ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳ ಲಾಭ ಕಾರ್ಮಿಕರಿಗೆ ಸಿಗಲಿ

1
166
loading...

ಬೆಳಗಾವಿ 29: ಅಸಂಘಟಿತ ಕಾರ್ಮಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಧನಸಹಾಯ, ಅಪಘಾತ ಪರಿಹಾರ, ಹೆರಿಗೆ ಸೌಲಭ್ಯ ಸೇರಿದಂತೆ ಮಾಹೆಯಾನ ಪಿಂಚಣಿ ಸೌಲಭ್ಯಗಳಂತಹ ಲಾಭ ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಶ್ರೀಧರರಾವ ಅವರು ಅಸಂಘಟಿತ ಕಾರ್ಮಿಕರಿಗೆ ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿಂದು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ಸುಮಾರು 7 ಲಕ್ಷ ಅಸಂಘಟಿತ ಕಾರ್ಮಿಕರು ವಿವಿಧ ರಸ್ತೆ, ಕಟ್ಟಡ ನಿರ್ಮಾಣ, ಕೈಗಾರಿಕೆಗಳಲ್ಲಿ ಮತ್ತು ವಿವಿಧ ಕಾಮಗಾರಿಗಳಲ್ಲಿ ತೊಡಗಿದ್ದಾರೆ. ಆದರೆ ಈವರೆಗೆ 2 ಲಕ್ಷ ಜನ ಮಾತ್ರ ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದು, ಕಲ್ಯಾಣ ಮಂಡಳಿಯಿಂದ ದೊರಕುವ ಸೌಲಭ್ಯಗಳ ಲಾಭ ಪಡೆಯುತ್ತಿದ್ದಾರೆ. ಇನ್ನೂ 4-5 ಲಕ್ಷ ಜನ ಕಾರ್ಮಿಕರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇವರೆಲ್ಲರೂ ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ದೊರೆಯುವ ಅರ್ಜಿ ಪಡೆದು ಹೆಸರು ನೋಂದಾಯಿಸಿಕೊಂಡು ಸಿಗಬಹುದಾದ ವಿವಿಧ ಸೌಲಭ್ಯಗಳ ಲಾಭ ಪಡೆಯಬೇಕು. ಅದರಂತೆ ಇಂತಹ ಕಾರ್ಮಿಕರನ್ನು ಗುರುತಿಸಿ ನೋಂದಾಯಿಸಿಕೊಂಡು ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಸಹ ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ಮಾಡಬೇಕೆಂದು ಸಲಹೆ ನೀಡಿದರು.

ಕಾನೂನು ಸೇವಾ ಪ್ರಾಧಿಕಾರವು ಇಂತಹ ಕಾರ್ಮಿಕರನ್ನು ನೋಂದಣಿಗೆ ಪ್ರೌತ್ಸಾಹವನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರ ಸ್ಥಳಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳುವಂತಹ ವಿನೂತನವಾದ ಕಾರ್ಯಕ್ರಮವನ್ನು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅದರಂತೆ ಸರ್ಕಾರದಿಂದ ಈ ಅಸಂಘಟಿತ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯಲು ಅನುಕೂಲವಾಗುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸಹ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಉಚ್ಛ ನ್ಯಾಯಾಲಯದಲ್ಲಿ ಹಾಕಲಾಗಿದ್ದು, ಇದರಿಂದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚಿನ ಸೌಲಭ್ಯಗಳು ದೊರೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರನ್ನು ಸೇವೆಯಲ್ಲಿ ತೊಡಗಿಸಿಕೊಂಡ ಗುತ್ತಿಗೆದಾರರಿಂದ ಸರ್ಕಾರಕ್ಕೆ ಶೇ. 1 ರಷ್ಟು ಕರ ಸಂಗ್ರಹಿಸಲಾಗುತ್ತದೆ. 5 ವರ್ಷದಲ್ಲಿ ಸುಮಾರು 500 ಕೋಟಿ ರೂ.ಗಳಷ್ಟು ಕರವನ್ನು ಸಂಗ್ರಹಿಸಲಾಗಿದೆ. ಪ್ರತಿವರ್ಷ 100 ಕೋಟಿ ರೂ. ಇದರಿಂದ ಬಡ್ಡಿ ಸಂಗ್ರಹವಾಗುತ್ತಿದೆ. ಆದರೆ ಅಸಂಘಟಿತ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಕಾಲಕ್ಕೆ ಸಿಗುತ್ತಿಲ್ಲ. ಕಾರಣ ಇಂತಹ ಅಸಂಘಟಿತ ಕಾರ್ಮಿಕರು ತಕ್ಷಣ ತಮ್ಮ ಹೆಸರನ್ನು ನೋಂದಾಯಿಸಬೇಕು. ಈ ಕುರಿತಂತೆ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ತಮಗೆ ಸಿಗಬಹುದಾದ ಎಲ್ಲ ರೀತಿಯ ಸೌಲಭ್ಯಗಳ ಲಾಭವನ್ನು ಪಡೆಯಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಆಯುಕ್ತ ಶ್ರೀ. ವಸಂತಕುಮಾರ ಹಿಟ್ಟಣಗಿ ಅವರು ಭಾರತದಲ್ಲಿ 57 ಕಾರ್ಮಿಕ ಕಾಯಿದೆಗಳನ್ನು ರಚನೆ ಮಾಡಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ಹತ್ತು ಹಲವು ಲಾಭಗಳು ಈ ಕಾಯಿದೆ ಅಡಿಯಲ್ಲಿ ನೀಡಲಾಗುತ್ತಿದೆ. ಆದರೆ ಈ ಕಾಯಿದೆ ಅಡಿ ಸಂಘಟಿತ ವರ್ಗದ ಶೇ.4 ರಷ್ಟು ಕಾರ್ಮಿಕರು ಮಾತ್ರ ಲಾಭ ಪಡೆಯುತ್ತಿದ್ದಾರೆ. ಶೇ. 96 ರಷ್ಟು ಇರುವ ಅಸಂಘಟಿತ ಕಾರ್ಮಿಕರು ಈ ಕಾಯಿದೆ ಅಡಿ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರಾಷ್ಟ್ತ್ರದಲ್ಲಿ ಸುಮಾರು 10 ಕೋಟಿ ಜನ ಇಂತಹ ಕಾರ್ಮಿಕರಿದ್ದು, ಅವರೆಲ್ಲರೂ ಈ ಕಾಯಿದೆಗಳ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.

