ಸ್ವಚ್ಛತಾ ಕಾರ್ಯಕ್ರಮದಲ್ಲಿ ಸರ್ವರಿಗೂ ಭಾಗವಹಿಸಲು ಸೂಚನೆ

0
19

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಸೂಕ್ತ ಕಾರ್ಯಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸೋಮವಾರ ನಡೆದ ಪುರಸಭೆ ವಿಶೇಷ ಸಾಮನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.
ಆಗಸ್ಟ್‌ 1 ರಿಂದ ಸ್ವತಂತ್ರ ದಿನಾಚರಣೆಯ ಮುಂಚಿನ ದಿನದವರೆಗೆ ಹಳಿಯಾಳ ಪಟ್ಟಣದಾದ್ಯಂತ ಸ್ವಚ್ಛತಾ ಪಾಕ್ಷಿಕವನ್ನು ಆಚರಿಸಲು ಸರ್ವರ ಸಹಕಾರ ಪಡೆಯುವುದು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳ ಸಿಬ್ಬಂದಿ ಸಕ್ರೀಯರಾಗಿ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸುವಂತೆ ಕೋರುವ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮುಖ್ಯಾಧಿಕಾರಿ ಕೇಶವ ಚೌಗುಲೆ ಅವರಿಗೆ ಸೂಚಿಸಿದರು.
ಸ್ವಚ್ಛತಾ ಶ್ರಮದಾನಕ್ಕೆ ಪುರಸಭೆಗೆ ನೀಡಲಾಗುವ ಸಲಕೆ, ಬುಟ್ಟಿ ಮೊದಲಾದ ಪರಿಕರಗಳಿಗಾಗಿ ಸಾಕಷ್ಟು ಮೊತ್ತ ವಿನಿಯೋಗಿಸಲಾಗುತ್ತದೆ. ಹೀಗಾಗಿ ಆ ಸಲಕರಣೆಗಳು ಮರಳಿ ಪುರಸಭೆಗೆ ಲಭ್ಯವಾಗುವಂತೆ ಸೂಕ್ತ ನಿಗಾವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಕಾಮಗಾರಿಗಳು ಕಳಪೆಯಾಗದಂತೆ ನಿಗಾ ವಹಿಸಬೇಕು, ಅಂತಹ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ಮೇಲೆ ಕ್ರಮವಾಗಬೇಕು ಎಂದು ಸಭೆಯಲ್ಲಿ ಆಗ್ರಹಗಳು ಕೇಳಿ ಬಂದವು. ಆಡಳಿತ ಸದಸ್ಯ ಸತ್ಯಜೀತ ಗಿರಿ ಮಾತನಾಡುತ್ತಾ ಹಲವಾರು ಸಭೆಗಳಲ್ಲಿ ಉಲ್ಲೇಖಿಸಿದ ಹಲವಾರು ವಿಷಯಗಳು, ಚರ್ಚೆಗಳು, ಪ್ರಸ್ತಾಪಗಳು ಅನುಷ್ಠಾನವೇ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಪಕ್ಷದ ನಾಯಕ ಹಾಗೂ ಹಿರಿಯ ಮುಖಂಡ ಶ್ರೀಕಾಂತ ಹೂಲಿ ಮಾತನಾಡುತ್ತಾ ತಾವು ಹಾಗೂ ಸುಬಾನಿ ಹುಬ್ಬಳ್ಳಿ ಇವರು ಪ್ರತಿನಿಧಿಸುತ್ತಿರುವ ವಾರ್ಡ್‌ಗಳ ಮನೆಗಳಿಗೆ ಇನ್ನೂವರೆಗೂ ಕಸ ನೀಡುವ ಬಕೆಟ್‌ಗಳನ್ನು ನೀಡಲಾಗಿಲ್ಲ. ಹೀಗಾಗಿ ಕಸದ ಬಕೆಟ್‌ಗಳನ್ನು ಶೀಘ್ರ ನೀಡುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅರುಣ ಬೋಬಾಟಿ, ಸ್ಥಾಯಿ ಸಮಿತಿ ಚೇರಮನ್‌ ಗಾಯತ್ರಿ ನೀಲಜಕರ ವೇದಿಕೆಯಲ್ಲಿದ್ದರು. ಈ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಸುರೇಶ ತಳವಾರ, ಮಹೇಶ ಮಿಂಡೋಳ್ಕರ, ಸುಬಾನಿ ಹುಬ್ಬಳ್ಳಿ, ಶ್ರೀದೇವಿ ಯಡೋಗಿ, ಪ್ರೇಮಾ ತೋರಣಗಟ್ಟಿ, ಮಾಧವಿ ಬೆಳಗಾಂವಕರ, ರಿಯಾನಾ ಬೆಟಗೇರಿ, ಮಾಲಾ ಬೃಗಾಂಜಾ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಇಂಜಿನೀಯರ್‌ ಹರೀಶ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

loading...