ಸಾಮರಸ್ಯತೆಗೆ ಹೊಸ ಭಾಷ್ಯ ಬರೆದ ಮುಸ್ಲಿಂ ಕುಟುಂಬ

0
24

 

ಬೈಲಹೊಂಗಲ: ಲಿಂಗಾಯತ ಧರ್ಮಿಯರು ಬಸವತತ್ವದ ಮೂಲಕ ಗೃಹ ಪ್ರವೇಶ ಮಾಡುವುದನ್ನು ನಾವು ನೀವೆಲ್ಲಾ ಕೇಳಿದ್ದೇವೆ ಆದರೆ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದು ಬಸವತತ್ವದ ಪ್ರಕಾರ ಗೃಹಪ್ರವೇಶ ಮಾಡುವ ಮೂಲಕ ಸಾಮರಸ್ಯತೆಗೆ ಹೊಸ ಭಾಷ್ಯ ಬರೆದಿದೆ.
ನೇಗಿನಹಾಳದ ಮಡಿವಾಳೇಶ್ವರ ಮಠದ ಶ್ರೀ ಬಸವಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಹೊಳಿಹೊಸೂರ ಗ್ರಾಮದ ಹುಸೇನ್ ಜಮಾದಾರ್ ಕುಟುಂಬವು ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಈ ವೇಳೆ ಗುರು ಬಸವಣ್ಣನವರ, ಸೂಫಿಸಂತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಚನ ಸಾಹಿತ್ಯ, ಕುರಾನ ಗ್ರಂಥವನ್ನು ಇಡಲಾಗಿತ್ತು. ಸಾಮೂಹಿಕ ಇಷ್ಠಲಿಂಗಪೂಜೆ, ಸಾಮೂಹಿಕ ಪ್ರಾರ್ಥನೆ ಮೂಲಕ ಅತ್ಯಂತ ಸರಳವಾಗಿ ಮನೆಯ ಪ್ರವೇಶ ಮಾಡಲಾಯಿತು.

ಗೃಹ ಪ್ರವೇಶದ ನೇತೃತ್ವ ವಹಿಸಿಕೊಂಡಿದ್ದ ನೇಗಿನಹಾಳ ಶ್ರೀಗಳು ಈ ವೇಳೆ ಮಾತನಾಡಿ ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮಕ್ಕೂ ಸಾಕಷ್ಟು ಸಾಮ್ಯತೆಯಿದೆ. ನಮ್ಮ ಬಸವ ತತ್ವದ ಸರಳತೆಯಿಂದ ಮಾರು ಹೋಗಿರುವ ಮುಸ್ಲಿಂ ಕುಟುಂಬವು ಬಸವ ತತ್ವದ ಮೂಲಕ ಗೃಹಪ್ರವೇಶ ಮಾಡಿದ್ದು ಸಂತಸವಾಗಿದೆ. ನಾವು ಲಿಂಗಾಯತರು ಎಂದು ಹೇಳಿಕೊಳ್ಳುವ ಅದೆಷ್ಟೋ ಜನರು ವೈದಿಕ ಸಂಸ್ಕ್ರತಿಯ ಬೆನ್ನತ್ತಿರುವ ಕಾಲದಲ್ಲಿ ಮುಸ್ಲಿಂ ಕುಟುಂಬವು ಬಸವ ತತ್ವದ ಕಡೆ ಮುಖ ಮಾಡಿದ್ದು ಎಲ್ಲಾ ಲಿಂಗಾಯತರಿಗೂ ಮಾದರಿಯಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಅನುಭಾವಿ ಮಂಜುನಾಥ ಮಡಿವಾಳರ ಅವರು ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮಕ್ಕೂ ಇರುವ ಸಾಮ್ಯತೆಯನ್ನು ತಿಳಿಸಿದರು. ಲಿಂಗಾಯತದಲ್ಲಿ ಅಷ್ಟಾವರಣ, ಪಂಚಾಚಾರಗಳಿರುವಂತೆ ಇಸ್ಲಾಂ ಧರ್ಮದಲ್ಲಿ ಷರಿಯತ್, ತರಿಕತ್, ಹಕಿಕತ್, ನಿಯಾಕತ್ ಎಂಬ ಆಚರಣೆಗಳಿವೆ. ಇಸ್ಲಾಂ ಧರ್ಮಿಯರು ಪ್ರಾರ್ಥನೆ ಮೂಲಕ ದೇವರನ್ನು ಕಾಣುವ ಪರಿಕಲ್ಪನೆ ಇದ್ದರೆ, ಲಿಂಗಾಯತರಲ್ಲಿ ಇಷ್ಠಲಿಂಗದ ಮೂಲಕ ತಾವೇ ಸ್ವತಃ ದೇವರಾಗುವ ಪರಿಕಲ್ಪನೆಯಿದೆ. ಬಸವಾದಿ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದಂತೆ ಇಸ್ಲಾಂ ಧರ್ಮದಲ್ಲಿಯೂ ಕಾಯಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ೧೨ನೇ ಶತಮಾನದಲ್ಲಿ ಅಪ್ಘಾನಿಸ್ತಾನದಿಂದ ಮರುಳ ಶಂಕರದೇವರು ಎಂಬ ಸೂಫಿ ಸಂತರು ಕಲ್ಯಾಣಕ್ಕೆ ಆಗಮಿಸಿ ತಮ್ಮ ಸತ್ಯ ಶುದ್ಧ ಕಾಯಕದ ಮೂಲಕ ಬಹು ದೊಡ್ಡ ಶರಣರಾಗಿ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ತತ್ವ ಪದಕಾರ ಷರೀಫ ಸಾಹೇಬರು ಮತ್ತು ಗುರು ಮಡಿವಾಳೇಶ್ವರರು ವಚನ ಸಾಹಿತ್ಯ ಮತ್ತು ಪುರಾಣಗಳನ್ನು ಅಧ್ಯಯನ ಮಾಡಿ ಸಮಾಜದಲ್ಲಿನ ಮೌಢ್ಯತೆಗಳನ್ನು ಧಿಕ್ಕರಿಸಿದ್ದರು ಎಂದು ಸ್ಮರಿಸಿಕೊಂಡರು.

ಆವ ಕುಲವಾದಡೇನು ಆತ್ಮಜ್ಞಾನ ಹೊಂದಿದವರಿಗೆ ಕುಲವೇ ಇಲ್ಲ ಎನ್ನುವಂತೆ ಎರಡು ಧರ್ಮಗಳನ್ನು ಪಾಲನೆ ಮಾಡುತ್ತಿರುವ ಈ ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಶಿಕ್ಷಕರಾದ ಬಸವರಾಜ ಹುಬ್ಬಳ್ಳಿ, ಮಡಿವಾಳಪ್ಪ ಗೌರಿ, ಚಂದ್ರಪ್ಪ ಮೇಳವಂಕಿ, ಮಹಾದೇವ ಮುದ್ದನ್ನವರ, ನಾಗರಾಜ ಕುಂಕೂರ, ನಾಗಪ್ಪ ತುರಮರಿ, ಗದಿಗೆಪ್ಪ ರುಮೋಜಿ, ಬಸವರಾಜ ಹಡಪದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...