ನಿಮಗಿದೋ ನಮ್ಮ ನಮನ

0
31
loading...

ತಾವು ನಮ್ಮನ್ನು ಅಗಲಿ 22 ವರ್ಷ ಆಗಿರುವ ಈ ಸಂದರ್ಭದಲ್ಲಿ ವರ್ಷ ಪರಂಪರೆಯಂತೆ ನಾವು ತಮಗೆ ನಮ್ಮ ನಿವೇದನೆಯನ್ನು ಸಲ್ಲಿಸುತ್ತಿದ್ದೇವೆ. ನೀವು ನಮ್ಮನ್ನು ಅಗಲಿ ಹೋದ ಆಗಸ್ಟ್ ನಮ್ಮೇಲ್ಲರ ಪಾಲಿಗೆ ಕರಾಳ ದಿನವಾಗಿರುವಂತೆ ಸಂಕಲ್ಪದ ದಿನವೂ ಆಗಿದೆ. ಇಂದು ಭವಿಷ್ಯದ ನಿರ್ಧಾರಗಳನ್ನು ಗಟ್ಟಿಗೊಳಿಸಿಕೊಂಡು ಅವುಗಳನ್ನು ತಮಗೆ ಸಮರ್ಪಿಸಿ ಮುಂದೆ ಅವುಗಳನ್ನು ಕಾರ್ಯ ರೂಪಕ್ಕೆ ತರುವುದರ ಜೊತೆಗೆ ಕಳೆದ ವರ್ಷದಲ್ಲಿ ಆಗಿರುವ ಪ್ರಗತಿಯ ಚಿತ್ರವನ್ನು ನೀಡುವ ಪರಂಪರೆ ನಮ್ಮದಾಗಿದೆ.

ತಾವು ಕಟ್ಟಿ ಬೆಳೆಸಿದ ಕನ್ನಡಮ್ಮ ದಿನ ಪತ್ರಿಕೆ ದಾಪುಗಾಲು ಹಾಕುತ್ತಾ ಮುಂದೆ ಸಾಗಿದೆ. ಅದನ್ನು ಅಭಿವೃದ್ದಿಪಡಿಸಲು ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ 3 ತಿಂಗಳಿನಿಂದ ಹುಬ್ಬಳ್ಳಿ ಆವೃತ್ತಿಯನ್ನು ಆರಂಭಿಸಲಾಗಿದೆ. ಅಲ್ಲಿಯೇ ಪತ್ರಿಕೆಯನ್ನು ಮುದ್ರಿಸಿ  ವಿತರಣೆ ಮಾಡುವ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದೆ. ಇದರಿಂದ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ನಮ್ಮ ಪತ್ರಿಕೆಯ ಪ್ರಸಾರ ವ್ಯಾಪ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೊರಟಿದೆ. ಇದರ ಜೊತೆಗೆ ನಮ್ಮದೇ ಆದ ಬಣ್ಣದ ಮುದ್ರಣವನ್ನು ಆರಂಭಿಸಿ ರಾಜ್ಯದ ಎಲ್ಲ ಕಡೆಗೆ ಪತ್ರಿಕೆ ತಲುಪಿಸುವ ಹೆಬ್ಬಯಕೆಯನ್ನು ಮುಂದಿನ ದಿನಗಳಲ್ಲಿ ಸಾಕಾರಗೊಳಿಸಲು ನಾವು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇದರ ಜೊತೆಗೆ ಪತ್ರಿಕೆಯ ಪುಟ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ಯುವಶಕ್ತಿಯ ಅಭಿರುಚಿಗೆ ತಕ್ಕಂತೆ ಪತ್ರಿಕೆಯಲ್ಲಿ ಹಲವಾರು ವಿಶೇಷತೆಗಳನ್ನು ತರಲಾಗಿದೆ.

