ಹೆಸ್ಕಾಂ ಅಧಿಕಾರಿಗಳೊಂದಿಗೆ ಸಚಿವ ಉಮೇಶ ಕತ್ತಿ ಸಭೆ

0
15
loading...

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರ ಆರಂಭಿಸಲು ಸೂಚನೆ

ಬೆಳಗಾವಿ,17- ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸುಟ್ಟ ಟ್ರ್ರಾನ್ಸ್ಫಾರ್ಮರಗಳ ದುರಸ್ತಿಗಾಗಿ ಶಿಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರಷಿ ಗಳನ್ನು ಜಿಲ್ಲೆಯ 10 ತಾಲೂಕುಗಳಲ್ಲಿ ಜುಲೈ ಅಂತ್ಯರೊಳಗೆ ಸ್ಥಾಪಿಸಬೇಕೆಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸುಟ್ಟ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು 10 ದಿನಗಳಲ್ಲಿ ಬದಲಿಸಬೇಕು. ಟ್ರಾನ್ಸ್ಫಾರ್ಮರಗಳ ದುರಸ್ತಿಗಾಗಿ ಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಜಿಲ್ಲೆಯ ಹತ್ತೂ ತಾಲೂಕುಗಳಲ್ಲಿ ಜುಲೈ ಅಂತ್ಯರೊಳಗೆ ಸ್ಥಾಪಿಸಿ, ಬಫರ್ ಸ್ಟಾಕ್ ಟ್ರಾನ್ಸ್ಫಾರ್ಮರಗಳನ್ನು ಸಹ ಸಮರ್ಪಕವಾಗಿ ಬಳಸಬೇಕೆಂದು ಸಚಿವರು ಇಂದಿಲ್ಲಿ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ವಿದ್ಯುತ್ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ನಿರಂತರ ವಿದ್ಯುತ್ ಕಲ್ಪಿಸುವ ಕುರಿತಂತೆ ಸೂಕ್ತ ಕ್ರಮಕೈಗೊಳ್ಳಬೇಕು. ವಿಶೇಷವಾಗಿ ಜಿಲ್ಲೆಯ ಬರಪೀಡಿತ ಪ್ರದೇಶಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಬೇಕು. ಜಿಲ್ಲೆಯ ಬೆಳಗಾವಿ ವಿಭಾಗದ ಬೆಳಗಾವಿ ತಾಲೂಕು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಖಾನಾಪೂರಗಳಲ್ಲಿ ಒಟ್ಟು 88 ಕುಡಿಯುವ ಸರಬರಾಜು ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದು, ಈ ಕಾರ್ಯವನ್ನು ತಕ್ಷಣ ಮಾಡಬೇಕು. ಈ ಕುರಿತಂತೆ ಜಿಲ್ಲಾ ಪಂಚಾಯತ್ ಇಂಜನೀಯರಿಂಗ್ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಪರಸ್ಪರ ಸಮಾಲೋಚಿಸಿ ಅವಶ್ಯಕ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ವಿದ್ಯುತ್ ಅಭಾವ ನೀಗಿಸಲು ಜನೇವರಿ ಮಾಹೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವಶ್ಯಕ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದಾಗ್ಯೂ ಸಮರ್ಪಕವಾದ ಕಾರ್ಯ ನಡೆದಿಲ್ಲ. ಬರಪೀಡಿತ ತಾಲೂಕುಗಳಾದ ಚಿಕ್ಕೌಡಿ, ಅಥಣಿ, ರಾಯಬಾಗ ಮತ್ತು ಬೆಳಗಾವಿಗಳಿಗೆ ವಿದ್ಯುತ್ ವಿತರಣೆ ಸರಿಯಾಗಿಲ್ಲ. ಬೈಲಹೊಂಗಲದಲ್ಲಿ ಟ್ರಾನ್ಸ್ಫಾರ್ಮರ್ಗಳ ಬಫರ್ ಸ್ಟಾಕ್ವಿದ್ದರೂ ಕೂಡಾ ಸಮರ್ಪಕವಾಗಿ ಇದರ ಬಳಕೆಯಾಗಿಲ್ಲ. ಈ ಕುರಿತಂತೆ ಪರೀಶೀಲನೆ ನಡೆಸಿ ಅವಶ್ಯಕ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಜನಾಂಗದ ಅನುಕೂಲಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿ 2011 ರಲ್ಲಿ ಬಾಕಿ ಉಳಿದ 175 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಡಿಸೆಂಬರ್ ಅಂತ್ಯರೊಳಗೆ ಪ್ರಸಕ್ತ ವರ್ಷದ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಒಟ್ಟಾರೆ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಕಲ್ಪಿಸುವುದು, ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಅಜಯ ನಾಗಭೂಷಣ ಅವರು ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳಿಗೆ ತಕ್ಷಣ ವಿದ್ಯುತ್ ಕಲ್ಪಿಸಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿಯ ವಿದ್ಯುತ್ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಹೆಸ್ಕಾಂ ಡೈರೆಕ್ಟರ್ ಟೆಕ್ನಿಕಲ್ ಚಿಕ್ಕನಂಜಪ್ಪ, ಅಧೀಕ್ಷಕ ಅಭಿಯಂತರ ಬಸಪ್ಪ, ಕಾರ್ಯನಿವಾಹಕ ಅಭಿಯಂತರ ಮಜಗಿ ಅವರು ಜಿಲ್ಲೆಯ ವಿದ್ಯುತ್ ಅಭಾವ ನೀಗಿಸಲು ಅವಶ್ಯಕ ಕ್ರಮಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.

