ಸಾಹಿತಿ ಶೇಟ್‌ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ

0
51

ಭಟ್ಕಳ: ಭಾಷಾ ವೈವಿಧ್ಯತೆ ಇರುವ ಭಟ್ಕಳದಲ್ಲಿ ಹಲವು ಭಾಷೆಗಳು ಪ್ರಚಲಿತದಲಿದ್ದು, ಆಡಳಿತ ಭಾಷೆಯಾಗಿ ಮತ್ತು ಈ ನೆಲದ ಭಾಷೆಯಾಗಿ ಕನ್ನಡ ಮಾತ್ರ ಮೂಂಚೂಣಿಯಲ್ಲಿರಬೇಕು ಕನ್ನಡ ನಮ್ಮ ಮನೆ ಮತ್ತೂ ಮನದ ಭಾಷೆಯಾಗಲಿ ಎಂದು ಸಾಹಿತಿ, ಕವಿ ಮತ್ತು ಶಿಕ್ಷಕ ಶ್ರೀಧರ ಶೇಟ್‌ ಶಿರಾಲಿ ಎಂದು ಅಭಿಪ್ರಾಯಪಟ್ಟರು.
ಅವರು ಗುರುವಾರದಂದು ಇಲ್ಲಿನ ಶಿರಾಲಿ ಚಿತ್ರಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಭವಾನಿ ಶಂಕರ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಭಟ್ಕಳ ಇದರ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಮಾತನಾಡುತ್ತಿದ್ದರು.
ಈ ಸಮ್ಮೇಳನವೂ ಸಾಹಿತ್ಯದ ಜೊತೆಗೆ ವೈಯಕ್ತಿಕವಾಗಿ ನನಗೆ ಸ್ನೇಹ ಸಮ್ಮೇಳನದ ರೀತಿಯಲ್ಲಿ ಕಂಡು ಬರುತ್ತಿದ್ದು, ನನ್ನೆಲ್ಲ ಹಿತೈಷಿಗಳ, ಬಂದುಗಳ ಹಾಗೂ ನನ್ನ ಹುಟ್ಟೂರಿನಲ್ಲಿಯೇ ಸಮ್ಮೇಳನಾಧ್ಯಕ್ಷನಾಗಿರುವುದು ಸಂತಸವಾಗಿದೆ. ಭಟ್ಕಳವೂ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರು ಬದುಕುತ್ತಿದ್ದು, ಕೆಲವೊಮ್ಮೆ ಧರ್ಮದ ಅಮಲು ಏರಿಸಿಕೊಂಡ ಧರ್ಮಾಂಧರಿಂದ ಕೋಮುಗಲಭೆ ಆಗುತ್ತಿದೆ. ಕೋಮುಗಲಭೆಯನ್ನು ಆರಂಭದಿಂದಲೇ ಚಿವುಟಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಮಲ್ಲಿಗೆಗೆ ರಕ್ತದ ಕಲೆ ಅಂಟದಿರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಉಮೇಶ ಮುಂಡಳ್ಳಿ ಇವರು ಈಗಿನ ಸಮ್ಮೇಳನಧ್ಯಕ್ಷ ಶ್ರೀಧರ ಶೇಟ್‌ ಅವರಿಗೆ ಕನ್ನಡ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು.
ಸಮ್ಮೇಳನಕ್ಕೂ ಪೂರ್ವದಲ್ಲಿ ಇಲ್ಲಿನ ಶ್ರೀ ಹಾದಿಮಾಸ್ತಿ ದೇವಸ್ಥಾನ ಮಾಸ್ತಿಕಟ್ಟೆಯಿಂದ ಶ್ರೀ ಭವಾನಿ ಶಂಕರ ವೇದಿಕೆಯ ವರೆಗೆ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ರಾಷ್ಟ್ರ ಧ್ವಜಾರೋಹಣವನ್ನು ಸಹಾಯಕ ಆಯುಕ್ತ ಎಂ. ಎನ್‌. ಮಂಜುನಾಥ ನೆರವೇರಿಸಿದರು. ಜಿಲ್ಲಾ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್‌ ವಿ.ಎನ್‌.ಬಾಡಕರ್‌, ಜಿ.ಪಂ. ಸದಸ್ಯೆ ನಾಗಮ್ಮ ಗೊಂಡ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ತಾ.ಪಂ. ಸದಸ್ಯೆ ಮಾಲತಿ ದೇವಾಡಿಗ, ತಾ.ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಮುಂಜಿ ಮುಂತಾದವರು ಉಪಸ್ಥಿತರಿದ್ದರು.

loading...