ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸೈಲ್

0
18

ಕನ್ನಡಮ್ಮ ಸುದ್ದಿ-ಕಾರವಾರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಸ್ವತಂತ್ರವಾಗಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರವಾರ ನಗರಸಭೆ ಮತ್ತು ಅಂಕೋಲಾ ಪುರಸಭೆ ಚುನಾವಣೆಗೆ ಸಚಿವ ದೇಶಪಾಂಡೆ ಮಾರ್ಗದರ್ಶನದಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಪ್ರತಿ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಬೇರೆ ಬೇರೆ ಪಕ್ಷಗಳಿಂದಲೂ ಬೇಸತ್ತು ಕಾರ್ಯಕರ್ತರು ಕಾಂಗ್ರೆಸ್‍ಗೆ ಬರುತ್ತಿದ್ದು ಅವರೆಲ್ಲರನ್ನೂ ಸ್ವಾಗತಿಸಿಕೊಳ್ಳುತ್ತಿದ್ದೇವೆ. ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಂತೂ ಹೊಂದಾಣಿಕೆ ಇಲ್ಲವೇ ಇಲ್ಲ. ಕ್ಷೇತ್ರದ ಅಭಿವೃದ್ಧಿ ನನ್ನ ಧ್ಯೇಯವಾಗಿದ್ದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಮಂಜೂರಿಸಿಕೊಂಡು ಬರುತ್ತೇನೆ ಎಂದರು. ಕಾಂಗ್ರೇಸ್ ಧುರೀಣ ಸಂಜಯ ಸಾಳುಂಕೆ ಮಾತನಾಡಿ ಜಾತ್ಯತೀತ ಜನತಾ ದಳಕ್ಕೆ ಕಾರವಾರ-ಅಂಕೋಲಾದಲ್ಲಿ ನಾಯಕತ್ವವಿಲ್ಲ.

ಆ ಪಕ್ಷದಲ್ಲಿರುವ ಕಾರ್ಯಕರ್ತರೆಲ್ಲ ದಿನ ಕಳೆದಂತೆ ಬೇಸರಕ್ಕೊಳಗಾಗಿದ್ದು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ ಎಂದರು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಸಂತೋಷ ಮಾಳ್ಸೇಕರ್ ಮಾತನಾಡಿ ಕಳೆದ 33 ವರ್ಷಗಳಿಂದಲೂ ಜನತಾದಳಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಆದರೆ ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗೆಳು ಬೇಸರ ತರಿಸಿವೆ. ಹೀಗಾಗಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ. ಇನ್ನುಮುಂದೆ ಕಾಂಗ್ರೆಸ್‍ನಲ್ಲೆ ನಿಷ್ಠೆಯಿಂದ ದುಡಿಯುತ್ತೇನೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಕೆಡಿಎ ಮಾಜಿ ಅಧ್ಯಕ್ಷ ಅಶೋಕ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ವಾತಿ ದೇಸಾಯಿ ಉಪಸ್ಥಿತರಿದ್ದರು.

loading...