ಪೋಸ್ಕೊ ಹೋರಾಟ-ಒಂದು ಅವಲೋಕನ

0
23
loading...

 

ಧಾರವಾಡ, ಸೆ.30: ಜಾಗತೀಕರಣದ ಪ್ರಕ್ರಿಯೆಯಲ್ಲಿ ದೇಶ ಭಾಷೆ ಮತ ಮುಂತಾದ ವಿಂಗಡಣೆಗಳನ್ನೂ ಮೀರಿ ಶ್ರೀಮಂತರೇ ಹೆಚ್ಚು ಶ್ರೀಮಂತರಾಗುತ್ತ ಹೋಗುತ್ತಾರೆ ಹಾಗೂ ಎಲ್ಲ ದೇಶಗಳ ಬಡಜನರು ಹೆಚ್ಚು ಬಡವರೂ, ನಿರ್ಗತಿಕರೂ, ಅಸಹಾಯಕರೂ ಆಗುತ್ತ ಹೋಗುತ್ತಾರೆ. ಪ್ರಭುತ್ವಗಳು ಜನಪರ ಹೋರಾಟಗಳ ಕೆಚ್ಚನ್ನು ಕಡಿಮೆ ಮಾಡಲು ವ್ಯವಸ್ಥಿತ ಪ್ರಯತ್ನಗಳನ್ನು ಮಾಡುತ್ತವೆ ಎಂದು ಸುಶ್ರೀ ಶಾರದಾ ಗೋಪಾಲ ದಾಬಡೆ ಅವರು ಹೇಳಿದರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ಸಂಪಿಗೆ ಲೋಕಶಿಕ್ಷಣ ಉಪನ್ಯಾಸಮಾಲೆಯ “ಪೋಸ್ಕೊ ಹೋರಾಟ-ಒಂದು ಅವಲೋಕನಳಿಳಿ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು ಜಾಗತೀಕರಣ ಹಾಗೂ ಖಾಸಗೀಕರಣ ಇವುಗಳೇ ಅಡಿಪಾಯವಾಗಿರುವ ಅಭಿವೃದ್ದಿಯ ಮಾದರಿಯಲ್ಲಿ ಜನಸಾಮಾನ್ಯರಿಗೆ ಸ್ಥಾನವೇ ಇಲ್ಲ;

ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಇನ್ನೂ ಹೆಚ್ಚು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಹೆಚ್ಚು ಸಂಕೀರ್ಣವಾದ ಹೋರಾಟಗಳಿಗೆ ಸಿದ್ಧರಾಗಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಕವಿ, ಚಿಂತಕ, ಹೋರಾಟಗಾರ ಶ್ರೀ ಬಸವರಾಜ ಸೂಳಿಭಾವಿ ಅವರು ಮಾತನಾಡಿ, ಗದಗ ಜಿಲ್ಲೆಯ ಹಳ್ಳುಗುಡಿ, ಮೇವುಂಡಿ ಹಾಗೂ ಜಂತ್ಲಿ ಶಿರೂರ ಗ್ರಾಮಗಳಲ್ಲಿ ಪೋಸ್ಕೌ ವಿರುದ್ಧದ ಹೋರಾಟ ಹೇಗೆ ರೂಪು ತಳೆಯಿತು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದರು. ಗ್ರಾಮಸ್ಥರಿಗೆ

