ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ: ದೇವೇಗೌಡ

0
23
loading...

ಬೆಳಗಾವಿ,27- ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ರೈತರು ಸಂಕಷ್ಟದಿಂದ ನರಳುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ಕೇಶವಕೃಪಾ ಮತ್ತು ದೆಹಲಿಯಲ್ಲಿ ಬೀಡಾರ ಬಿಟ್ಟಿದ್ದಾರೆ. ರಾಜ್ಯದಲ್ಲಿ ಕುರ್ಚಿಗಾಗಿ ಕದನ ನಡೆಯುತ್ತಿದ್ದು, ಸರಕಾರ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದೆ ಎಂದು ಮಾಜಿ ದೇವೇಗೌಡ ಆರೋಪಿಸಿದ್ದಾರೆ.

ಖಾನಾಪೂರ ತಾಲೂಕಿನ ಗೋಲಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಳ್ಳುವ  ಮೊದಲು ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಅವರು  ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. ರೈತರು ಮೇವು ಮತ್ತು ನೀರಿಗಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಪಿಯುಸಿಯ ಪ್ರಶ್ನೆ ಪತ್ರಿಕೆಗಳು ಬಯಲಾಗಿ ವಿದ್ಯಾರ್ಥಿ ಸಮೂಹ ಆತಂಕಕ್ಕೀಡಾಗಿದೆ. ಜನರ ಸಂಕಷ್ಟಗಳನ್ನು ದೂರ ಮಾಡಲು ಜನರ ಬಳಿಗೆ ಹೋಗಬೇಕಾದ ಸರಕಾರ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಬೆಂಗಳೂರಿನಿಂದ ದೆಹಲಿಗೆ ನಿರಂತರವಾಗಿ ನಿಯೋಗಗಳನ್ನು ಕೊಂಡ್ಯೊಯ್ಯುವುದೇ ಬಿಜೆಪಿ ಸರಕಾರ ಕಾಯಕವಾಗಿದೆ ಎಂದು ದೇವೇಗೌಡರು ರಾಜ್ಯ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ ಎಚ್.ಡಿ.ರೇವಣ್ಣನವರು ಇಂಧನ ಮಂತ್ರಿಯಾಗಿದ್ದಾಗ ರೈತರು ವಿದ್ಯುತ್ಗಾಗಿ ಪರದಾಡಿದ ಪರಿಸ್ಥಿತಿ ಉದ್ಬವವಾಗಲಿಲ್ಲ. ಆದರೆ ಬಿಜೆಪಿ ಸರಕಾರ ರೈತರಿಗೆ ವಿದ್ಯುತ್ ಸರಬರಾಜು ಮಾಡದೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಒಂದು ಲಕ್ಷ ಕೋಟಿ  ರೂ.ಮೊತ್ತದ ಬಜೆಟ್ ಮಂಡಿಸಿದರೂ ರೈತರಿಗೆ ಒಂದು ಪೈಸೆಯೂ ಲಾಭದಾಯಕವಾಗಿಲ್ಲ. ಸರಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.  ಮುಂದಿನ ಚುನಾವಣೆಯಲ್ಲಿ ಜೆಡಿಎಸ ಅಧಿಕಾರಕ್ಕೆ ಬಂದರೆ ರೈತರಿಗೆ ನಿರಂತರ ವಿದ್ಯುತ್ ನೀಡುವುದರ ಜೊತೆಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಬಿಜಾಪೂರದ ಜನ ಬಂಗಾರದಿಂದ ತುಲಾಭಾರ ಮಾಡಿದರೂ ಕಾಂಗ್ರೆಸ್ ಸರಕಾರ ಉತ್ತರ ಕರ್ನಾಟಕದ ಅಭಿವೃದ್ದಿಗೆ ಏನೂ ಮಾಡಲಿಲ್ಲ. ಅದರಂತೆ ಬಿಜೆಪಿ ಸರಕಾರವೂ ಉತ್ತರ ಕರ್ನಾಟಕದ ಅಭಿವೃದ್ದಿಯನ್ನು ನಿರ್ಲಕ್ಷಿಸಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 18 ಬಾರಿ ಗ್ರಾಮ ವಾಸ್ತವ್ಯಗಳನ್ನು ಉತ್ತರ ಕರ್ನಾಟಕದ ಅಭಿವೃದ್ದಿಗೆ ಗಟ್ಟಿ ನಿಲುವು ತಾಳಿ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಎ.ಬಿ.ಪಾಟೀಲ. ಅಶೋಕ ಪೂಜಾರಿ ಮತ್ತು ಕಾರ್ಯಕ್ರಮದ ಆಯೋಜಕ ಬಾಗವಾನ ಶುಗರ್ಸ್ನ ಸಂಸ್ಥಾಪಕ ನಾಸೀರ ಬಾಗವಾನ  ಸೇರಿದಂತೆ ಜಿಲ್ಲೆಯ ಜೆಡಿಎಸ್ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

