ಸಾಲಮನ್ನಾಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ರೈತರು

0
16

ಕನ್ನಡಮ್ಮ ಸುದ್ದಿ-ಕೊಪ್ಪಳ: ರೈತರ ಸ್ಥಳೀಯ, ಸಹಕಾರಿ ಸಂಘಗಳಲ್ಲಿನ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಂಪೂರ್ಣ ಸಾಲಮನ್ನಾ ಹಾಗೂ ಗ್ರಾಮೀಣ ಪ್ರದೇಶದ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೇಜ್‌ ನೀಡುವಂತೆ ಆಗ್ರಹಿಸಿ ರಾಜ್ಯದ 26 ಜಿಲ್ಲೆಗಳ ರೈತರು ಶನಿವಾರ ನಡೆಸಿದ ರಾಷ್ಟ್ರೀಯ ಹೆದ್ದಾರಿ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.
ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಸ್ವರಾಜ್‌ ಇಂಡಿಯಾ ಪಕ್ಷದ ನೇತೃತ್ವದಲ್ಲಿ 26 ಜಿಲ್ಲೆಗಳ ರೈತರು ಹಿಟ್ನಾಳ್‌ ಟೋಲ್‌ಗೇಟ್‌ ಬಳಿ ರಸ್ತೆತಡೆದು ಬೃಹತ್‌ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ರೀತಿ ತಪ್ಪದೇ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಈ ಹಿಂದೆ ತಾವು ನೀಡಿದ ಮಾತಿನಂತೆ ಎಲ್ಲ ರೈತರ ಎಲ್ಲ ಬಗೆಯ ಸಂಪೂರ್ಣ ಸಾಲಮನ್ನಾ ಮಾಡಬೇಕು. ಹೊಸ ಪ್ಯಾಕೇಜ್‌ ಘೋಷಣೆ ಮಾಡಬೇಕು. ಸಂಪೂರ್ಣ ಸಾಲಮನ್ನಾ ಆಗುವವರೆಗೆ ನಿರಂತರ ಚಳವಳಿ ಮುಂದುವರಿಸುತ್ತೇವೆ. ಜೊತೆಗೆ ಬೆಳೆ ಸಾಲವನ್ನು ಆಗಸ್ಟ್‌ 14ರ ಒಳಗೆ ಮನ್ನಾ ಮಾಡಬೇಕು. ಇಲ್ಲದಿದ್ದರೆ ಆಗಸ್ಟ್‌ 15ರಂದು ಜಿಲ್ಲಾ ಕೇಂದ್ರಗಳಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು ರೈತರಿಗಾಗಿ ವಿಶೇಷ ಪ್ಯಾಕೇಜ್‌ ಘೊಷಣೆ ಮಾಡಬೇಕು. ಇದಲ್ಲದೇ ಬೆಂಬಲ ಬೆಲೆಯನ್ನು ಶಾಸನ ರೂಪದಲ್ಲಿ ಜಾರಿಗೊಳಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.
ಸ್ವರಾಜ್‌ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್‌, ಸರ್ಕಾರ ರೈತರ ಸಾಲಮನ್ನಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜೆಡಿಎಸ್‌ನ ಎಲ್ಲ ನಾಯಕರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟ ಅರಿತು ಸಾಲಮನ್ನಾ ಮಾಡಬೇಕು. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನುಡಿದಂತೆ ಸಿಎಂ ನಡೆದುಕೊಳ್ಳಬೇಕು. ಅಂತಾ ಸಂಪೂರ್ಣ ಸಾಲಮನ್ನಾ ಆಗದಿದ್ದರೆ ಯಾವ ಜಿಲ್ಲೆಗೆ ಆಡಳಿತ ಪಕ್ಷದ ನಾಯಕರು ಭೇಟಿ ನೀಡುತ್ತಾರೋ ಅಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್‌, ಬಡಗಲಪುರ ನರೇಂದ್ರ, ಶಾಂತಾ ಸ್ವಾಮಿಮಠ, ಗೋವಿಂದರಾಜು, ಜಿ.ಟಿ. ರಾಮಸ್ವಾಮಿ, ಬಲ್ಲೂರು ರವಿಕುಮಾರ್‌, ಕೆ.ಪಿ. ಬೂತಯ್ಯ, ನಾಗಪ್ಪ ಉಚಿಡಿ, ಮಲ್ಲಿಕಾರ್ಜುನ ಬಳ್ಳಾರಿ, ಸರಗೂರು ನಟರಾಜ, ಗೋಣಿಬಸಪ್ಪ ಸೇರಿದಂತೆ 26 ಜಿಲ್ಲೆಗಳ ಸಾವಿರಾರು ರೈತರು, ರೈತ ಮಹಿಳೆಯರು, ಬಾಲಕರು, ಬಾಲಕಿಯರಾದಿಯಾಗಿ ರೈತರು ಭಾಗವಹಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಹಲವು ನಿರ್ಣಯಗಳಿರುವ ಮನವಿ ಪತ್ರವನ್ನು ಓದಿ ನಂತರ ಸಿಎಂ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

loading...