ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ತರಬೇಡಿ: ಭಾಗ್ವತ್‌

0
26

ಕನ್ನಡಮ್ಮ ಸುದ್ದಿ-ಕುಮಟಾ: ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಕೆಲ ರಾಜಕೀಯ ಮುಖಂಡ ಅನವಶ್ಯಕ ಪ್ರವೇಶದಿಂದ ಗೊಂದಲದ ಗೂಡಾಗಿದೆ. ಮೊದಲೆಲ್ಲ ಬಹುತೇಕ ಸಹಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ಅವಿರೋಧವಾಗುತ್ತಿತ್ತು. ಈ ರಾಜಕೀಯದವರ ಪ್ರವೇಶದಿಂದ ಚುನಾವಣೆ ಏರ್ಪಡುವ ಜೊತೆಗೆ ಮತದಾರರಲ್ಲಿ ವಿನಾಕಾರಣ ಗೊಂದಲ ಮೂಡಿಸುವಂತಾಗಿದೆ. ಹಾಗಾಗಿ ರೈತರ ಪರವಾಗಿರುವ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ತರಬೇಡಿ ಎಂದು ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕರು ಮತ್ತು ಸಹಕಾರಿ ಧುರೀಣ ಶ್ರೀಧರ ಭಾಗ್ವತ್‌ ಹೇಳಿದರು.
ಅವರು ಬುಧವಾರ ಕೆಡಿಸಿಸಿ ಬ್ಯಾಂಕ್‌ನ ಸಭಾಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಈ ಬಾರಿ ನಡೆದ ಚುನಾವಣೆಯಲ್ಲಿ ನಮ್ಮ ಗುಂಪಿನ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು, ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬುದು ಸಂತಸ ಸಂಗತಿ. ಕೆಲವರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಿರ್ದೇಶಕರೇ ಪುನರ್‌ ಆಯ್ಕೆಗೊಂಡಿದ್ದಾರೆ. ಇನ್ನು ಕೆಲವರು ನೂತನವಾಗಿ ಆಯ್ಕೆಗೊಂಡಿದ್ದಾರೆ. ನಮ್ಮ ಬ್ಯಾಂಕಿನಿಂದ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗಬೇಕು. ಬ್ಯಾಂಕಿನಿಂದ ದೊರೆಯುವ ಹಲವು ಯೋಜನೆಗಳ ಉಪಯೋಗವನ್ನು ಅವರು ಪಡೆದುಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ. ಅಲ್ಲದೇ ಪಟ್ಟಣದಲ್ಲಿ ಸೂಪರ್‌ ಮಾರ್ಕೆಟ್‌ ನಿರ್ಮಿಸುವ ಯೋಜನೆಯನ್ನು ಕೈಗೊಂಡಿದ್ದೇವೆ. ನಮ್ಮ ತಂದೆಯವರಾದ ಆರ್‌ ಎಸ್‌ ಭಾಗ್ವತ್‌ ಅವರ ಮಾರ್ಗದರ್ಶನದಲ್ಲಿ ರೈತರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವ ಜೊತೆಗೆ ನಾವೆಲ್ಲರು ಸೇರಿ ಉತ್ತಮ ಆಡಳಿತವನ್ನು ನೆಡೆಸಿ, ಪಿಎಲ್‌ಡಿ ಬ್ಯಾಂಕ್‌ ಇನ್ನೂ ಎತ್ತರಕ್ಕೆ ಬೆಳೆಸುತ್ತೇವೆ. ಸರ್ಕಾರ ಮಂಡಿಸಿದ ಹಲವು ಯೋಜನೆಗಳಲ್ಲಿ ಕೆಲವು ಯೋಜನೆಗಳು ಪಿಎಲ್‌ಡಿ ಬ್ಯಾಂಕುಗಳಿಗೆ ಅನ್ವಯವಾದರೆ, ಇನ್ನು ಕೆಲವಷ್ಟು ಯೋಜನೆಗಳು ಅನ್ವಯವಾಗುವುದಿಲ್ಲ. ಅದರಲ್ಲೂ ಸಾಲಮನ್ನಾ ವಿಚಾರದಲ್ಲಿ ಸರ್ಕಾರ ಅನೇಕ ಶರತ್ತುಗಳನ್ನು ವಿಧಿಸಿದ್ದಾರೆ. ಇಂತಹ ಶರತ್ತುಗಳನ್ನ ಮುಂದಿಟ್ಟು ಬ್ಯಾಂಕಗಳನ್ನು ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ಬರುವಂತೆ ನಾವು ಹೋರಾಟ ನಡೆಸುತ್ತೇವೆ. ಈ ಹಿಂದೆ ನೀಡಿದ ಶರತ್ತುಗಳನ್ನು ಪುನರ್‌ ಪರಿಶೀಲನೆ ನಡೆಸಿ ಕಡಿಮೆಗೊಳಿಸಬೇಕು. ಇದರಿಂದ ಬಹಳಷ್ಟು ಸಹಕಾರಿ ಸಂಘ, ಸಂಸ್ಥೆಗಳು ತೊಂದರೆ ಅನುಭವಿಸುತ್ತಿದೆ ಎಂದರು.
ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರಾದ ಶ್ರೀಕಾಂತ ಪಟಗಾರ ಮಾತನಾಡಿ, ಆರ್‌ ಎಸ್‌ ಭಾಗ್ವತ್‌ ಅವರು ಕಳೆದ ಅನೇಕ ವರ್ಷದಿಂದ ಈ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರವನ್ನು ನಡೆಸಿದ್ದರು. ಆದರೆ ಇಂದು ಅವರ ಮೊಮ್ಮಗ ಭುವನ ಶ್ರೀಧರ ಭಾಗ್ವತ್‌ ಅವರು ಕೂಡ ಗೆಲುವನ್ನು ಸಾಧಿಸಿದ್ದಾರೆ. ಒಟ್ಟಾರೆ ಶ್ರೀಧರ ಭಾಗ್ವತರ ನೇತೃತ್ವದ ತಂಡದ ಹೆಚ್ಚಿನ ಸದಸ್ಯರು ಹೆಚ್ಚಿನ ಮತದಿಂದ ಆಯ್ಕೆಯಾಗುವ ಮೂಲಕ ಕ್ಷೇತ್ರದ ಗಮನ ಸೆಳೆದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರಾದ ಭೂವನ ಶ್ರೀಧರ ಭಾಗ್ವತ್‌, ನಾರಾಯಣ ಶೇಷಗಿರಿ ನಾಯ್ಕ ನಾಗೂರು, ಜಿ ಜಿ ಹೆಗಡೆ ಅಳಕೋಡ, ಶಂಭು ದೇವಪ್ಪ ನಾಯ್ಕ ಸಂತೆಗುಳಿ, ನಿಲಕಂಠ ನಾಯ್ಕ ಹಿರೇಗುತ್ತಿ, ಗೋಪಾಲಕೃಷ್ಣ ಭಟ್ಟ ಕಲ್ಲಬ್ಬೆ, ನಾಗರತ್ನಾ ನಾಯ್ಕ ಕೊನ್ನಳ್ಳಿ, ಮಂಜುನಾಥ ಮುಕ್ರಿ ಹಂದಿಗೋಣ, ಅನಂತ ನಾಯ್ಕ ಹನೆಹಳ್ಳಿ, ತಿಮ್ಮಣ್ಣ ಭಟ್‌ ಗೋಕರ್ಣ ಹಾಗೂ ಇತರರು ಉಪಸ್ಥಿತರಿದ್ದರು.

loading...