ಸೆ.8ಕ್ಕೆ ತಾಲೂಕಾ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ

0
20

ಕನ್ನಡಮ್ಮ ಸುದ್ದಿ-ಕಾರವಾರ: ಕಾರವಾರ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಸೆಪ್ಟಂಬರ್ 8 ರಂದು ಕಾರವಾರ ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಲು ಸಮ್ಮತಿ ಸೂಚಿಸಿದ್ದಾರೆ.
ಶಾಸಕಿ ರೂಪಾಲಿ ಅವರ ಜೊತೆ ತಾಲೂಕಿನ ಪರಿಷತ್ತನ ಹಿರಿಯ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದೇ ಅ.1 ರಂದು ಸುಧೀರ್ಘವಾಗಿ ಚರ್ಚೆ ನಡೆಸಿ ಸಮ್ಮೇಳನದ ರೂಪರೇಶೆಗಳ ಬಗ್ಗೆ ಸಮಾಲೋಚಿಸಲಾಯಿತು. ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಸಹ ಚರ್ಚಿಸಲಾಯಿತು. ಕಾರವಾರ ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಜೊತೆ ಚರ್ಚಿಸಿ ಸದ್ಯದಲ್ಲೇ ಘೋಷಿಸಲಾಗುವುದೆಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿರುವ ಹಾಗೂ ಎಲೆಮರೆಯ ಕಾಯಂತಿರುವವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಹಾಗೂ ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳಿಸಿದ ಎಸ್. ಎಸ್. ಎಲ್. ಸಿ. ಹಾಗೂ ಪಿಯು ವಿಭಾಗದಿಂದ ತಲಾ ಒಬ್ಬೊಬ್ಬ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರಿ ಕನ್ನಡ ಶಾಲೆಗಳ ಉಳಿವು ಹಾಗೂ ಗಡಿಭಾಗದ ತಾಲೂಕಿನ ಸಮಸ್ಯೆಗಳತ್ತ ರಾಜ್ಯ ಸರ್ಕಾರದ ಗಮನಸೆಳೆಯುವುದು ಸಮ್ಮೇಳನದ ಕೇಂದ್ರ ಉದ್ದೇಶವನ್ನಾಗಿಸಿಕೊಳ್ಳಲಾಗಿದೆ. ಅಲ್ಲದೇ ಸಮ್ಮೇಳನದ ರೂಪರೇಶೆ ಕುರಿತಂತೆ ಕಳೆದ ಜನೇವರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಿದಂತೆ ವಿಚಾರ ಸಂಕಿರಣದಲ್ಲಿ ಸಮಾಜಿಕ ಜಾಲತಾಣದಲ್ಲಿ ಕನ್ನಡ, ಬಹುಸಂಸ್ಕøತಿಯ ಬೀಡು ಕಾರವಾರ ಕುರಿತು ಪ್ರಜ್ಞಾರಿಂದ ವಿಚಾರಗೋಷ್ಠಿ, ಸಂವಾದ ಹಾಗೂ ಕವಿಗೋಷ್ಠಿ ಇರಲಿವೆ. ಸಮ್ಮೇಳನದ ಉದ್ಘಾಟನೆಗೆ ಕನ್ನಡದ ಖ್ಯಾತ ಬರಹಗಾರರು, ಸೇರಿದಂತೆ ಚಿತ್ರರಂಗದ ಮೂಲಕ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಯಿತು ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ ತಿಳಿಸಿದ್ದಾರೆ. ಶಾಸಕರ ಜೊತೆ ಚರ್ಚಿಸುವ ಸಂದರ್ಭದಲ್ಲಿ ಕಸಾಪ ಹಿರಿಯ ಸದಸ್ಯ ನಜೀರ್ ಅಹಮ್ಮದ್ ಯು.ಶೇಖ್, ದೀಪಕ್ ಕುಮಾರ್ ಶೆಣ್ವೆ, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ದೀಪಕ್ ಗೋಕರ್ಣ, ಮಂಜು ಕಡತೋಕ, ಉದಯ್ ಬರ್ಗಿ,ಗಿರೀಶ್ ನಾಯ್ಕ, ದರ್ಶನ್ ನಾಯ್ಕ, ರಾಜೇಶ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...