ಹಾಳು ಕೊಂಪೆಯಾದ ಬಸ್‌ ತಂಗುದಾಣ: ಪ್ರಯಾಣಿಕರ ಪರದಾಟ

0
21

ಕನ್ನಡಮ್ಮ ಸುದ್ದಿ-ನರಗುಂದ: ಗ್ರಾಮೀಣ ಭಾಗದ ಜನತೆ ಬೇರೆ ಊರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಅವರಿಗೆ ಅನುಕೂಲ ಕಲ್ಪಿಸಲು ಕಳೆದ 30 ವರ್ಷಗಳ ಹಿಂದೆ ತಾಲೂಕಿನ ಅನೇಕ ಕಡೆಗಳ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬದುವಿನಲ್ಲಿ ಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ಈಗ ಈ ಬಸ್‌ ನಿಲ್ದಾಣ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.
ಜಿಪಂ ಇಲಾಖೆಯಿಂದ ಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ತಾಲೂಕಿನ ಚಿಕ್ಕನರಗುಂದ, ಸಂಕದಾಳ, ಭೈರನಹಟ್ಟಿ ಮತ್ತು ಹದ್ಲಿ ಹಾಗು ಹಿರೇಕೊಪ್ಪ ಗ್ರಾಮದ ಬಳಿಯಲ್ಲಿ ಇಂತಹ ತಂಗುದಾಣಗಳನ್ನು ನಿರ್ಮಿಸಲಾಗಿತ್ತು. ಆದರೆ ಅವುಗಳು ದುರಸ್ತಿಕಾಣದೇ ಅವಸಾನದ ಅಂಚಿನಲ್ಲಿವೆ. ಕೆಲವಡೆಗಳಲ್ಲಿಯ ತಂಗುದಾಣಗಳು ಒಳ ಭಾಗದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹಾಕಿದ್ದ ಕಲ್ಲು ಕಟ್ಟೆಗಳು ಒಡೆದುಹಾಳಾಗಿವೆ. ಇನ್ನು ಕೆಲವಡೆಗಳಲ್ಲಿ ಇದ್ದ ತಂಗುದಾನಗಳಲ್ಲಿಯ ಕಿಟಕಿ ಮತ್ತು ಇತರ ವಸ್ತುಗಳು ಹಾಳಾಗಿವೆ. ಆದರೆ ಜಿಪಂ ಇಂಜನೀಯರಿಂಗ್‌ ವಿಭಾಗದ ಅಧಿಕಾರಿಗಳು ತಾಪಂ ಅನುದಾನದಲ್ಲಿ ದುರಸ್ತಿಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರೂ ಕೂಡಾ ವಾಸ್ತವಿಕತೆಯಲ್ಲಿ ತಂಗುದಾಣಗಳ ದುರಸ್ತಿಯೇ ಆಗಿಲ್ಲ.
ಹೀಗಾಗಿ ಗ್ರಾಮದಿಂದ ಬೇರೆ ಕಡೆಗೆ ತೆರಳುವ ಪ್ರಯಾಣಿಕರು ಬಸ್‌ಗಾಗಿ ತಂಗುದಾನದಲ್ಲಿ ಕುಳಿತು ಕಾಯದೇ ಹೊರಗಡೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದ.
ಡಿ.ಕೆ. ನಾಯ್ಕರ್‌ ಸಂಸದರಾಗಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಸುಮಾರು 2 ಲಕ್ಷರೂ. ದಲ್ಲಿ ಹಾಗೂ ವಿಜಯ ಸಂಕೇಶ್ವರ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ತಾಲೂಕಿನ ಕೆಲವಡೆಗಲ್ಲಿ 2 ರಿಂದ 5 ಲಕ್ಷರೂ ಸಂಸದರ ಅನುದಾನದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿತ್ತು. ಆಗಿನ ಸಂದರ್ಭದಲ್ಲಿ ಜಿಪಂ ಈ ಎಲ್ಲ ತಂಗುದಾಣಗಳನ್ನು ನಿರ್ಮಿಸಿತ್ತು.
ಈ ಕುರಿತು ಕೆಎಸ್‌ಆರ್‌ಟಿಸಿ ಕಟ್ಟಡ ವಿಭಾಗದ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುಮದಾರ ಅವರನ್ನು ಕೇಳಿದರೆ ತಂಗುದಾಣಗಳ ನಿರ್ವಹಣೆ ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ. ನರಗುಂದ ತಾಲೂಕಿನಲ್ಲಿ ಸುಮಾರು 30 ವರ್ಷಗಳ ಹಿಂದೆ ಬಸ್‌ ತಂಗುದಾಣಗಳನ್ನು ಆಯಾ ಗ್ರಾಮ ಪ್ರದೇಶದ ಬಳಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಜಿಪಂದಿಂದ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಇದು ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ. ಸಂಬಂಧಿಸಿದ ಜಿಪಂ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಿ ಎಂದರು.
ಜಿಪಂ ಇಂಜನೀಯರಿಂಗ್‌ ವಿಭಾಗದ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅನಿಲ್‌ಕುಮಾರ ವಿವರ ನೀಡಿ, ತಂಗುದಾನಗಳನ್ನು ಕಳೆದ 20 ರಿಂದ 30 ವರ್ಷದ ಹಿಂದೆ ತಾಲೂಕಿನ ಅನೇಕ ಕಡೆಗಳಲ್ಲಿ ನಿರ್ಮಿಸಲಾಗಿದೆ. ಆಗಿನ ಸಂಸದರ ಅನುದಾನದಲ್ಲಿ ಅವುಗಳನ್ನು ನಿರ್ಮಿಸಲಾಗಿತ್ತು. ಸಧ್ಯದ ಸ್ಥಿತಿಯಲ್ಲಿ ಹಿರೇಕೊಪ್ಪ ಮತ್ತು ಹದ್ಲಿ ಭೈರನಹಟ್ಟಿ ಗ್ರಾಮದ ಬಳಿಯಲ್ಲಿಯ ತಂಗುದಾಣಗಳನ್ನು ತಾಪಂ ಅನುದಾನದಲ್ಲಿ ದುರಸ್ತಿಮಾಡಲಾಗಿದೆ. ಕಳೆದ ಎರಡು ವರ್ಷದ ಹಿಂದೆ ದುರಸ್ತಿ ಮಾಡಲಾಗಿದೆ. ಇನ್ನು ಉಳಿದವುಗಳನ್ನು ತಾಪಂ ಅನುದಾನ ಬಳಿಸಿ ದುರಸ್ತಿಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಆಯಾ ತಾಪಂ ಸದಸ್ಯರಿಗೂ ಮಾಹಿತಿ ನೀಡಲಾಗಿದೆ. ಹಾಗೂ ತಾಪಂ ಅಧಿಕಾರಿಗಳಿಗೆ ವಿವರವಾದ ಮಾಹಿತಿಯನ್ನು ಕಳೆದ ಎರಡು ತಿಂಗಳ ಹಿಂದೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ವಾಸ್ತವಿಕತೆಯಲ್ಲಿ ತಂಗುದಾನಗಳು ದುರಸ್ತಿಗೊಂಡಿಲ್ಲ.

loading...