ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಕಾನೂನು ರದ್ದುಪಡಿಸಿದ ಸುಪ್ರೀಂಕೋರ್ಟ್

0
22

ನವದೆಹಲಿ: ತೀವ್ರ ವಿವಾದ ಮತ್ತು ಪರ-ವಿರೋಧ ವಾದಕ್ಕೆ ಕಾರಣವಾಗಿದ್ದ ಸಲಿಂಗಕಾಮ ಕುರಿತು ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದೆ.

ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ. ಭಾರತದಲ್ಲಿ ಸಲಿಂಗಕಾಮ ಅಪರಾಧವೋ ಅಥವಾ ಇಲ್ಲವೋ ಎಂದು ಪರಿಗಣಿಸುವ, ಭಾರತೀಯ ದಂಡಸಂಹಿತೆ(ಐಪಿಸಿ) ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಐಪಿಸಿ ಸೆಕ್ಷನ್ 377ರ ವಿಧಿಗೆ ಯಾವುದೇ ತರ್ಕವಿಲ್ಲ ಎಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವೈವಿಧ್ಯತೆಯ ಶಕ್ತಿಯನ್ನು ಗೌರವಿಸುವ ಅಗತ್ಯವಿದೆ ಎಂದು ಸಿಜೆಐ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಪೂರ್ವಾಗ್ರಹಗಳಿಗೆ ಇತಿಶ್ರೀ ಹಾಡಬೇಕಾಗಿದ್ದು, ಸಲಿಂಗಕಾಮಿಗಳಿಗೆ ಬೇರೆಯವರಂತೆಯೇ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಭಿವ್ಯಕ್ತಿಯ ನಿರಾಕರಣೆ ಸಾವಿಗೆ ಸಮಾನ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಗುರುವಾರ ಅಭಿಪ್ರಾಯ ಪಟ್ಟರು.  ಸೆಕ್ಷನ್‌ 377 ತರ್ಕವಿರದ, ಸಮರ್ಥಿಸಕೊಳ್ಳಲು ಆಗದು ಎಂದಿದ್ದಾರೆ.  ನ್ಯಾಯಮೂರ್ತಿ ರೋಹಿಂಟನ್‌ ಎಫ್‌.ನಾರಿಮನ್‌, ಎ.ಎಮ್‌.ಖಾನ್ವಿಲ್ಕರ್‌, ಡಿ.ವೈ.ಚಂದ್ರಚೂಡ್‌ ಹಾಗೂ ಇಂದು ಮಲ್ಹೋತ್ರಾ ಅವರನ್ನು ಒಳಗೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ತೀರ್ಪು ನೀಡಿದೆ. 

ಸಮ್ಮತಿಯ ಸಲಿಂಗ ಲೈಂಗಿಕತೆಯು ಪರಿವರ್ತನೆಯೇ ಹೊರತು ಅಡ್ಡದಾರಿ ಅಲ್ಲ. ಸಲಿಂಗ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್‌ 377ರ ಸಿಂಧುತ್ವವನ್ನು ಪರಿಶೀಲಿಸುವಾಗ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬಹುಸಂಖ್ಯಾತರ ನೈತಿಕ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಜುಲೈನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

156 ವರ್ಷಗಳ ಹಳೆಯ ಕಾನೂನು ರದ್ದು

ಇದೇ ವೇಳೆ ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ 156 ವರ್ಷಗಳ ಹಳೆಯ ಕಾನೂನು ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದಂತಾಗಿದೆ.  ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವೂ ಸೆಕ್ಷನ್ 377 ರದ್ದತಿಯ ಕುರಿತು ತನ್ನ ವಿವೇಚನೆಗೆ ತೋಚಿದ್ದನ್ನು ಮಾಡಬಹುದು ಎಂದಿತ್ತು. 

 ಹೋಟೆಲ್ ಉದ್ಯಮಿ ಕೇಶವ್ ಸೂರಿ ಎಂಬುವವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ನಂತರ ಹಮ್ಸಫರ್ ಟ್ರಸ್ಟ್‌ನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಿಂದ ನಡೆದ ವಿಚಾರಣೆಯ ತೀರ್ಪು ಇಂದು ಹೊರಬಿದ್ದಿದೆ.

ಇದೇ ಅಕ್ಟೋಬರ್‌ 2ರಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಿವೃತ್ತಿ ಹೊಂದಲಿದ್ದು, ಆಧಾರ್‌, ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ಕುರಿತಾದ ಪ್ರಕರಣ ಸೇರಿದಂತೆ ಬಾಕಿಯಿರುವ ಪ್ರಮುಖ ಪ್ರಕರಣಗಳ ಪೈಕಿ ತೀರ್ಪು ಹೊರಬಂದಿರುವ ಮೊದಲ ಪ್ರಕರಣ ಇದಾಗಿದೆ.  

loading...