ಹಿಟ್‌ಮನ್ ಮತ್ತೊಂದು ಶತಕ: ಭಾರತದ ಹಿಡಿತದಲ್ಲಿ ಪಂದ್ಯ

0
6

ವಿಶಾಖಪಟ್ಟಣಂ:- ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತ ತಂಡ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ ಹಿಡಿತ ಸಾಧಿಸಿದೆ.
ದ್ವಿತೀಯ ಇನಿಂಗ್ಸ್‌‌ನಲ್ಲಿ ಆರಂಭಿಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ (127 ರನ್, 149 ಎಸೆತಗಳು) ದಾಖಲೆಯ ಶತಕ ಹಾಗೂ ಚೇತೇಶ್ವರ ಪೂಜಾರ (81 ರನ್, 148 ಎಸೆತಗಳು) ಅವರ ಅರ್ಧ ಶತಕದ ಬಲದಿಂದ ಟೀಮ್ ಇಂಡಿಯಾ 395 ರನ್ ಗುರಿಯನ್ನು ದಕ್ಷಿಣ ಆಫ್ರಿಕಕ್ಕೆ ನೀಡಿತು. ಬಳಿಕ, ಗುರಿ ಬೆನ್ನತ್ತಿದ ಪ್ರವಾಸಿ ತಂಡ, 9 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆೆ 11 ರನ್ ಗಳಿಸಿ ಆರಂಭಿಕ ಆಘಾತಕ್ಕೆೆ ಸಿಲುಕಿದೆ. ಇನ್ನೂ ಆಫ್ರಿಕಾ ಗೆಲುವಿಗೆ 384 ರನ್ ಅಗತ್ಯವಿದೆ.
ಇಲ್ಲಿನ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಶನಿವಾರ ಬೆಳಗ್ಗೆೆ ಎಂಟು ವಿಕೆಟ್ ಕಳೆದುಕೊಂಡು 385 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ 131.2 ಓವರ್‌ಗಳಲ್ಲಿ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 431 ರನ್ ಗಳಿಸಿತು. ಆ ಮೂಲಕ 71 ರನ್ ಹಿನ್ನಡೆ ಅನುಭವಿಸಿತು. ಆಫ್ರಿಕಾ ಪರ ಎಸ್. ಮುತ್ತುಸ್ವಾಮಿ 106 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 33 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಪರ ಅತ್ಯುತ್ತಮ ದಾಳಿ ನಡೆಸಿದ ಆರ್. ಅಶ್ವಿನ್ ಏಳು ವಿಕೆಟ್ ಪಡೆದು ಮಿಂಚಿದರು.
ಬಳಿಕ 71 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತದ ಪರ ಆರಂಭಿಕರಾಗಿ ಕಣಕ್ಕೆೆ ಇಳಿದ ಮಯಾಂಕ್ ಅಗರ್ವಾಲ್ ಹಾಗೂ ರೋಹಿತ್ ಶರ್ಮಾ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಕೇಶವ್ ಮಹರಾಜ್ ಬಿಡಲಿಲ್ಲ. ಪ್ರಥಮ ಇನಿಂಗ್ಸ್‌ ದಾಖಲೆಯ ದ್ವಿಶತಕ ಸಿಡಿಸಿದ ಅಗರ್ವಾಲ್ ಅವರು ದ್ವಿತೀಯ ಇನಿಂಗ್ಸ್‌‌ನಲ್ಲಿ ಕೇವಲ ಏಳು ರನ್‌ಗಳಿಗೆ ಸೀಮಿತರಾದರು.
ರೋಹಿತ್-ಪುಜಾರ ಜುಗಲ್‌ಬಂದಿ:
ತಂಡದ ಮೊತ್ತ 21 ರನ್ ಇರುವಾಗ ಜತೆಯಾದ ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ಜೋಡಿ ಅಮೊಘ ಬ್ಯಾಟಿಂಗ್ ಪ್ರದರ್ಶನ ತೋರಿತು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 171 ರನ್ ಗಳಿಸಿ ತಂಡದ ಮೊತ್ತವನ್ನು 200ರ ಸಮೀಪ ತಲುಪಿಸಿತು. ಮೊದಲ ಇನಿಂಗ್ಸ್‌‌ನಲ್ಲಿ ನಿರಾಸೆ ಮೂಡಿಸಿದ್ದ ಪೂಜಾರ ಎರಡನೇ ಇನಿಂಗ್ಸ್‌‌ನಲ್ಲಿ ಬಹಳ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದರು. 148 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 13 ಬೌಂಡರಿಯೊಂದಿಗೆ 81 ರನ್ ಗಳಿಸಿದರು.
