ಹಿಂದಿ ದಿವಸ ರದ್ದುಗೊಳಿಸಲು ಕರವೇ ಆಗ್ರಹ

0
4

 ಬೆಳಗಾವಿ, 15- ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಎಲ್ಲ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುತ್ತಿರುವ ಕ್ರಮವನ್ನು ಖಂಡಿಸಿ ಕರವೇ ಕಾರ್ಯಕರ್ತರು ನಗರದಲ್ಲಿಂದು ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿ ಪ್ರತಿಭಟಿಸಿದರು.

ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ಹಿಂದಿ ಭಾಷೆಯನ್ನು ಹೇರುವುದರ ಜೊತೆಗೆ ರಾಜ್ಯ ಮಟ್ಟದ ಸರ್ಕಾರಿ ಕಛೇರಿಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯುವಂತೆ ಕೇಂದ್ರ ದಬ್ಬಾಳಿಕೆ ನಡೆಸಿದೆ. ಕೇಂದ್ರ ಸರ್ಕಾರ ಹಿಂದಿಯನ್ನು ತುರುಕಿ ಪ್ರಾದೇಶಿಕ ಭಾಷೆಗಳು ಸಾಯುವಂತೆ ಕ್ರಮ ಕೈಗೊಂಡಿದ್ದು, ಕೇಂದ್ರ ಕೂಡಲೇ ಸೆಪ್ಟೆಂಬರ್ 14 ರಂದು ನಡೆಸುವ ಹಿಂದಿ ದಿವಸ ಕಾರ್ಯಕ್ರಮವನ್ನು ರದ್ದು ಮಾಡಬೇಕೆಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು.

ರಾಷ್ಟ್ತ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಪಕ್ಷಗಳ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಹಿಂದಿಯನ್ನು ತಿಳಿದಿರಬೇಕೆಂಬ ನಿಯಮ ವಿಧಿಸಿ ದೇಶದ ಐಕ್ಯತೆಗೆ ಭಂಗ ತಂದಿವೆ.

ಹಿಂದಿಯನ್ನು ವಿರೋಧಿಸಿ ಹೋರಾಟ ನಡೆಸಿದ ತಮಿಳುನಾಡಿಗೆ ಕೇಂದ್ರ ಸರ್ಕಾರದ ಹಿಂದಿ ನಿಯಮ ಅನ್ವಯವಾಗುವುದಿಲ್ಲ. ಇದು ಕೇಂದ್ರದ ತಾರತಮ್ಯ ನೀತಿಯಾಗಿದ್ದು, ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಕೇಂದ್ರದ ಪ್ರಯತ್ನಕ್ಕೆ ಕರವೇ ನಿರಂತರವಾಗಿ ಹೋರಾಟ ನಡೆಸುತ್ತದೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಮಹಾದೇವ್ ತಳವಾರ, ಗಣೇಶ್ ರೋಕಡೆ, ರಾಜು ನಾಶಿಪುಡಿ, ಬಾಳೂ ಜಡಗಿ, ಗಜಾನನ್ ಶಿಂಗೆ, ಹೊಳೆಪ್ಪ ಸುಲದಾಳ, ಟಿ.ಶಾಂತಮ್ಮ, ಸುರೇಶ್ ಗವನ್ನವರ್, ಭೂಪಾಲ್ ಅತ್ತು, ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...