ಪ್ರಾಚೀನ ನಾಣ್ಯ ಹಾಗೂ ನೋಟುಗಳ ಪ್ರದರ್ಶನ

0
62
loading...

ಚನ್ನಮ್ಮ ಕಿತ್ತೂರ,29- ಸ್ಥಳೀಯ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಧಾರವಾಡದ ಫಿಲಾ ಐಲೆಂಡ್ ಅಸೋಸಿಯೇಟ್ಸ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳು ಹಾಗೂ ನೋಟುಗಳ ಪ್ರದರ್ಶನವನ್ನು ಗ್ರಂಥಾಲಯದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಕಿತ್ತೂರ ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಆರ್.ವಾಯ್.ಪರವಣ್ಣವರ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಈ ಪ್ರದರ್ಶನದ ವಿಶೇಷಗಳಾದ ಕ್ರಿ.5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚಮರ ನಾಣ್ಯಗಳು, ಕುಷ್ಯಾಣರು, ಶಾತವಾಹನ, ಕದಂಬ, ಚೋಳ ಮುಂತಾದ ಪ್ರಾಚೀನ ನಾಣ್ಯಗಳು, ಮೊಘಲ ಸಾಮ್ರಾಜ್ಯದ ಅಕ್ಬರ, ಜಹಾಂಗೀರ, ಷಹಜಹಾನ, ಓರಂಗಜೇಬಿ, ವಿಜಯನಗರ ಸಾಮ್ರಾಜ್ಯ, ಮೈಸೂರು, ವಿಜಾಪೂರ, ಹೈದರಾಬಾದ, ಬರೋಡ, ಗ್ವಾಲಿಯರ, ಮೇವಾರ, ಮುಂತಾದ ಭಾರತೀಯ ರಾಜ್ಯ ಸಂಸ್ಥಾನಗಳ ನಾಣ್ಯಗಳು, ಹಾಗೂ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ, ಪೋರ್ಚುಗೀಸ, ಫ್ರೆಂಚ ಹಾಗೂ ಸ್ವಾತಂತ್ರ್ಯ ಭಾರತದ ನಾಣ್ಯಗಳು ಮತ್ತು ನೋಟುಗಳು ಪ್ರದರ್ಶನದಲ್ಲಿ ಆಕರ್ಷಣೆಗೊಂಡವು.

ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳಿ, ಸೀಸ, ಲೋಹಗಳಿಂದ ತಯಾರಿಸಿದ ನಾಣ್ಯಗಳು, ಚಿನ್ನದಿಂದ ಹಾಗೂ ಪ್ಲಾಸ್ಟಿಕನಿಂದ ತಯಾರಿಸಿದ ವಿದೇಶಿ ನೋಟುಗಳು, ಹೇರ ಪಿನ ಆಕಾರದ ನಾಣ್ಯ, ಗಿಟಾರ ಆಕಾರದ ನಾಣ್ಯ, ಪ್ರಾಣಿ ಆಕಾರದ ನಾಣ್ಯ, ಬಿದರಿನಿಂದ ತಯಾರಿಸಿದ ನಾಣ್ಯ, ಹೆಲ್ ನೋಟು, ಅತೀ ದೊಡ್ಡದಾದ ನೋಟು, ಬೇರ್ಪಡಿಸದೇ ಇರುವ 4 ಹಾಗೂ 32 ನೋಟುಗಳನ್ನು ಹೊಂದಿಸಿದ ಅಖಂಡ ಶೀಟು, ಅತೀ ಹೆಚ್ಚು ಮುಖಬೆಲೆ ಹೊಂದಿರುವ ನೋಡುಗಳು, ಮುದ್ರಣ ದೋಷವುಳ್ಳ ವಿಚಿತ್ರ ಆಕಾರದ ನಾಣ್ಯಗಳು, ಮತ್ತು ಸ್ಮರಣಾರ್ಥ ಬಿಡುಗಡೆಯಾದ ರೂ.150, ರೂ.100, ರೂ.50, ರೂ.20 ಮತ್ತು ರೂ.10 ನಾಣ್ಯಗಳು ಪ್ರದರ್ಶನದಲ್ಲಿ ಇಡಲಾಗಿತ್ತು.

ಈ ಪ್ರದರ್ಶನವು ನೋಟುಗಳನ್ನು ಒಂದೇ ಸ್ಥಳದಲ್ಲಿ ನೋಡುವ ಅವಕಾಶ ಕಲ್ಪಿಸುವದರೊಂದಿಗೆ ನಾಣ್ಯ ಮತ್ತು ನೋಟುಗಳ ವೀಕ್ಷಣೆಯೊಂದಿಗೆ ಜಗತ್ತಿನ ಕುತೂಹಲಕಾರಿ ಇತಿಹಾಸದ ಸಂಗತಿಗಳನ್ನು ತಿಳಿಯಲು ಇದೊಂದು ಅಪೂರ್ವ ಅವಕಾಶವಾಗಿತ್ತು.

ಪ್ರದರ್ಶನಕಾರ ಭರತಕುಮಾರ ಸುಣಗಾರ ಅವರನ್ನು ಕನ್ನಡಮ್ಮ ಪ್ರತಿನಿಧಿ  ಅಶೋಕ ಸವದಿ ಸಂಪರ್ಕಿಸಿದಾಗ ಅವರು ಈ ರೀತಿ ಮಾತನಾಡಿದರು. ಫಿಲಾ ಐಲೆಂಡ ಅಸೋಸಿಯೇಟ್ಸ್ ಸಂಸ್ಥೆಯು ಸ್ಥಾಪನೆಗೊಂಡು ಆರು ವರ್ಷಗಳು ಕಳೆದಿದ್ದು, ಅಂಚೆ ಚೀಟಿ ಸಂಗ್ರಹಕಾರರು ಹಾಗೂ ನಾಣ್ಯ ಮತ್ತು ನೋಟು ಸಂಗ್ರಹಕಾರರಿಗೆ ತರಬೇತಿ ನೀಡುವುದಲ್ಲದೆ ಶಾಲಾ ಮಕ್ಕಳಿಗೆ ತರಬೇತಿ ನೀಡುವದು ಈ ಪ್ರದರ್ಶನದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಪ್ರತಿ ವರ್ಷ ಕನಿಷ್ಟ 2-3 ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದು, ಯಾವುದೇ ಶಾಲಾ ಕಾಲೇಜು ಅವರಿಗೆ ಆಹ್ವಾನಿಸಿದ್ದಲ್ಲಿ ಅವರು ಪ್ರದರ್ಶನ ಏರ್ಪಡಿಸುವುದಾಗಿ ತಿಳಿಸಿದರು.

 

loading...

LEAVE A REPLY

Please enter your comment!
Please enter your name here