ಅದರಂತೆ ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾಯಿದೆ 2006 ರಲ್ಲಿ ಜಾರಿಯಾಗಿದೆ. 2007 ರಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿ ಮಂಡಳಿ ರಚನೆಯಾಗಿದ್ದು, ಈ ಮಂಡಳಿಯು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ 12 ರೀತಿಯ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಕಾರಣ ಇವುಗಳ ಲಾಭ ಕಾರ್ಮಿಕರು ಪಡೆಯಬೇಕು. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಅಸಂಘಟಿತ ಕಾರ್ಮಿಕರಿಗೆ ತಲಾ 2 ಲಕ್ಷ ರೂ. ವೆಚ್ಚದಲ್ಲಿ ರಾಜೀವಗಾಂಧಿ ವಸತಿ ನಿಗಮದ ಸಹಯೋಗದೊಂದಿಗೆ ಮನೆ ನಿರ್ಮಿಸಿ ಕೊಡುವ ವ್ಯವಸ್ಥೆಯೊಂದನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಕೋರಲಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಅವರು ಅಸಂಘಟಿತ ಕಾರ್ಮಿಕರ ಶ್ರಮದ ಫಲವಾಗಿ ಸುಸಜ್ಜಿತ ಕಟ್ಟಡಗಳು ನಿರ್ಮಾಣವಾಗುತ್ತವೆ. ಆದರೆ ವಿವಿಧ ಸೌಲಭ್ಯಗಳ ಲಾಭದಿಂದ ವಂಚಿತರಾಗುತ್ತಿದ್ದಾರೆ. ಅಸಂಘಟಿತ ಕಾರ್ಮಿಕರು ಬಡ, ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದರಿಂದ ಮತ್ತು ವಿವಿಧ ಸೌಲಭ್ಯಗಳ ಕುರಿತು ಅರಿವು ಇಲ್ಲದೇ ಇರುವುದರಿಂದ ಅವರಿಗೆ ಸಿಗಬಹುದಾದ ಸೌಲಭ್ಯಗಳು ಸಿಗುತ್ತಿಲ್ಲ. ಕಾರಣ ಕಾರ್ಮಿಕ ಇಲಾಖೆ ಅಧಿಕಾರಿಗಳು ಅವರಿಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಅವದಸ್ಯ ಕಾರ್ಯದರ್ಶಿ ವಿಶ್ವನಾಥ ಅಂಗಡಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಜಿ.ಮುಳವಾಡಮಠ, ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ಆಯುಕ್ತ ಪಿ.ಎನ್. ರವೀಂದ್ರ, ಕಾರ್ಮಿಕ ಅಧಿಕಾರಿ ಸಂತೋಷ ಹಿಪ್ಪರಗಿ, ಹಿರಿಯ ನ್ಯಾಯವಾದಿಗಳಾದ ಬಿ.ಎಸ್. ಸಂಗತಿ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಬಿ. ಬೂದಿಹಾಳ ಸ್ವಾಗತಿಸಿದರು. ನ್ಯಾಯವಾದಿಗಳ ಸಂಘ ಪ್ರಧಾನ ಕಾರ್ಯದರ್ಶಿ ಆರ್.ಬಿ. ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು.

loading...

1 COMMENT

LEAVE A REPLY

Please enter your comment!
Please enter your name here