ಹೇರಿಟೇಜ್ ಪಾರ್ಕ್: ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸವಿನೆನಪಿಗಾಗಿ 25 ಕೋಟಿ ರೂ. ವೆಚ್ಚದಲ್ಲಿ ಗ್ಲಾಸ್ ಹೌಸ್ ಹಾಗೂ 5 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಅಪರೂಪದ ಸಸ್ಯ ಉದ್ಯಾನವನ ಅಭಿವೃದ್ದಿಪಡಿಸುವ ಹೇರಿಟೇಜ್ ಪಾರ್ಕ್ ಸ್ಥಾಪನೆಗೆ ಸಂಬಂಧಪಟ್ಟಂತೆ ಅವಶ್ಯಕ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷಿ ಸಚಿವ ಉಮೇಶ ಕತ್ತಿ ಅವರು ತಿಳಿಸಿದ್ದಾರೆ.

ಈ ಹೇರಿಟೇಜ್ ಪಾರ್ಕ್ದಲ್ಲಿ ಗ್ಲಾಸ್ ಹೌಸ್ ನಿರ್ಮಾಣ, ಈಗಿರುವ ಐತಿಹಾಸಿಕ ಕಟ್ಟಡಗಳ ನಿರ್ವಹಣೆ, ವಾರ್ಕಿಂಗ್ ಪಾರ್ಕ್, ವಿಶ್ವದ ಅಪರೂಪದ ಸಸ್ಯಗಳನ್ನು ನೆಡಲು ಇಂದಿಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು ಈ ಕುರಿತಂತೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾದರಿ ಹೇರಿಟೇಜ್ ಪಾರ್ಕ್ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಲ್ಲಿಸಲು ಸೂಚನೆ: ನಗರದಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆಗೊಳಿಸಲು ಅನುಕೂಲವಾಗುವಂತೆ 38 ಕಿ.ಮೀ.ಗಳ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ದಿ ಇಲಾಖೆ, ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಈ ರಸ್ತೆ ನೀಲ ನಕ್ಷೆ ಒಳಗೊಂಡ ಪ್ರಸ್ತಾವನೆಯೊಂದನ್ನು ರೂಪಿಸಿ ಶೀಘ್ರವೇ ಸರ್ಕಾರಕ್ಕೆ ಕಳುಹಿಸಬೇಕೆಂದು ಹಾಗೂ ನಗರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯೋಜನೆವೊಂದನ್ನು ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಉಮೇಶ ಕತ್ತಿ ಅವರು ಸೂಚಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ದೂರಿಗೆ ಸ್ಪಂಧಿಸಲು ವಾಹನವಿಲ್ಲ…!

ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಹೆಸ್ಕಾಂ ಸಮಸ್ಯೆಗಳು ತಲೆದೋರಿದಾಗ, ಅವಘಡಗಳು ಸಂಭವಿಸಿದಾಗ ಸಾರ್ವಜನಿಕರು ತಕ್ಷಣ ದೂರವಾಣಿ ಕರೆ ಮಾಡಿ ಹೆಸ್ಕಾಂ ಕಚೇರಿಗೆ  ವಿಷಯ ತಿಳಿಸಿದರೆ, ಆ ಪ್ರದೇಶಕ್ಕೆ ಬಂದು ಅವಘಡ ಸರಿಪಡಿಸಲು ಹೆಸ್ಕಾಂ ಇಲಾಖೆಗೆ ಒಂದು ವಾಹನದ ವ್ಯವಸ್ಥೆ ಇಲ್ಲ. ಓಬೆರಾಯನ ಕಾಲದ ಜೀಪ್ ಒಂದು ಕೆಟ್ಟು ನಿಂತಿದೆ. ಇನ್ನೊಂದು ಜೀಪಿನ ಅಗತ್ಯವಿದೆ. ಹೆಸ್ಕಾಂ ಅಭಿಯಂತರರು ತಮ್ಮ ವಾಹನದ ಮೇಲೆ ಇಲ್ಲವೆ ಲೈನ್ಮನ್ಗಳು ತಮ್ಮ ಸೈಕಲ್ ಮೇಲೆ ಬಂದು ಹೆಸ್ಕಾಂ ಅವಘಡಗಳನ್ನು ಒಲ್ಲದ ಮನಸ್ಸಿನಿಂದ ಬಂದು ಸರಿಪಡಿಸುವ ಅನಿವಾರ್ಯತೆ ಈ ಇಲಾಖೆಯದ್ದು. ಈ ವಿಷಯವನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಕರ್ತರು ಸಚಿವ ಉಮೇಶ ಕತ್ತಿ ಅವರ ಮುಂದಿಟ್ಟಾಗ, ಈ ಸಮಸ್ಯೆ ಈಗ ಗಮನಕ್ಕೆ ಬಂದಿದ್ದು, ದೂರುಗಳಿಗೆ ಸ್ಪಂಧಿಸಿ ಹೆಸ್ಕಾಂ ಗ್ರಾಹಕರಿಗೆ  ಉತ್ತಮ ಹಾಗೂ ಶೀಘ್ರ ಸೇವೆ ನೀಡಲು ಹೊಸ ಜೀಪೊಂದರ ವ್ಯವಸ್ಥೆಗೆ ಗಮನಹರಿಸುವುದಾಗಿ ತಿಳಿಸಿದರು…

loading...

LEAVE A REPLY

Please enter your comment!
Please enter your name here