2ನೇ ಹಂತದ ವಿಶೇಷ ಅನುದಾನ: ವಿವಿಧ ಕಾಮಗಾರಿಗಳಿಗೆ ಚಾಲನೆ

0
20
loading...

 

ಹುಬ್ಬಳ್ಳಿ ಸೆ.26. ಅವಳಿ ನಗರದ ಸಮಗ್ರ ಅಭಿವೃದ್ದಿಗಾಗಿ ಎರಡನೇ ಹಂತದ 100 ಕೋಟಿ ರೂ. ಅನುದಾನದಲ್ಲಿ ವಿವಿಧ ಬಡಾವಣೆಗಳ ಒಳ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಶಸ್ತ್ಯ ನೀಡಲಾಗುವದೆಂದು ರಾಜ್ಯದ ಗ್ರಾಮೀಣ ಅಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ನುಡಿದರು.

ಹುಬ್ಬಳ್ಳಿ ನಗರಪಾಲಿಕೆ ಕಚೇರಿ ಆವರಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಎರಡನೆ ಹಂತದ ವಿಶೇಷ ಅನುದಾನದಲ್ಲಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ನೀಡಲಾದ 100 ಕೋಟಿ ರೂ.ಗಳನ್ನು ವಿನಿಯೋಗಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು , ಈ ಎರಡನೆ ಕಂತಿನ ಅನುದಾನದಿಂದ ವಿವಿಧ ಕಾಮಗಾರಿಗಳನ್ನು ರೂಪಿಸಲಾಗಿದೆ.

ಮೊದಲ ಹಂತದಲ್ಲಿ 38 ಕೋಟಿ ರೂ. ಗಳ ಒಳ ರಸ್ತೆ ಹಾಗೂ ಇತರೆ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಮುಂಬರುವ ಹಂತಗಳಲ್ಲಿ ಇನ್ನುಳಿದ 62 ಕೋಟಿ ರೂ. ಗಳ ಅನುದಾನದಲ್ಲಿ ಬಾಕಿ ಉಳಿದ ಕಾಲೋನಿಗಳ ಒಳ ರಸ್ತೆಗಳನ್ನು ಕೈಗೆತ್ತಿಕೊಳ್ಳಲಾಗುವದು. ಅದ್ದರಿಂದ ಪ್ರಥಮ ಹಂತದಲ್ಲಿ ಸೇರ್ಪಡೆಯಾಗದ ಕಾಲೋನಿ ಜನ ಆತಂಕ ಪಡಬಾರದೆಂದು ಅವರು ಮನವಿ ಮಾಡಿದರು. ಈ ವಿಶೇಷ ಅನುದಾನವಲ್ಲದೇ ರಾಜ್ಯ ಹಣಕಾಸು ಆಯೋಗ ಹಾಗೂ ಪಾಲಿಕೆ ಅಭಿವೃದ್ದಿ ನಿಧಿಯಿಂದ ಸಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದರು. ಈ ವಿಶೇಷ ಅನುದಾನದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅವುಗಳು ಬಹುದಿನ ಬಾಳಿಕೆ ಬರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು.

ಅವಳಿ ನಗರದಲ್ಲಿ ಈಗ ಮೂರು ದಿನಕೊಮ್ಮೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಇದರ ಮುಂದುವರೆದ ಭಾಗವಾಗಿ ನಗರದ ಎಲ್ಲ ವಾರ್ಡಗಳಲ್ಲಿ ನಿರಂತರ ನೀರು ಪೂರೈಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಟಿ. ಸಿ. ಎಸ್. ಸಂಸ್ಥೆ ಸರ್ವೆ ನಡೆಸಿದ್ದು , ಇಷ್ಟರಲ್ಲಿಯೇ ವರದಿ ನೀಡಲಿದೆ. ಅದನ್ನು ಆದಾರಿಸಿ ಹಂತ ಹಂತವಾಗಿ ಮುಂಬರುವ 3 ವರ್ಷಗಳಲ್ಲಿ ಅವಳಿ ಜನಗರದ ಜನತೆಗೆ ಪ್ರತಿನಿತ್ಯ ನೀರು ಪೂರೈಸುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು. ಅವಳಿ ನಗರದ ಮಧ್ಯ 177 ಕೋಟಿ ರೂ. ವೆಚ್ಚದಲ್ಲಿ ಚತುಷ್ಟಪಥ ರಸ್ತೆ ಕಾಮಕಾರಿಗೆ ಚಾಲನೆ ದೊರೆತಿದೆ ಇದರೊಟ್ಟಿಗೆ ಬಿ. ಅರ್. ಟಿ. ಸಿ ಯೋಜನೆಯಡಿ ಸಹ ನಾಲ್ಕು ಪಥ ರಸ್ತೆಯನ್ನು ವಿಶ್ವ ಬ್ಯಾಂಕ್ ನೆರವಿನಿಂದ ನಿರ್ಮಿಸುವ ಯೋಜನೆ ಸಹ ಇದೆ. ಆದರೆ ಬಿ. ಅರ್. ಟಿ. ಸಿ ಯೋಜನೆ ಅನುಷ್ಠಾನವಾಗಲು ವಿಳಂಬವಾಗುವ

