ಸ್ವಯಂ ರಕ್ತದಾನ ಮಾಡಿ ರಕ್ತದಾನ ಶಿಬಿರ ಉದ್ಘಾಟಿಸಿದ ಜಿಪಂ ಸಿಇಓ ರೋಶನ್

0
28

ಕನ್ನಡಮ್ಮ ಸುದ್ದಿ-ಕಾರವಾರ: ರಕ್ತದಾನ ಅತ್ಯಂತ ಶ್ರೇಷ್ಠ ದಾನಗಳಲ್ಲೊಂದು. 18 ವರ್ಷ ಮೇಲ್ಪಟ್ಟ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ಸದಾ ರಕ್ತದಾನಕ್ಕೆ ಮುಂದೆ ಬರಬೇಕು. ಇದರಿಂದ ಉತ್ತರ ಆರೋಗ್ಯ ಹೊಂದಲು ಸಹ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಶನ್ ಹೇಳಿದರು.
ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್, ಕಾರವಾರ ಲಯನ್ಸ್ ಕ್ಲಬ್ ಕಾರವಾರ ಹಾಗೂ ಜಿಲ್ಲಾ ಆಸ್ಪತ್ರೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಛತ್ತೀಸ್‍ಗಡದ ಬಸ್ತರ್ ವಿಭಾಗದ ಕಾಕೇರ್‍ದಲ್ಲಿ ಮಾವೋವಾದಿಗಳ ಬಾಂಬ್ ಸ್ಪೋಟಕ್ಕೆ ಸಾವನ್ನಪ್ಪಿದ ಕಾರವಾರದ ವೀರ ಯೋಧ ವಿಜಯಾನಂದ ನಾಯ್ಕ, ಕ್ವಿಟ್ ಇಂಡಿಯಾ ಚಳುವಳಿ, ಆಝಾದ್ ಯುಥ್ ಕ್ಲಬ್‍ನ ಸಂಸ್ಥಾಪಕರ ದಿನಾಚರಣೆ ಹಾಗೂ ಜಿನಿವಾ ಒಪ್ಪಂದದ ಸ್ಮರಣಾರ್ಥ ಹಮ್ಮಿಕೊಂಡ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯುವಜನರು ರಕ್ತದಾನ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದ ಅವಶ್ಯಕತೆ ಇರುವವರಿಗೆ ರಕ್ತವನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ ಅನೇಕ ಜೀವಗಳು ಉಳಿಯುತ್ತವೆ. ರಕ್ತದಾನ ಮಾಡುವ ಅವಕಾಶ ಸಿಕ್ಕಿದಾಗ ಅದರ ಸದುಪಯೋಗವನ್ನು ಪಡೆದುಕೊಂಡು ರಕ್ತದಾನಕ್ಕೆ ಸದಾ ಮುಂದೆ ಬನ್ನಿ ಎಂದು ಅವರು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಶಿವಾನಂದ ಕುಡ್ತರ್‍ಕರ್ ಮಾತನಾಡಿ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಆದ್ದರಿಂದ ನಿರ್ಭಿತರಾಗಿ ರಕ್ತದಾನ ಮಾಡಿ ಎಂದರು. ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮತ್ತು ರಕ್ತದಾನಿ ನಜೀರ್ ಅಹಮದ್ ಯು.ಶೇಖ್, ಲಯನ್ಸ್ ಕ್ಲಬ್ ಕಾರವಾರದ ಅಧ್ಯಕ್ಷ ಲ.ಸಮೀರ್ ಸಕ್ಸೇನ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಜಿಪಂ ಸಿಇಒ ಎಮ್.ರೋಶನ್ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಉಪಾನ್ಯಾಸಕರಾದ ಸುರೇಶ ಬಿ.ಗುಡ್ಡಿಮನಿ, ಡಾ.ಬಿ.ಆರ್.ತೋಳೆ, ಹರೀಶ ಕಾಮತ, ವಿದ್ಯಾರ್ಥಿಗಳಾದ ಅಜಿತ್ ಎಮ್.ರಾಣೆ, ಬಿ.ಎಮ್.ರಕ್ಷತ್, ನವೀನ್ ಕರೂರ್, ಶಾಬಾದ್ ಖಾನ್, ತೌಫೀಕ್ ಶೇಖ್, ಶಾಮನಾಥ ವಾಯ್.ಎಮ್, ಜ್ಯೋತಿಬಾ ಚಿಂಚಣ್‍ಕರ್, ಮನು ಜಿ. ಎಮ್, ಇಸಿರಾಮ್ ಕಾಳೆ, ಸೈರಬ್ ನಾಯ್ಕ ಮತ್ತು ನಾಗರಾಜ ಆರ್.ದುರ್ಗೇಕರ್ ಕ್ರಮವಾಗಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ರಕ್ತದಾನದ ಸಂದೇಶ ಸಾರುವ ಟಿ-ಶರ್ಟಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಭಾರತೀಯ ರೆಡ್ ಕ್ರಾಸ್‍ನ ಫೈರೋಜಾ ಬೇಗಂ ಶೇಖ್ ಸ್ವಾಗತಿಸಿದರು. ಕೊನೆಯಲ್ಲಿ ಕಲ್ಲೂರ್ ಟ್ರಸ್ಟ್‍ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್ ವಂದಿಸಿದರು.

loading...