ಸ್ಥಾನ ಹಂಚಿಕೆಯಲ್ಲಿ ವೈಯಕ್ತಿಕ ಪ್ರತಿಷ್ಠೆ ಇಲ್ಲ- ದಿನೇಶ್ ಗುಂಡೂರಾವ್

0
5

ಬೆಂಗಳೂರು:-ಮೈತ್ರಿ ಪಕ್ಷಗಳಲ್ಲಿ ಸ್ಥಾನ ಹಂಚಿಕೆ ವಿಚಾರದಲ್ಲಿ ಯಾರಲ್ಲಿಯೂ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಈಗಾಗಲೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧವಿದ್ದು, ಜೆಡಿಎಸ್‍ಗೆ ಈಗಲೇ ಎಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುವ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೊನೆಯ ಕ್ಷಣದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಸೇರಿದಂತೆ ಹಾಲಿ ಸಂಸದರ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬಾರದೆಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ. ಮೈತ್ರಿ ಮಾಡಿಕೊಳ್ಳುವ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಯಿಲ್ಲ.ಮಂಡ್ಯದಲ್ಲಿ ಜೆಡಿಎಸ್‍ ಪಕ್ಷದಿಂದ ಹಾಲಿ ಸಂಸದರಿರುವ ಕಾರಣ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ. ಸ್ಥಳೀಯವಾಗಿ ಎರಡೂ ಪಕ್ಷದಲ್ಲಿ ಕೆಲ ಭಿನ್ನಾಭಿಪ್ರಾಯಗಳಿದ್ದು, ಅದನ್ನು ಸರಿಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.

ದಿ.ನಟ ಅಂಬರೀಷ್ ಅವರ ಬಗ್ಗೆ ಪಕ್ಷಕ್ಕೆ ಅಪಾರ ಗೌರವವಿದೆ. ಹಾಗೆಯೇ ಸುಮಲತಾ, ಅಭೀಷೇಕ್ ಅವರು ರಾಜಕೀಯವಾಗಿ ಬೆಳೆಯಬೇಕೆಂಬ ಇಚ್ಛೆಯೂ ಇದೆ. ಹೀಗಿದ್ದರೂ ಸಹ ಈ ಬಾರಿ ಸುಮಲತಾ ಅವರನ್ನು ಮಂಡ್ಯದಲ್ಲಿ ಬೆಂಬಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದಿಂದ ಅವರನ್ನು ಬೆಂಬಲಿಸಬಹುದೇನೋ ಎಂದು ಅವರು ಮಾರ್ಮಿಕವಾಗಿ ನುಡಿದರು.
ಮಾರ್ಚ್ 16 ರಂದು ಕೇಂದ್ರ ಚುನಾವಣಾ ಪರಿಶೀಲನಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗುವುದು. ಇದೇ 18 ರಂದು ಕಲಬುರಗಿಯಲ್ಲಿ ಪರಿವರ್ತನಾ ಸಮಾವೇಶ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ನಂತರ ಬೆಂಗಳೂರಿನಲ್ಲಿಯೂ ಸಮಾವೇಶ ನಡೆಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

loading...