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಮದುವೆ ಮಾಡಿ ನೋಡಿ ಮನೆ ಕಟ್ಟಿ ನೋಡು ಎಂಬ ಮಾತನ್ನು ಹೇಳುತ್ತಾ ಬಂದಿದ್ದರು. ಆದರೆ ಈಗ ಈ ಮಾತಿಗೆ ಪತ್ರಿಕೆ ನಡೆಸಿ ನೋಡು ಎಂಬ ಪದವನ್ನು ಸೇರಿಸಬೇಕಾಗಿದೆ. ಆದರೆ ನಮಗೆ ನಿಮ್ಮ ಆಶೀರ್ವಾದದ ಕವಚ ಇರುವದರಿಂದ ಎದುರಾಗುವ ಎಲ್ಲ ತೊಂದರೆಗಳನ್ನು ಎದುರಿಸಿ ಮುಂದೆ ಸಾಗುವ ಶಕ್ತಿಯಿದೆ. ಕುವೆಂಪು ಅವರು ಹೇಳಿದಂತೆ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ ಎಂಬುದು ನಮ್ಮ ತಾರಕ ಮಂತ್ರವಾಗಿದೆ.

ಪತ್ರಿಕೆಯ ಬೆಳವಣಿಗೆಯ ಜೊತೆಗೆ ಕನ್ನಡ ಪರ ಹೋರಾಟವನ್ನು ಮುಂದುವರೆಸುವುದು ನಮ್ಮ ಸಂಕಲ್ಪವಾಗಿದೆ. ಈ ಎರಡು ಮಾರ್ಗದಲ್ಲಿ ನಾವು ಅವಿರತವಾಗಿ ಸಾಗುವ ಗಟ್ಟಿ ನಿರ್ಧಾರ ಮಾಡಿದ್ದೇನೆ. ಅದಕ್ಕಾಗಿ ಪ್ರಯತ್ನದ ಪ್ರೇರಣಾಶಕ್ತಿ ನಿಮ್ಮದು ಆಗಿದ್ದರೂ ಪ್ರಯತ್ನ ಮಾಡುವ ಛಲ ನಮ್ಮದಾಗಿದೆ.  ಫಲ ನೀಡುವುದು ದೇವರಿಗೆ ಬಿಟ್ಟ ವಿಷಯವಾಗಿದೆ. ನಮ್ಮ ಮುಂದಿನ ಕಾರ್ಯಗಳಿಗೆ  ತಮ್ಮ ಆಶೀರ್ವಾದದ ರಕ್ಷಾ ಕವಚ ಇರಲಿ. ನಿಮ್ಮ ನೆನಪು ನಮಗೆ ಸದಾಕಾಲ ಬೆಂಗಾವಲಾಗಿರಲಿ ಮುಂದಿನ ವರ್ಷದ ತಮ್ಮ ಪುಣ್ಯ ದಿನದಂದು ನಾವು ಸ್ವಂತ ಮುದ್ರಣದಲ್ಲಿ ಪತ್ರಿಕೆಯನ್ನು ಮುದ್ರಿಸುವ ಆಶೀರ್ವಾದವನ್ನು ತಾವು ನೀಡುತ್ತೀರಿ ಎಂದು ಬಯಸುತ್ತಿದ್ದೇನೆ. ಜೊತೆಗೆ ದೇವರಲ್ಲಿ ಸಹ ವಿನಮ್ರವಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ.

