ಸಮಯಕ್ಕೆ ಸರಿಯಾಗಿ ಬಾರದ ಬಸ್‌: ಸಾರ್ವಜನಿಕರ ಪರದಾಟ

0
50

ಜಯರಾಜ ಗೋವಿ
ಯಲ್ಲಾಪುರ: ಪಟ್ಟಣದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಗ್ರಾಮೀಣ ಭಾಗಕ್ಕೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚರಿಸದೇ, ನಿರ್ಧಿಷ್ಟ ನಿಲ್ದಾಣಗಳಲ್ಲಿ ಬಸೆ ನಿಲ್ಲದೇ, ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 15 ದಿನಗಳಿಂದ ಬಸೆ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲದೇ ಅವ್ಯವಸ್ಥೆಯ ಅಗರವಾಗಿದೆ. ರಸ್ತೆ ಸಾರಿಗೆ ಸಂಸ್ಥೆಯ ಘಟಕವೂ ಪ್ರಯಾಣಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿಗಳು ಜಾಣ ಕುರುಡರಂತೆ ವರ್ತಿಸುತ್ತಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊದಲೇ ಬಸ್‌ ನಿಲ್ದಾಣದಲ್ಲಿ ನೂತನ ಬಸ ನಿಲ್ದಾಣದ ಕಾಮಗಾರಿ ನಡೆಯುತ್ತಿರುವದರಿಂದ. ಹಳೆಯ ಬಸ್‌ ನಿಲ್ದಾಣ ತೆರವುಗೊಳಿಸದೇ ವಾಹನ ನಿಲುಗಡೆಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡದೇ ಇರುವದರಿಂದ ಪ್ರಯಾಣಿಕರಿಗೆ ನಿಲ್ಲಲೂ ಜಾಗವಿಲ್ಲದೇ ಇಕ್ಕಟ್ಟಿನಂತಾಗಿದೆ ಅದರ ಜೊತೆಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದೇ ನಿಲ್ದಾಣದಲ್ಲಿಯೇ ಪ್ರಯಾಣಿರು ಅದರಲ್ಲೂ ವಿದ್ಯಾರ್ಥಿಗಳು ಅನಾವಶ್ಯಕವಾಗಿ ಕಾಲಹರಣ ಮಾಡುವಂತಾಗಿ ಜನದಟ್ಟಣೆಯಿಂದ ತುಂಬಿ ತುಳುಕುತ್ತಿದೆ.
ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಲೇಜುಗಳು ಇರದೇ ಇರುವದರಿಂದ ಅನಿವಾರ್ಯವಾಗಿ ಯಲ್ಲಾಪುರಕ್ಕೆ ಬರಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳದಾಗಿದ್ದು ಬಸ್ಸಿನ ಅವ್ಯವಸ್ಥಿತ ಸಂಚಾರದಿಂದಾಗಿ ಕಾಲೇಜು ಮುಗಿಸಿ ಮನೆ ಸೇರುವದು ರಾತ್ರಿಯಾಗುತ್ತಿದೆ ನಾವು ಓದಲು ಸಮಯವೂ ಸಿಗುವದಿಲ್ಲ ತಡವಾಗಿ ಹೋಗುವದಕ್ಕೆ ಮನೆಯಲ್ಲೂ ಬೈಯಿಸಿಕೊಳ್ಳುವಂತಾಗುತ್ತಿದೆ ಎಂದು ವಿದ್ಯಾರ್ಥಿಗಳು ನೊಂದು ನುಡಿಯುತ್ತಾರೆ.ತಾಲೂಕಿನ ಮಂಚಿಕೇರಿ ಸಮೀಪದ ಬೈಚ್‌ಗೋಡ ನಲ್ಲಿ ಬೆಳಿಗ್ಗೆ ಸಮಯದ ಬಸ್‌ ಸಂಚರಿಸದೇ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.ಘಟಕದಿಂದ ಹೊರಡುವ ಅನೇಕ ಗ್ರಾಮಾಂತರ ಸಾರಿಗೆಗಳು ತಾಂತ್ರಿಕ ತೊಂದರೆ ಅಥವಾಸಿಬ್ಬಂದಿಗಳ ಕೊರತೆಯಿಂದಾಗಿ ನಿಯಮಿತವಾಗಿ ಸಂಚರಿಸದೇ ತಾಲೂಕಿನ ಎಲ್ಲಪ್ರಯಾಣಿಕರಿಗೆ ದಿನನಿತ್ಯದ ಗೋಳಾಗಿದೆ.ಈ ಬಗ್ಗೆ ಬಸ್‌ ನಿಲ್ದಾಣಕ್ಕೆ ಸಂಪರ್ಕಿಸಿದರೆ ಸಮಂಜಸ ಉತ್ತರ ನೀಡದೆ ಸತಾಯಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟಕದ ವ್ಯವಸ್ಥಾಪಕರಿಗೆ ತಾಲೂಕಿನ ಸಾರ್ವಜನಿಕರ ಹಲವು ಸಮಸ್ಯೆಗಳ ಕುರಿತಂತೆ ಚರ್ಚಿಸಲು ತಾ.ಪಂ ಮಾಸಿಕ ಸಭೆ ಅಥವಾ ವಿಶೇಷ ಸಭೆಗಳಿಗೆ ಆಹ್ವಾನ ನೀಡಿದರೂ ಗೈರು ಹಾಜರಾಗಿ ನಿರ್ಲಕ್ಷ್ಯ ತೋರುತ್ತಾರೆ.ಈ ಕುರಿತು ತಾಲೂಕಿನ ಜನಪ್ರತಿನಿಧಿಗಳು ಹಲವು ಬಾರಿ ಆಕ್ಷೇಪಿಸಿದ್ದುಂಟು.ಇದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದರಲ್ಲದೇ ಬಸ್‌ ಸಂಚಾರವನ್ನು ನಿಯಮಿತಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ,ಇನ್ನಾದರೂ ಅಧಿಕಾರಿಗಳು ಈ ಕುರಿತು ತುರ್ತು ಗಮನ ಹರಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

loading...