1983 ವಿಶ್ವಕಪ್ ಗೆಲುವಿಗೆ 37 ವರ್ಷ

0
5

ನವದೆಹಲಿ:- ಇಂಗ್ಲೆಂಡ್ ನಲ್ಲಿ ನಡೆದಿದ್ದ ಮೂರನೇ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿಯತಾಂಶ ನೀಡಿದ್ದ ಭಾರತ ತಂಡ, ಮೊದಲ ಬಾರಿ ಚಾಂಪಿಯನ್ ಮುಕುಟವನ್ನು ಮುಡಿಗೇರಿಸಿಕೊಂಡಿತ್ತು. ಈ ಮೂಲಕ ವಿಶ್ವದ ಗಮನವನ್ನು ತನ್ನತ್ತ ಸೆಳೆಯಿತು.
ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನಲ್ಲಿದ್ದ ವಿಂಡೀಸ್ ತಂಡದ ಕನಸಿಗೆ ಬ್ರೇಕ್ ಹಾಕಿದ ಟೀಮ್ ಇಂಡಿಯಾ ಆಟಗಾರರು, ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಅಮೋಘ ಪ್ರದರ್ಶನ ನೀಡಿದ ಕಪೀಲ್ ದೇವ್ ಮುಂದಾಳತ್ವದ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು. ಈ ಸುವರ್ಣ ಘಳಿಗೆಗೆ ಗುರುವಾರ (ಜೂನ್ 25)ಕ್ಕೆ 37 ವರ್ಷ ತುಂಬುತ್ತಿವೆ.
ಅಷ್ಟಕ್ಕೂ ಫೈನಲ್ ನಲ್ಲಿ ಟೀಮ್ ಇಂಡಿಯಾ ಗೆಲುವು ಸುಲಭವಾಗಿರಲಿಲ್ಲ. ಭಾರತದ ಆರಂಭಿಕ ಬ್ಯಾಟ್ಸ್ ಮನ್ ಕೆ.ಶ್ರೀಕಾಂತ್ (38) ಹಾಗೂ ಮೋಹಿಂದರ್ ಅಮರನಾಥ್ (26) ಜೋಡಿ ತಂಡಕ್ಕೆ ಅರ್ಧಶತಕ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಸಂದೀಪ್ ಪಾಟೀಲ್ (27), ಮದನ್ ಲಾಲ್ (17) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಭಾರತ 183 ರನ್ ಗಳಿಗೆ ಆಲೌಟ್ ಆಯಿತು.
ವಿಂಡೀಸ್ ತಂಡದ ಬ್ಯಾಟಿಂಗ್ ಬಲಾಢ್ಯವಾಗಿತ್ತು. ಸ್ಟಾರ್ ಆಟಗಾರರನ್ನು ಕಟ್ಟಿ ಹಾಕುವುದು ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಸವಾಲಾಗಿತ್ತು. ಕಪಿಲ್ ದೇವ್ ನೇತೃತ್ವದ ತಂಡ, ಒತ್ತಡಕ್ಕೆ ಒಳಗಾಗದೆ ಮೊನಚಾದ ದಾಳಿ ಸಂಘಟಿಸಿತು. 5 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ, ಡೆಸ್ಮಂಡ್ ಹೇನ್ಸ್ (13), ಸರ್ ವಿವ್ ರಿಚರ್ಡ್ಸ್ (33) ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮದನ್ ಲಾಲ್ ಸಫಲರಾದರು. ಸ್ಟಾರ್ ಬ್ಯಾಟ್ಸ್ ಮನ್ ರಿಚರ್ಡ್ಸ್ ಅವರಿಗೆ ಖೆಡ್ಡಾ ತೋಡುವಲ್ಲಿ ಮದನ್ ಲಾಲ್ ಯಶಸ್ವಿಯಾದರು.

ಮಧ್ಯಮ ಕ್ರಮಾಂಕಿತರು ರನ್ ಕಲೆ ಹಾಕುವಲ್ಲಿ ಎಡವಿದರು. ಜೆಫ್ ಡುಜಾನ್ (25), ಮಾಲ್ಕಮ್ ಮಾರ್ಷಲ್ (18) ಕೊಂಚ ಟೀಮ್ ಇಂಡಿಯಾದ ಬೌಲರ್ ಗಳನ್ನು ಕಾಡಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.

ಐತಿಹಾಸಕ ಲಾರ್ಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾ 140 ರನ್ ಗಳಿಗೆ ವಿಂಡೀಸ್ ತಂಡವನ್ನು ಕಟ್ಟಿ ಹಾಕಿ, ವಿಶ್ವ ಚಾಂಪಿಯನ್ ಆಯಿತು. ಆಗ ಸೂರ್ಯಾಸ್ಥ ಆಗುತ್ತಿತ್ತು. ಆದರೆ, ವಿಶ್ವ ಕ್ರಿಕೆಟ್ ನಲ್ಲಿ ಭಾರತ ತನ್ನ ಪ್ರಖರ ಬೆಳಕನ್ನು ಎಲ್ಲಡೆ ಹಬ್ಬಿಸಿತು.

loading...