ಸಾಧ್ಯತೆಗಳಿರುವುದರಿಂದ ಈಗಾಗಲೇ ಅನುಮೋದನೆ ದೊರೆತ ಚತುಷ್ಟಪಥ ರಸ್ತೆ ಕಾಮಗಾರಿಯನ್ನು ಕೆ. ಅರ್. ಡಿ. ಸಿ ಮೂಲಕ ನಿರ್ವಹಿಸಲಾಗುವದು ಎಂದು ಸ್ಪಷ್ಟಪಡಿಸಿದರು.ಗಬ್ಬೂರ – ಬಿಡನಾಳದಿಂದ ಗದಗ ರಸ್ತೆ ಹಾಗೂ ಅಲ್ಲಿಂದ ಬಿಜಾಪೂರ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ನಿರ್ಮಾಣದ ಭೂಸ್ವಾಧೀನಕ್ಕೆ 8.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈ ಕಾರ್ಯ ಸಹ ಇಷ್ಟರಲ್ಲೆ ಪ್ರಾರಂಭವಾಗಲಿದೆ ಎಂದರು. ಹುಬ್ಬಳ್ಳಿ ಬಳಿಯ ಅದರಗುಂಚಿಯಲ್ಲಿ ಟ್ರಕ್ ಟರ್ಮಿನಸ್ ನಿರ್ಮಿಸಲು 60 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇವುಗಳಿಂದ ನಗರ ಸಂಚಾರ ದಟ್ಟಣೆ ಕಡಿಮೆಯಾಗಲಿದೆಯೆಂದು ಸಚಿವರು ತಿಳಿಸಿದರು.

ವಿಶೇಷ ಅನುದಾನದ ಕಾಮಗಾರಿಗಳ ವಿವರಣಾ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಪ್ರಲ್ಹಾದ ಜೋಶಿ ಅವರು ಮೊದಲ ಹಂತದ 100 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸದ್ವಿನಿಯೋಗ ಮಾಡಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಸರ್ವರಿಗೂ ಧನ್ಯವಾದ ಅರ್ಪಿಸಿದರು. ಹೊಸದಾಗಿ ಮಾಡಿದ ರಸ್ತೆಯನ್ನು ಪಾಲಿಕೆಯೆ ಅಗೆಯುವ ಮೂಲಕ ರಸ್ತೆ ಹಾಳಾಗುವುದಕ್ಕೆ ಕಾರಣವಾಗುತ್ತಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ 4-5 ವರ್ಷವಾದರೂ ಹೊಸ ರಸ್ತೆಗಳನ್ನು ಅಗೆಯದ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ರಸ್ತೆ ನಿರ್ಮಿಸಿದಲ್ಲಿ ಅದು ಜನರ ಮನದಲ್ಲಿ ಬಹುದಿನ ಉಳಿಯುತ್ತದೆಯೆಂದರು. ಭರದಿಂದ ಬೆಳೆಯುತ್ತಿವ ನಗರಕ್ಕೆ ಉಳಿದೆಲ್ಲ ನಗರಕ್ಕೆ ನೀಡದಂತೆ 100 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ . ಆದರೆ ಈ ಬೃಹತ್ ನಗರಕ್ಕೆ ಹೆಚ್ಚಿನ ಅನುದಾನದ ಅಗತ್ಯವನ್ನು ಪ್ರತಿಪಾದಿಸಲು ಪಕ್ಷಾತೀತವಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವದು ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ , ಯಾವ ವಾರ್ಡಗಳಲ್ಲಿ ಕನಿಷ್ಠ ಸೌಲಭ್ಯ ದೊರಕಿಲ್ಲವೋ ಅಂತಹ ವಾರ್ಡಗಳಗೆ ಆದ್ಯತೆ ನೀಡಲು ಸಲಹೆ ಮಾಡಿದರು. ಅವಳಿ ನಗರದ ಅಭಿವೃದ್ದಿಗೆ ಕನಿಷ್ಠ 500 ಕೋಟಿ ರೂ. ಗಳ ಯೋಜನೆ ರೂಪಿಸುವಂತೆ ಹಾಗೂ ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಅವರು ಸಲಹೆ ಮಾಡಿ ಇದಕ್ಕೆ ತಮ್ಮ ಸಂಪೂರ್ಣ ಬೆಂಬಲದ ಆಶ್ವಾಸನೆ ನೀಡದರು. ಮತ್ತೌರ್ವ ಅತಿಥಿ ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ , ಈ ಕಾಮಗಾರಿ ನಗರದ ವ್ಯವಸ್ಥಿತ ಅಭಿವೃದ್ದಿಗೆ ನಾಂದಿ ಆಗಿದ್ದು , ಅದು ಯಶಸ್ವಿಯಾಗಬೇಕು ಎಂದರು. ಮಹಾನಗರದ ಅಭಿವೃದ್ದಿ ಕುರಿತು ನಾವೆಲ್ಲರೂ ಬರುವ 29 ರಂದು ಸಭೆ ಸೇರಿ ಸಮಾಲೋಚನೆ ಮಾಡುವುದಾಗಿ ತಿಳಿಸಿದರು.