ಯಾವ ಪೂರ್ವ ಮಾಹಿತಿಯನ್ನೂ ಕೊಡದೆ ಸಾವಿರಾರು ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಸರಕಾರ ಆದೇಶ ಹೊರಡಿಸಿದ್ದು, ಚುನಾಯಿತ ಪ್ರತಿನಿಧಿಗಳೂ ಕೂಡ ಜನರೊಂದಿಗೆ ಸಮಾಲೋಚನೆ ನಡೆಸದೆ ರೈತ ವಿರೋಧಿ ನಿಲುವು ತಳೆದಿದ್ದು; ದಿನಗಳೆದಂತೆ ತಾತ್ವಿಕ ಸ್ಪಷ್ಟತೆಯಿದ್ದ ಕೆಲವೇ ಜನರಿಂದ ಪ್ರಾರಂಭವಾದ ಹೋರಾಟ ಹೆಚ್ಚು ಹೆಚ್ಚು ಜನಬೆಂಬಲ ಪಡೆಯುತ್ತ ಬೆಳೆದಿದ್ದು; ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿಗಳು ಹಾಗೂ ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿಗಳು ಸಮಸ್ಯೆಯ ಆಳ ವಿಸ್ತಾರಗಳನ್ನು ಅರ್ಥ ಮಾಡಿಕೊಂಡು ಇಡೀ ಹೋರಾಟಕ್ಕೆ ನೇತೃತ್ವ ಒದಗಿಸಿದ್ದು ಹಾಗೂ ದೇಶದಾದ್ಯಂತ ಹಲವಾರು ಜನಪರ ಹೋರಾಟಗಳನ್ನು ನಡೆಸಿದ ಮೇಧಾ ಪಾಟ್ಕರ್ ಅವರು ಹಳ್ಳುಗುಡಿಗೆ ಬಂದು ಜನರಲ್ಲಿ ಉತ್ಸಾಹ ಹೆಚ್ಚಿಸಿದ್ದು ಇವೆಲ್ಲ ಪೋಸ್ಕೊ ವಿರೋಧಿ ಹೋರಾಟಕ್ಕೆ ಒಂದು ಮಟ್ಟದ ಗೆಲುವು ದೊರಕಲು ಸಹಾಯವಾದವು. ಆದರೆ ಈ ಹೋರಾಟ ಇನ್ನೂ ಮುಗಿದಿಲ್ಲ.

ಸರಕಾರ ಈ ಕುರಿತು ಇನ್ನೂ ಅಧಿಕೃತವಾದ ರಾಜಪತ್ರ (ಗೆಜೆಟ್) ಹೊರಡಿಸಿಲ್ಲ ಹಾಗೂ ಇನ್ನೊಂದು ಕಡೆ ಹಳ್ಳುಗುಡಿ-ಮೇವುಂಡಿ-ಜಂತ್ಲಿ ಶಿರೂರ ಗ್ರಾಮಗಳಲ್ಲಿ ಈಗಲೂ ರೈತರಿಗೆ ಆಮಿಷವೊಡ್ಡುವ ಪೋಸ್ಕೊ ಪರ ಶಕ್ತಿಗಳು ಸಕ್ರೀಯವಾಗಿರುವುದು ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದ ಎಲ್ಲ ಪ್ರಗತಿಪರ ಸಂಘ, ಸಂಸ್ಥೆಗಳು ಹಾಗೂ ವ್ಯಕ್ತಿಗಳು ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಹಳ್ಳಿಗುಡಿಯ ರೈತರಾದ ಶ್ರೀ ಹನುಮಂತಪ್ಪ ಗಡ್ಡದ್ ಅವರು ತಮ್ಮದೇ ಆದ ವಿಶಿಷ್ಟ ಗ್ರಾಮ್ಯ ಶೈಲಿಯಲ್ಲಿ ಹಳ್ಳಿಯ ಜನರು ಪೋಸ್ಕೌ ವಿರುದ್ಧ ಹೇಗೆ ಸಂಘಟಿತರಾದರು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.

ಯುಗ ಯುಗಗಳೇ ಕಳೆದರೂ ಈ ಭೂಮಿ ನಮ್ಮನ್ನು ಕಾಪಾಡಿಕೊಂಡು ಬಂದಿದೆ; ನಾವು ಇದನ್ನು ಯಾವುದೋ ಆಮಿಷಕ್ಕೊಳಪಟ್ಟು ಯಾರಿಗೊ ಮಾರಿಕೊಂಡಿದ್ದಾದರೆ ಮುಂದಿನ ತಲೆಮಾರಿನವರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಒಬ್ಬ ಗ್ರಾಮೀಣ ಮಹಿಳೆ ಹೇಳಿ, ಹೇಗೆ ಇಡೀ ಹೋರಾಟಕ್ಕೆ ಹೊಸ ಚೈತನ್ಯವನ್ನು ತುಂಬಿತು ಎಂಬುದನ್ನು ತಿಳಿಸಿದರು.

ಶಿಕ್ಷಣ ಮಂಟಪದ ಸಂಚಾಲಕರಾದ ಡಾ. ಸಂಜೀವ ಕುಲಕರ್ಣಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಡೆಸಿಕೊಟ್ಟರು

 

loading...

LEAVE A REPLY

Please enter your comment!
Please enter your name here