ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ವಿಕ್ರಮಾರ್ಜುನ ತಿಂಗಳೆ

0
20

ಕನ್ನಡಮ್ಮ ಸುದ್ದಿ-ಕಾರವಾರ: ಉತ್ತರ ಕನ್ನಡ ಜಿಲ್ಲೆಯ 3 ನಗರಸಭೆ, 3 ಪುರಸಭೆ, 2 ಪಟ್ಟಣ ಪಂಚಾಯತ್‍ಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವುದಾಗಿ ಬಿಜೆಪಿ ಹಿರಿಯ ಮುಖಂಡ ವಿಕ್ರಮಾರ್ಜುನ ತಿಂಗಳೆ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಮಾತನಾಡಿದ ತಿಂಗಳೆ ಪ್ರತಿ ವಾರ್ಡಗೆ 4 ಜನ ಆಕಾಂಕ್ಷಿಗಳು ಟಿಕೆಟ್ ಬಯಸಿ ಪಕ್ಷದ ಬಳಿ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ ಟಿಕೆಟ್ ಆಕಾಂಕ್ಷಿಗಳನ್ನು ಪರಿಶೀಲಿಸಿ ಟಿಕೆಟ್ ನೀಡಬೇಕಾಗುತ್ತದೆ. ಕಾಂಗ್ರೆಸ್ ಪರ ಕೆಲಸ ಮಾಡಿದವರಿಗೆ ಕೊನೆಯ ಹಂತದಲ್ಲಿ ಬಿಜೆಪಿಗೆ ಬಂದು ಟಿಕೆಟ್ ಕೇಳಿದವರಿಗೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಟಿಕೆಟ್ ನೀಡುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಲಾಗುವುದಿಲ್ಲ ಎಂದು ತಿಂಗಳೆ ಸ್ಪಷ್ಟಪಡಿಸಿದರು. ಬಿಜೆಪಿ ಶಾಸಕರು ಆರಿಸಿ ಬಂದ ಮೇಲೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ ಎಂದು ಕಾರವಾರದಲ್ಲಿ ಬುಧುವಾರ ಮಾಡಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸ್ಥಳೀಯ ಸಂಸ್ಥೆಗಳಿಗೆ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ನಡೆಯಲಿದೆ. ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್ ಮತ್ತು ಹಳಿಯಾಳದಲ್ಲಿ ಸುನೀಲ್ ನಾಯ್ಕ ಸ್ಥಳೀಯ ಸಂಸ್ಥೆಗಳ ನಾಯಕತ್ವ ವಹಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ ಹಾಗೂ ರವಿಕುಮಾರ್ ನೇತೃತ್ವದ ಕಮಿಟಿ ಉಸ್ತುವಾರಿ ವಹಿಸಲಿದೆ. ಈ ಸಮಿತಿ ಅ.14 ರಂದು ಯಲ್ಲಾಪುರಕ್ಕೆ ಬಂದು ಪಕ್ಷದ ಸಭೆಯಲ್ಲಿ ಭಾಗವಹಿಸಲಿದೆ. ಆಗ ಸ್ಥಳೀಯ ಮುಖಂಡರ ಶಾಸಕರ ಅಭಿಪ್ರಾಯಪಡೆದು, ಟಿಕೆಟ್ ನೀಡಿಕೆಯ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದರು. ಪಕ್ಷ ನಿಷ್ಠರಿಗೆ ಹೆಚ್ಚು ಒತ್ತು ನೀಡಲಾಗುವುದು. ಪಕ್ಷ ವಿರೋಧಿಗಳನ್ನು ನಿಭಾಯಿಸುವ ಕಲೆ ಪಕ್ಷಕ್ಕೆ ಗೊತ್ತಿದೆ ಎಂದು ತಿಂಗಳೆ ಹೇಳಿದರು. ಪಕ್ಷಕ್ಕೆ ಭಾರೀ ಬಲ ಬಂದಿದೆ. ಜನರು ಹೆಚ್ಚು ಹೆಚ್ಚು ಬಿಜೆಪಿ ಮೇಲೆ ಒಲವು ತೋರುತ್ತಿದ್ದಾರೆ. ಕರಾವಳಿ ಮಾತ್ರವಲ್ಲ ರಾಜ್ಯದಲ್ಲಿ ನಾವು 104 ಸ್ಥಾನ ಪಡೆದು ಪ್ರಬಲ ವಿರೋಧ ಪಕ್ಷವಾಗಿದ್ದೇವೆ ಎಂದರು. ಪಕ್ಷ ಅಂದ ಮೇಲೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ. ಭಟ್ಕಳದಲ್ಲಿ ಬಿಜೆಪಿ ಶಾಸಕರು ಮತ್ತು ಪಕ್ಷದ ಮುಖಂಡರ ಮಧ್ಯೆ ಭಿನ್ನಾಭಿಪ್ರಾಯ ಸರಿಪಡಿಸಲಾಗಿದೆ. ಅಲ್ಲಿನ ಪ್ರತಿಷ್ಠಿತ ಬ್ಯಾಂಕ್ ಚುನಾವಣೆಗಳಿವೆ. ಅವೇನು ಪಕ್ಷದ ಚಿಹ್ನೆಯಲ್ಲಿ ನಡೆಯಲ್ಲ. ಹಾಲಿ ಶಾಸಕರು ಹಿಂದೆ ಸ್ಥಳೀಯ ಬ್ಯಾಂಕ್‍ವೊಂದರ ನಿರ್ದೇಶಕರಾಗಿದ್ದರು. ಅಲ್ಲಿ ಸಹಜವಾಗಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವ ಆಕಾಂಕ್ಷೆ ಇರುತ್ತದೆ. ಇವನ್ನೆಲ್ಲಾ ಪಕ್ಷ ನಿಭಾಯಿಸುತ್ತದೆ ಎಂದರು. ಶಾಸಕಿ ರೂಪಾಲಿ ನಾಯ್ಕ. ಪಕ್ಷದ ಪದಾಧಿಕಾರಿಗಳಾದ ರಾಜೇಶ್ ನಾಯ್ಕ, ಗಣಪತಿ ಉಳ್ವೇಕರ್, ಭಾಸ್ಕರ್ ನಾರ್ವೇಕರ,ಮನೋಜ್ ಭಟ್,ಕಿಶನ್ ಕಾಂಬಳೆ ಇದ್ದರು.

loading...