತ್ಮನ ಭಕ್ತ. ಹೀಗಾಗಿ ನಾನು ಬ್ರಹ್ಮ, ವಿಷ್ಣು, ಮಹೇಶ್ವರರ ಬಳಿ ಬೇಡಿಕೊಳ್ಳುತ್ತಿದ್ದೇನೆ, ಧರೆಗೆ ಬಾ ದೈವ ಇಲ್ಲಿ ಒಬ್ಬ ಅಸುರ ಮಾನವನಿದ್ದಾನೆ, ಅವನನ್ನು ಸೋಲಿಸುವ ಶಕ್ತಿ ನನಗೆ ಕೊಡು ಎಂದು ನಿತ್ಯ ಪ್ರಾರ್ಥಿಸುತ್ತಿದ್ದೇನೆ ಎಂದರು.
ನೀರಾವರಿ ಯೋಜನೆಗಳಿಗಾಗಿ ರೈತರಿಂದ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನುಗಳಿಗೆ ಪರಿಹಾರವನ್ನೇ ನೀಡಿಲ್ಲ. ರೈತರು ನ್ಯಾಯಯುತವಾದ ಪರಿಹಾರ ಕೇಳುವ ಪರಿಸ್ಥಿತಿಯೂ ಮತಕ್ಷೇತ್ರದಲ್ಲಿಲ್ಲ. ಬಡ ರೈತರು ನ್ಯಾಯಯುತವಾಗಿ ಬರುವ ತಮ್ಮ ಪರಿಹಾರ ಧನವನ್ನು ಕೇಳಿದರೆ ಅವರನ್ನು ಪೊಲೀಸ್‌ ಠಾಣೆಗೆ ಕರೆಯಿಸಿ ಬೆದರಿಸುವಂತೆ ಪೊಲೀಸ್‌ ಇಲಾಖೆಗೆ ಸಚಿವರೇ ನಿರ್ದೇಶನ ನೀಡುತ್ತಾರೆ. ಹೀಗಾಗಿ ಬಬಲೇಶ್ವರ, ತಿಕೋಟಾ ಭಾಗದಲ್ಲಿ ಸಂಪೂರ್ಣ ಭಯದ ವಾತಾವರಣ ನಿರ್ಮಾಣಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ, ಜಿಲ್ಲಾ ಪಂಚಾಯತ ಸದಸ್ಯ ಸಾಬು ಮಾಶ್ಯಾಳ, ಬಿಜೆಪಿ ಉಪಾಧ್ಯಕ್ಷ ಆರ್‌.ಎಸ್‌. ಪಾಟೀಲ ಕುಚಬಾಳ, ಕೃಷ್ಣಾ ಗುನ್ನಾಳಕರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...