ಸುಳ್ಳು ಆಶ್ವಾಸನೆಗಳ ಮೂಲಕ ಮೋದಿ ಆಡಳಿತ: ಕಾಂಗ್ರೆಸ್‌ ಆರೋಪ

0
9

ಹೊನ್ನಾವರ: ಸುಳ್ಳು ಆಶ್ವಾಸನೆಗಳ ಮೂಲಕ 2013 ರಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರಕಾರ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವದರಿಂದ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಮಂಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಗೌಡ ಮತ್ತು ಹೊನ್ನಾವರ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಜಗದೀಪ ತೆಂಗೇರಿಯವರು ಆರೋಪಿಸಿದ್ದಾರೆ.
ಅವರು ಇಂದು ಅಖೀಲ ಭಾರತ ಕಾಂಗ್ರೇಸ್‌ ಪಕ್ಷ ನೀಡಿದ “ಭಾರತ ಬಂದ್‌” ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಾಲೂಕಾ ಕಛೇರಿಗೆ ಆಗಮಿಸಿ ರಾಜ್ಯಪಾಲರಿಗೆ ಬರೆದ ಪತ್ರವನ್ನು ಹೊನ್ನಾವರ ತಹಶೀಲ್ದಾರ ಮಂಜುಳಾ ಭಜಂತ್ರಿಯವರಿಗೆ ನೀಡಿದ ಮನವಿ ಪತ್ರದಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಗಂಬೀರ ಆರೋಪ ಮಾಡಿದರು.
ಮೋದಿ ಸರಕಾರವು ವಿಧಿಸಿರುವ ಬೃಹತ್‌ ತೆರಿಗೆಗಳ ಪರಿಣಾಮವು ಪೆಟ್ರೋಲ್‌, ಡಿಸೇಲ್‌ ಮತ್ತು ಅಡುಗೆ ಅನಿಲಗಳ ಬೆಲೆಗಳು ಗಗನಕ್ಕೇರಿವೆ. ಜನಸಾಮಾನ್ಯರಿಂದ ಮೊದಿ ಸರಕಾರವು ಕಳೆದ 52 ತಿಂಗಳಲ್ಲಿ ಸರಿ ಸುಮಾರು 11 ಲಕ್ಷ ಕೋಟಿ ರೂಪಾಯಿಗಳ ತೆರಿಗೆಯನ್ನು ಸಂಗ್ರಹಿಸಿ, ಜನ ಸಾಮಾನ್ಯರ ಬದುಕು ಘಾಸಿಗೊಳಿಸಿರುವುದಲ್ಲದೇ ಪೆಟ್ರೋಲ್‌, ಡಿಸೇಲ್‌ ಮತ್ತು ಅಡುಗೆ ಅನಿಲಗಳ ಬೆಲೆಯು ಗಗನಕ್ಕೇರಿ ಜನಸಾಮಾನ್ಯರು, ಮಧ್ಯಮ ವರ್ಗದವರು, ರೈತರು, ಸಾರಿಗೆದಾರರು, ಚಿಕ್ಕ ಮತ್ತು ಮಧ್ಯಮ ವ್ಯಾಪಾರಸ್ಥರು ಸಂಕಟ ಅನುಭವಿಸುತ್ತಿದ್ದಾರೆ ಎಂದು ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಕಚ್ಚಾ ತೈಲದ ಬೆಲೆ 2014ರ ನಂತರ ಶೇಕಡಾ 40 ರಷ್ಟು ಬೆಲೆ ಕಡಿಮೆಯಾದರೂ ಕೂಡಾ ಮೊದಿ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಿಸುತ್ತಲೇ ಬಂದಿದೆ. ಇಂದಿನ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಲೀ. 82.50 ಆದರೆ ಡಿಸೇಲ್‌ ಲೀ. 72 ಆಗಿದೆ. ಕೇಂದ್ರದಲ್ಲಿ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದಂದಿನಿಂದ 12 ಬಾರಿ ಅಬಕಾರಿ ತೆರಿಗೆಯನ್ನು ಏರಿಸಿದೆ. ಅಡುಗೆ ಅನಿಲದ ಸಿಲೆಂಡರ ಬೆಲೆ ಮೇ 2014 ರಂದು 414 ಇದ್ದದ್ದು ಈಗ ರೂ. 754ಕ್ಕೆ ಏರಿದೆ ಎಂದು ಮನವಿ ಪತ್ರದಲ್ಲಿ ನಮೂದಿಸಲಾಗಿದೆ.