ಸ್ಪೋಟಕ ಬ್ಯಾಟಿಂಗ್ ಮಾಡಿದ ಹಿಟ್‌ಮನ್ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ದಂಡಿಸಿದರು. 149 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ 127 ರನ್ ಗಳಿಸಿ ವೃತ್ತಿ ಜೀವನದ ಐದನೇ ಶತಕ ಪೂರೈಸಿದರು. ಎರಡೂ ಇನಿಂಗ್ಸ್‌‌ಗಳಲ್ಲಿ ಆರಂಭಿಕನಾಗಿ ಎರಡು ಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌‌ಮನ್ ಎನಿಸಿಕೊಂಡರು. ಅಲ್ಲದೇ ಟೆಸ್ಟ್‌ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತದ ಬ್ಯಾಟ್ಸ್‌‌ಮನ್ ಎಂಬ ಸಾಧನೆಗೆ ಭಾಜನರಾದರು.
ಸ್ಫೋಟಕ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 40 ರನ್, ನಾಯಕ ವಿರಾಟ್ ಕೊಹ್ಲಿ 31 ರನ್ ಹಾಗೂ ಅಜಿಂಕ್ಯಾ ರಹಾನೆ 27 ರನ್ ಗಳಿಸಿದರು. ಒಟ್ಟಾರೆ, ಭಾರತ 67 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆೆ 323 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಆಫ್ರಿಕಾಗೆ 395 ರನ್ ಗುರಿ ನೀಡಿತು.
ಹರಿಣಗಳಿಗೆ ಆರಂಭಿಕ ಆಘಾತ:
ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡಿತು. ಪ್ರಥಮ ಇನಿಂಗ್ಸ್‌‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಡೀನ್ ಎಲ್ಗರ್(2) ಅವರು ರವೀಂದ್ರ ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕ್ರೀಸ್‌ನಲ್ಲಿ ಏಡೆನ್ ಮರ್ಕರಮ್ (3) ಹಾಗೂ ಡಿ ಬ್ರುಯ್ನ್‌ (5) ಅವರು ವಿಕೆಟ್ ಕಾಯ್ದುಕೊಂಡಿದ್ದಾರೆ.
ಇನ್ನೂ ಆಫ್ರಿಕಾಗೆ 384 ರನ್ ಅಗತ್ಯವಿದೆ. ಕೈಯಲ್ಲಿ ಒಂಬತ್ತು ವಿಕೆಟ್ ಇದೆ.
ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್‌: 502 (ಡಿ)
ದ್ವಿತೀಯ ಇನಿಂಗ್ಸ್‌: 67 ಓವರ್‌ಗಳಲ್ಲಿ 35/1 (ರೋಹಿತ್ ಶರ್ಮಾ 127, ಚೇತೇಶ್ವರ ಪೂಜಾರ 81, ರವೀಂದ್ರ ಜಡೇಜಾ 40, ವಿರಾಟ್ ಕೊಹ್ಲಿ ಅಜೇಯ 31, ಅಜಿಂಕ್ಯಾ ರಹಾನೆ ಅಜೇಯ 27; ಕೇಶವ್ ಮಹರಾಜ್ 129 ಕ್ಕೆೆ 2)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್‌: 131.2 ಓವರ್‌ಗಳಲ್ಲಿ 431/10 (ಡೀನ್ ಎಲ್ಗರ್ 160, ಡಿ ಕಾಕ್ 111, ಫಾಫ್ ಡುಪ್ಲೆೆಸಿಸ್ 55, ಎಸ್.ಮುತ್ತುಸ್ವಮಿ ಔಟಾಗದೆ 33; ಆರ್. ಅಶ್ವಿನ್ 145ಕ್ಕೆೆ 7, ರವೀಂದ್ರ ಜಡೇಜಾ 124ಕ್ಕೆೆ 2)

loading...