ಸರ್ವರಿಗೂ ಬ್ಯಾಂಕಿಂಗ್ ಸೌಲಭ್ಯ ದೊರೆಯಲಿ: ಇಟಗಿ

0
16

ಕನ್ನಡಮ್ಮ ಸುದ್ದಿ-ನರಗುಂದ: ಭಾರತದ ಪ್ರತಿಯೊಂದು ಗ್ರಾಮದ ಬಡವರು, ಅನಕ್ಷರಸ್ಥರು, ಅಂಗವಿಕಲರು ಸೇರಿ ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೇವೆ ದೊರೆತು ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ. ಇದು ಪ್ರತಿಯೊಬ್ಬರಿಗೂ ಸಂತೋಷಕರ ಹೆಮ್ಮೆಯ ವಿಷಯವೆಂದು ರೋಣ ಅಂಚೆ ಇಲಾಖೆ ಮುಖ್ಯ ಅಧಿಕಾರಿ ಬಿ.ಪಿ. ಇಟಗಿ ಹೇಳಿದರು.
ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಮನೆಮನೆಗೂ ತಮ್ಮ ಬ್ಯಾಂಕ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಂದು ಗ್ರಾಮದ ಮನೆಮನೆಗೂ ಅಂಚೆ ಇಲಾಖೆ ಸಿಬ್ಬಂಧಿ ಗ್ರಾಹಕರ ಬಳಿ ತೆರಳಿ ಗ್ರಾಹಕರಿಗೆ ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆದುಕೊಳ್ಳಲು ಸುಲಭವಾಗುವಂತೆ ಕಾರ್ಯ ರೂಪಿಸಲಿದ್ದಾರೆ. ಇದೊಂದು ಅಂಚೆ ಮೂಲಕ ವ್ಯವಹರಿಸಲು ಸರಳ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ. ನೇರ ನಗದು ಸೌಲಭ್ಯ, ಗ್ಯಾಸ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ, ವಿದ್ಯಾರ್ಥಿವೇತನ, ಇತರ ಸಬ್ಸಿಡಿ ಈ ಖಾತೆಯ ಮೂಲಕವೇ ಗ್ರಾಹಕರು ಪಡೆಯಬಹುದು.
ಪ್ರತಿಯೊಬ್ಬ ಗ್ರಾಹಕನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆದು ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣದ ವ್ಯವಹಾರವನ್ನು ಅಂಚೆ ಮೂಲಕ ಮಾಡಲು ಸುಲಭ ವಿಧಾನವಾಗಿದೆ. ಜತೆಗೆ ರೇಲ್ವೆ, ವಿಮಾನಗಳ ಟಿಕೆಟ್ ಬುಕ್ಕಿಂಗ್ ಸೇವೆಗಳು ಹಾಗೂ ಎನ್‍ಇಎಫ್‍ಟಿ, ಆರ್‍ಟಿಜಿಎಸ್, ಐಎಂಪಿಎಸ್ ಸೌಲಭ್ಯಗಳು ಇರುವುದರಿಂದ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು. ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಬಿ. ಅಸೂಟಿ, ನರಗುಂದ ಅಂಚೆ ಇಲಾಖೆ ಸಹಾಯಕ ಅಧಿಕಾರಿ ಅರುಂಧತಿ ಗೋಡಬೋಲೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ಸಿಬ್ಬಂಧಿ ಈರಣ್ಣ ಕುಪ್ಪಸದ, ಈರಣ್ಣ ಗುಂಜಳ, ಮಹೇಶ ಹೊಸಮನಿ, ಎಂ.ಕುಲಕರ್ಣೆ ಗ್ರಾಹಕರು ಉಪಸ್ಥಿತರಿದ್ದರು. ಚಂದ್ರಕಾಂತ ಇನಾಮದಾರ ಅವರಿಂದ ಪ್ರಾರ್ಥನೆ ಜರುಗಿತು. ಪ್ರೇಮಾ ಕಾಪ್ಸೆ, ರಮೇಶ ಕೋರಿ ಕಾರ್ಯಕ್ರಮ ನಿರ್ವಹಿಸಿದರು.

loading...