ಭಾರತೀಯರಾದ ನಾವು ಇಷ್ಟೊಂದು ದುಬಾರಿ ಬೆಲೆ ನೀಡಿ, ಪೆಟ್ರೋಲ್‌, ಡಿಸೇಲ್‌ ಖರೀದಿಸಿದ್ದರೆ, ಮೋದಿ ಸರಕಾರವು ಪ್ರತಿ ಲೀಟರಿಗೆ ರೂ. 34 ರಂತೆ 15 ವಿದೇಶಿ ರಾಷ್ಟ್ರಗಳಿಗೆ ಮತ್ತು ಡಿಸೇಲ್‌ ಪ್ರತಿ ಲೀಟರ್‌ಗೆ ರೂ. 37 ರಂತೆ 29 ವಿದೇಶಿ ರಾಷ್ಟ್ರಗಳಿಗೆ ರಪ್ತು ಮಾಡುತ್ತಿರುವುದರ ಗುಟ್ಟು ಬಹಿರಂಗವಾಗಬೇಕಾಗಿದೆ. ಮೋದಿ ಸರಕಾರವು ರಾಷ್ಟ್ರದ ಜನತೆಗೆ ಮಾಡುತ್ತಿರುವ ದ್ರೋಹ ಇದರಿಂದ ಗೊತ್ತಾಗುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಮೋದಿ ನೇತೃತ್ವದ ಕೇಂದ್ರದ ಬಿ.ಜೆ.ಪಿ. ಸರಕಾರ ಬರೇ ಬಾಷಣದಿಂದ ದಿನ ದುಡುತ್ತಿದ್ದು, ಜನಸಾಮಾನ್ಯರು ಬೆಲೆ ಏರಿಕೆಯಿಂದ ಸಂಕಷ್ಟದ ಜೀವನ ನಡೆಸುವಂತಾಗಿದೆ. ಕಾರಣ ಕೇಂದ್ರ ಸರಕಾರ ತಕ್ಷಣ ಬೆಲೆ ಏರಿಕೆಯನ್ನು ನಿಯಂತ್ರಿಸಿ ಜನಸಾಮಾನ್ಯರ ಬದುಕನ್ನು ಹಸನಗೊಳಿಸುವಂತೆ ಆಗ್ರಹಿಸಲಾಗಿದೆ.
ಈ ಬೆಲೆ ಏರಿಕೆಯ ವಿರುದ್ಧ ಅಖಿಲ ಭಾರತ ಕಾಂಗ್ರೇಸ್‌ ಪಕ್ಷ ಇಂದು ನೀಡಿದ ಸ್ವಯಂ ಪ್ರೇರಿತ ದೇಶಾದ್ಯಂತ ಬಂದ್‌ಗೆ ಮಂಕಿ ಮತ್ತು ಹೊನ್ನಾವರ ಬ್ಲಾಕ್‌ ಕಾಂಗ್ರೇಸ್‌ ಸಂಪೂರ್ಣ ಬೆಂಬಲ ನೀಡುತ್ತಿದೆ. ಮತ್ತು ಅತೀ ಶೀಘ್ರ ಅಗತ್ಯ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕೇಂದ್ರದ ಬಿ.ಜೆ.ಪಿ. ಸರಕಾರ ಕಡಿಮೆ ಮಾಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ಎನ್‌. ತೆಂಗೇರಿ ಮನವಿ ಪತ್ರವನ್ನು ಸಂಪೂರ್ಣ ಓದಿ ತಹಶೀಲ್ದಾರರಿಗೆ ನೀಡಿದರು. ಮಂಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ ಕೇಂದ್ರದ ಮೋದಿ ಸರಕಾರದ ನಿಲುವನ್ನು ಖಂಡಿಸಿದರು. ಇದಕ್ಕೂ ಮೊದಲೂ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ನಗರದ ಕೆಲವೆಡೆ ತೆರಳಿ ಸ್ವಯಂ ಪ್ರೇರಿತ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಉಪಾಧ್ಯಕ್ಷ ಲಲಿತಾ ಆಯ್‌. ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಎನ್‌. ಸುಬ್ರಹ್ಮಣ್ಯ, ಪಕ್ಷದ ಹಿರಿಯ ಮುಖಂಡರಾದ ವನಿತಾ ನಾಯ್ಕ ಮಂಕಿ, ಅಣ್ಣಪ್ಪ ನಾಯ್ಕ, ಹಿಂದುಳಿದ ವರ್ಗ ಕಾಂಗ್ರೆಸ್‌ ವಿಭಾಗದ ಗಣಪಯ್ಯ ಗೌಡ, ಅಲ್ಪಸಂಖ್ಯಾತ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹುಸೇನ್‌ ಖಾದ್ರಿ. ಪಿ. ಎಲ್‌.ಡಿ. ಬ್ಯಾಂಕ್‌ ಅಧ್ಯಕ್ಷ ಯೋಗೇಶ ರಾಯ್ಕರ್‌, ರಾಜು ನಾಯ್ಕ ಮಂಕಿ, ಜಿಲ್ಲಾ ಕಾಂಗ್ರೆಸ್‌ನ ವಾಮನ ನಾಯ್ಕ, ಬಾಲು ನಾಯ್ಕ, ಮುಸಾ ಅಣ್ಣಿಗೇರಿ, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ, ಗಜು ನಾಯ್ಕ, ಮಾಜಿ ತಾ. ಪಂ. ಅಧ್ಯಕ್ಷ ಅಣ್ಣಯ್ಯ ನಾಯ್ಕ, ಪಟ್ಟಣ ಪಂಚಾಯತ ಸದಸ್ಯ ತುಳಸಿದಾಸ ಪುಲ್ಕರ, ಚಂದ್ರಶೇಖರ ಚಾರೋಡಿ, ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ವಿನಾಯಕ ಶೇಟ್‌, ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ರಾಜ್ಯ ಮೀನುಗಾರರ ಕಾಂಗ್ರೇಸ್‌ ಕಾರ್ಯದರ್ಶಿ ಅಜಿತ್‌ ತಾಂಡೇಲ್‌ ಇನ್ನೂ ನೂರಾರು ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.

loading...