ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ ಮೂರು ಲಕ್ಷ ಕೋಟಿ ರೂ, 20 ಲಕ್ಷ ಕೋಟಿ ರೂ ಪ್ಯಾಕೇಜ್ ವಿವರ ಪ್ರಕಟಿಸಿದ ನಿರ್ಮಲಾ ಸೀತಾರಾಮನ್

0
20

ನವದೆಹಲಿ:- ಕೋವಿಡ್-೧೯ ಸೋಂಕು ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ ವಿಶೇಷ ಪ್ಯಾಕೇಜ್ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾಮನ್ ಸಣ್ಣ, ಅತಿಸಣ್ಣ ಉದ್ಯಮಗಳು ಮತ್ತಿತರ ವಲಯಗಳ ಕಾರ್ಯ ಯೋಜನೆಗಳನ್ನು ಪ್ರಕಟಿಸಿದರು.
ಪ್ರಧಾನಿ ಮೋದಿ ಘೋಷಣೆ ಹಿನ್ನೆಲೆಯಲ್ಲಿ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ-ಎಂಎಸ್‌ಎಂಇ ಉದ್ಯಮಗಳಿಗೆ ಯಾವುದೇ ಅಡಮಾನವಿಲ್ಲದೇ ಸ್ವಯಂಚಾಲಿತ ಸಾಲ ಸೌಲಭ್ಯ ಒದಗಿಸಲು ೩ ಲಕ್ಷ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಎಂಎಸ್‌ಎಂಇ ಸೇರಿದಂತೆ ಉದ್ಯಮ ವಲಯಕ್ಕೆ ಹಲವು ವಿನಾಯಿತಿಗಳೊಂದಿಗೆ ತುರ್ತು ಸಾಲ ನೀಡಲಾಗುವುದು; ಸಾಲಮರುಪಾವತಿಗೆ ೪ ವರ್ಷ ಕಾಲಾವಕಾಶ ನೀಡಲಾಗಿದ್ದು, ಮೊದಲ ೧೨ ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿಗೆ ವಿನಾಯಿತಿ ನೀಡಲಾಗಿದೆ ಎಂದರು.
ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗಾಗಿ ೨೦ ಸಾವಿರ ಕೋಟಿ ರೂಪಾಯಿ ಸಾಲಸೌಲಭ್ಯ ನಿಗದಿಪಡಿಸಲಾಗಿದ್ದು, ಇದರಿಂದ ಸುಮಾರು ೨ ಲಕ್ಷ ಎಂಎಸ್‌ಎಂಇ ಘಟಕಗಳು ಲಾಭ ಪಡೆಯಲಿವೆ ; ಅಭಿವೃದ್ಧಿ ಸಾಮರ್ಥ್ಯ ಇರುವ ಎಂಎಸ್‌ಎಂಇಗಳಿಗೆ ೫೦ ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಶೇಷ ಪ್ಯಾಕೇಜ್‌ನ ಲಾಭವನ್ನು ಎಲ್ಲಾ ಎಂಎಸ್‌ಎಂಇಗಳಿಗೆ ದೊರಕಿಸಲು ಎಂಎಸ್‌ಎಂಇ ವ್ಯಾಖ್ಯಾನವನ್ನು ಪುನರ್ ರಚಿಸಲಾಗುವುದು. ಬಂಡವಾಳ ಹೂಡಿಕೆ ಮಿತಿಯನ್ನು ಸಹ ಪರಾಮರ್ಶಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಉದ್ಯಮಗಳ ವಹಿವಾಟಿಗೆ ಹೆಚ್ಚುವರಿ ಮಾನದಂಡ ನಿಗದಿಪಡಿಸಲಾಗುವುದು ಅಲ್ಲದೆ ತಯಾರಿಕಾ ಮತ್ತು ಸೇವಾ ವಲಯದ ವ್ಯತ್ಯಾಸವನ್ನು ತೆಗೆದುಹಾಕಲಾಗುವುದು. ಎಂಎಸ್‌ಎಂಇಗಳ ಉತ್ತೇಜನಕ್ಕಾಗಿ ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಾಗತಿಕ ಕಂಪನಿಗಳ ಸ್ಪರ್ಧೆ ತಪ್ಪಿಸಲು ಸರ್ಕಾರಿ ವಲಯದಲ್ಲಿ ೨೦೦ ಕೋಟಿ ರೂಪಾಯಿ ವರೆಗಿನ ಖರೀದಿಗೆ ಜಾಗತಿಕ ಟೆಂಡರ್ ರದ್ದುಪಡಿಸಲಾಗುವುದು ಇದಕ್ಕಾಗಿ ಹಣಕಾಸು ಕಾನೂನುಗಳಿಗೆ ಅಗತ್ಯ ತಿದ್ದುಪಡಿ ಮಾಡಲಾಗುವುದು. ಸ್ವಾವಲಂಬಿ ಭಾರತ ಮತ್ತು ಮೇಕಿಂಗ್ ಇಂಡಿಯಾ ಯೋಜನೆಗಳಿಗೆ ಇದರಿಂದ ನೆರವಾಗಲಿದೆ ಎಂದು ಅವರು ತಿಳಿಸಿದರು.