ಪಾಲಿಕೆ ಮಹಾಪೌರರಾದ ಶ್ರೀಮತಿ ಪೂರ್ಣಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಪಾಲಿಕೆ ಆಯುಕ್ತ ಡಾ || ಕೆ. ವ್ಹಿ . ತ್ರಿಲೋಕಚಂದ್ರ ಅವರು ಪ್ರಾಸ್ತಾವಿಕ ಮಾತನಾಡಿ , 100 ಕೋಟಿ ರೂ. ಎರಡನೆ ಹಂತದ ವಿಶೇಷ ಅನುದಾನದಲ್ಲಿ ಮುಂಬರುವ 2013-14 ರ ಅವಧಿಯವರೆಗೆ 3 ವರ್ಷಗಳಲ್ಲಿ ಸಮವಾಗಿ ಶೇ. 33.3 ರಷ್ಟು ಅನುದಾನವನ್ನು ವಿಭಜಿಸಿ ಇ-ಪ್ರಕ್ಯೂರ್ಮೆಂಟ್ ಪ್ರಕಾರ ಟೆಂಡರ್ ಕರೆದು ಕಾಮಗಾರಿಗಳನ್ನು ನಿರ್ವಹಿಸಲಾಗುವದು ಎಂದರು. ಮೊದಲ ಹಂತದಲ್ಲಿ 38.88 ಕೋಟಿ ರೂ. ಗಳ ವಿವಿಧ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ಅನುಮೋದನೆ ಪಡೆದು ಪ್ಯಾಕೇಜ್ ಟೆಂಡರ ಕರೆಯಲಾಗಿದೆ ಎಂದರು. ಈ ಅನುದಾನದಲ್ಲಿ ರಸ್ತೆ , ರಸ್ತೆ ಬದಿಯ ಚರಂಡಿ , ನಗರ ಸ್ವಚ್ಛತಾ ಕಾಮಗಾರಿ , ಸ್ಮಶಾನ ಅಭಿವೃದ್ದಿ , ಹಳ್ಳಿಗಳ ಅಭಿವೃದ್ದಿ ಕೆರೆ ಹಾಗೂ ಉದ್ಯಾನ ಮುಂತಾದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದರು .

ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಗಡಿ ಪ್ರದೇಶ ಅಣಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಶಾಸಕರಾದ ವೀರಭದ್ರಪ್ಪ ಹಾಲಹರವಿ , ಶ್ರೀನಿವಾಸ ಮಾನೆ , ಮೋಹನ ಲಿಂಬಿಕಾಯಿ , ಮಂಡಳಿ ಹಾಗೂ ನಿಗಮದ ಅಧ್ಯಕ್ಷರಾದ ಮಹೇಶ ಟೆಂಗಿನಕಾಯಿ , ದತ್ತಾ ಡೋರ್ಲೆ , ಮಲ್ಲಿಕಾರ್ಜುನ ಸಾವಕಾರ , ಈಶ್ವರಚಂದ್ರ ಹೊಸಮನಿ , ಉಪ ಮಹಾಪೌರ ನಾರಾಯಣ ಜರತಾಘರ , ಸಭಾ ನಾಯಕ , ವೀರಣ್ಣ ಸವಡಿ ಅವರು ಸೇರಿದಂತೆ ಪಾಲಿಕೆಯ ಸದಸ್ಯರು ಪಾಲ್ಗೊಂಡಿದ್ದರು. ಆರಂಭದಲ್ಲಿ ಫಡಕೆ ಸ್ವಾಗತಿಸಿದರು. ಪಾಲಿಕೆ ವಿಶೇಷಾಧಿಕಾರಿ ಎಸ್. ಅರ್. ನರೇಗಲ್ಲ ವಂದಿಸಿದರು.

loading...

LEAVE A REPLY

Please enter your comment!
Please enter your name here