 

ಖಾನಾಪುರ ತಾಲೂಕಿನಲ್ಲಿ ಜೆಡಿಎಸ್ ಅಲೆ

 

ಖಾನಾಪುರ ತಾಲೂಕಿನ ಗೋಲಹಳ್ಳಿ ಗ್ರಾಮದಲ್ಲಿ ನಡೆದ ಖಾನಾಪೂರ ತಾಲೂಕು ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಜೆಡಿಎಸ್ ಮುಖಂಡ ನಾಸಿರ್ ಭಾಗವಾನ್ ಅವರು ಸತ್ಕರಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಳ್ಳಿಯ ಖಡ್ಗ ನೀಡಿ ಗೌರವಿಸಲಾಯಿತು. ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

 

ಮಾನಪ್ಪಾಡಿಗೆ ಅಧಿಕಾರ ಕೊಟ್ಟವರ್ಯಾರು?

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ ಮಾನಪ್ಪಾಡಿ ಅವರು ವಕ್ಫ್ ಬೋರ್ಡಿಗೆ ಸಂಬಂಧಿಸಿದ ಹಗರಣವನ್ನು ತನಿಖೆ ಮಾಡಲು ಮಾನಪ್ಪಾಡಿಗೆ ಅಧಿಕಾರ ಕೊಟ್ಟವರ್ಯಾರು ? ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶ್ನಿಸಿದ್ದಾರೆ.  ವಕ್ಫ್ ಬೋರ್ಡ್ ಮತ್ತು ಅಲ್ಪಸಂಖ್ಯಾತರ ಆಯೋಗ ಬೇರೆ ಬೇರೆಯಾಗಿದ್ದು, ಸರಕಾರ ಇವರನ್ನು ತನಿಖೆ ಮಾಡಲು ನೇಮಿಸಿತ್ತೌ ಅಥವಾ ಅವರು ಖಾಸಗಿಯಾಗಿ ತನಿಖೆ ಮಾಡಿದ್ದಾರೆಯೋ ಎಂಬುದನ್ನು ಮುಖ್ಯಮಂತ್ರಿ ಸದಾನಂದಗೌಡರು ಸ್ಪಷ್ಟಪಡಿಸಬೇಕೆಂದು ದೇವೇಗೌಡರು ಒತ್ತಾಯಿಸಿದರು. ರಾಜ್ಯ ಸರಕಾರ ತಾನು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಹುನ್ನಾರ ನಡೆಸಿದೆ. ಬಿಜೆಪಿ ಸರಕಾರ ಕರ್ನಾಟಕವನ್ನು ಕೇಸರಿಕರಣ ಮಾಡುವ ತಂತ್ರ ರೂಪಿಸಿದ್ದು, ಇದನ್ನು ಯಶಸ್ವಿ ಮಾಡಲು ಈ ರಾಜ್ಯದ ಜನ ಅವಕಾಶ ನೀಡುವುದಿಲ್ಲವೆಂದು ದೇವೇಗೌಡರು ಸರಕಾರಕ್ಕೆ ಎಚ್ಚರಿಕೆ ನೀಡಿದರು…

loading...

LEAVE A REPLY

Please enter your comment!
Please enter your name here