ಎಂಎಸ್‌ಎಂಇ ವಲಯಗಳಿಗೆ ಸಾಲಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ಹಣಕಾಸು ನಿಗಮಗಳಿಗೆ ೪೫ ಸಾವಿರ ಕೋಟಿ ರೂಪಾಯಿ ಸಾಲ ಖಾತರಿ ಯೋಜನೆ ಜಾರಿಗೊಳಿಸಲಾಗುವುದು. ಸಾಲ ಮೊತ್ತದ ಪ್ರಥಮ ಶೇಕಡ ೨೦ರಷ್ಟು ನಷ್ಟವನ್ನು ಖಾತರಿದಾರನಾದ ಕೇಂದ್ರ ಸರ್ಕಾರ ಭರಿಸಲಿದೆ ; ಸಣ್ಣ ಪ್ರಮಾಣದ ಸಾಲ ನೀಡುವ ಬ್ಯಾಂಕೇತರ ಸಂಸ್ಥೆಗಳಿಗೆ ೩೦ ಸಾವಿರ ಕೋಟಿ ರೂಪಾಯಿ ನೆರವು ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಸುಮಾರು ೭೨.೫ ಲಕ್ಷ ಕಾರ್ಮಿಕರಿಗೆ ಜೂನ್‌ನಿಂದ ಆಗಸ್ಟ್‌ವರೆಗಿನ ೩ ತಿಂಗಳ ಭವಿಷ್ಯನಿಧಿಯನ್ನು ಕೇಂದ್ರಸರ್ಕಾರವೇ ಪಾವತಿಸಲಿದೆ. ಗರಿಷ್ಠ ೧೫ ಸಾವಿರ ರೂಪಾಯಿ ಮಾಸಿಕ ವೇತನ ಹೊಂದಿರುವ ನೌಕರರಿಗೆ ತಕ್ಷಣವೇ ಭವಿಷ್ಯನಿಧಿ ಪಾವತಿಸಲಾಗುವುದು. ಭವಿಷ್ಯನಿಧಿಯಲ್ಲಿ ಉದ್ಯೋಗದಾತರ ಪಾಲನ್ನು ಶೇಕಡ ೧೨ ರಿಂದ ಶೇಕಡ ೧೦ಕ್ಕೆ ಇಳಿಸಲಾಗುವುದು.
ಸಂಕಷ್ಟಕ್ಕೆ ಸಿಲುಕಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ೯೦ ಸಾವಿರ ಕೋಟಿ ರೂಪಾಯಿ ನೆರವು ನಿಗದಿಪಡಿಸಲಾಗಿದ್ದು, ಕೇಂದ್ರದ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸುವ ವಿದ್ಯುತ್ ಕಂಪನಿಗಳಿಗೆ ರಿಯಾಯಿತಿ ನೀಡಲಾಗುವುದು.
ಸರ್ಕಾರಿ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರ ಅವಧಿಯನ್ನು ೬ ತಿಂಗಳು ವಿಸ್ತರಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಇನ್ನು ೩ ತಿಂಗಳು ಹೆಚ್ಚುವರಿ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ಬಿಲ್ಡರ್ ಮತ್ತು ಡೆವಲಪರ್‌ಗಳಿಗೆ ಅನುಕೂಲವಾಗುವಂತೆ ಕಾಮಗಾರಿ ನೋಂದಣಿ ಪ್ರಮಾಣ ಪತ್ರಗಳನ್ನು ಹೊಸದಾಗಿ ನೀಡಲಾಗುವುದು.
೨೦೧೯-೨೦ರ ಹಣಕಾಸು ವರ್ಷದ ಆದಾಯ ತೆರಿಗೆ ಮರುಸಲ್ಲಿಕೆ ಕಾಲಮಿತಿಯನ್ನು ನವೆಂಬರ್ ೩೦ರವರೆಗೆ ವಿಸ್ತರಿಸಲಾಗಿದೆ. ಟಿಡಿಎಸ್ ಮತ್ತು ಟಿಸಿಎಸ್ ಕಡಿತ ಪ್ರಮಾಣದಲ್ಲಿ ಶೇಕಡ ೨೫ರಷ್ಟು ರಿಯಾಯಿತಿ ನೀಡಲಾಗಿದೆ. ಈ ರಿಯಾಯಿತಿ ನಾಳೆಯಿಂದ ೨೦೨೧ರ ಮಾರ್ಚ್ ೩೧ರವರೆಗೆ ಅನ್ವಯವಾಗಲಿದೆ ಎಂದು ಅವರು ವಿವರಿಸಿದರು.

loading...