ತಾವು ಕೇವಲ ಒಂದು ಪತ್ರಿಕೆಯ ಸಂಪಾದಕರಾಗಿ ಕಾರ್ಯಮಾಡಿರಲಿಲ್ಲ. ಕೇವಲ ಒಂದು ಪತ್ರಿಕೆಯನ್ನು ಕಟ್ಟಿ ಬೆಳೆಸಲಿಲ್ಲ ಗಡಿನಾಡಿನ ಗಂಡುಮೆಟ್ಟಿನ ಸ್ಥಳವಾದ ಬೆಳಗಾವಿಯಲ್ಲಿ ಕನ್ನಡಕ್ಕೆ ಭದ್ರ ನೆಲೆ ಒದಗಿಸುವ ಕಾರ್ಯ ಮಾಡಿದಿರಿ. ಬೀದಿ ಬೀದಿಗಳಲ್ಲಿ ಕನ್ನಡ ಯುವಕರ ಕಾರ್ಯ ಪಡೆಗಳನ್ನು ನಿರ್ಮಾಣ ಮಾಡಿದಿರಿ. ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಸಿಂಹದಂತೆ ಘರ್ಜಿಸುವ ಕಾರ್ಯ ಮಾಡಿದಿರಿ. ತಾವು ಮಾಡಿದ ಆ ಸಾಧನೆ ನಮ್ಮ ಮುಂದೆ ಈಗಲೂ ಜ್ಯೌತಿಯಾಗಿ ಬೆಳಗುತ್ತಿದೆ. ನಾವು ಆ ಜ್ಯೌತಿಯ ಬೆಳಕಿನಲ್ಲಿ ಮುಂದೆ ಮುಂದೆ ಹೆಜ್ಜೆ ಹಾಕುತ್ತಿದ್ದೇವೆ. ನೀವು  ನಮಗೆ ಆ ಬೆಳಕಿನಲ್ಲಿ ಮುಂದೆ ಸಾಗುವ ಶಕ್ತಿಯನ್ನು ನಿರಂತರವಾಗಿ ದಯಪಾಲಿಸುವ ಪ್ರೇರಣೆಯನ್ನು ನೀಡಬೇಕು. ಅಂದರೆ ನಾವು ಧೈರ್ಯದಿಂದ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂಬ ಕೋರಿಕೆಯನ್ನು ನಿಮ್ಮ ಮುಂದೆ ಈ ನುಡಿ ನಮನವನ್ನು ನೂರೊಂದು ಪ್ರಣಾಮಗಳೊಂದಿಗೆ ತಮಗೆ ಸಲ್ಲಿಸುತ್ತಿದ್ದೇವೆ. ಇದರ ಜೊತೆಗೆ ನಮ್ಮ ಸಂಕಲ್ಪ ಶಕ್ತಿಯನ್ನು ಗಟ್ಟಿಗೊಳಿಸಿಕೊಂಡು ಮುಂದಿನ ಪ್ರಗತಿಯ ಹಾದಿಗೆ ಸಾಗುವ ಭರವಸೆಯನ್ನು ನಿಮಗೆ ನೀಡುತ್ತಿದ್ದೇವೆ. ಜೊತೆಗೆ ಜನರೂ ಸಹ ನಮ್ಮ ಕಾರ್ಯ ಮೆಚ್ಚಿ ನಮಗೆ ನಿರಂತರವಾದ ಬೆಂಬಲವನ್ನು ನೀಡುತ್ತಾರೆ ಎಂಬ ಭರವಸೆ ನಮಗೆ ಇದೆ. ಆ ಭರವಸೆಯ ಬೆಳಕಿನಲ್ಲಿ ನಾವು ಮುಂದಿನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ರಭಸದಿಂದ ಹೆಜ್ಜೆಗಳನ್ನು ಹಾಕತೊಡಗಿದ್ದೇವೆ. ನಮ್ಮ ಸಾಧನೆಯ ಮಾರ್ಗ ತಮ್ಮ ಆತ್ಮಕ್ಕೆ ತೃಪ್ತಿ ತಂದಿದೆ ಎಂದು ಭಾವಿಸಿಕೊಂಡು ನಾವು ಮುಂದಿನ ದಿನಗಳಲ್ಲಿಯೂ ತಮಗೆ ಇದೇ ರೀತಿಯ ತೃಪ್ತಿ ತರುವ ಕಾರ್ಯ ಮಾಡುತ್ತೇವೆ ಎಂದು ಹೇಳುತ್ತಾ ಮತ್ತೊಮ್ಮೆ ನಮನಗಳನ್ನು ಸಲ್ಲಿಸುತ್ತಿದ್ದೇವೆ.

ಸಂಪಾದಕರು

loading...

LEAVE A REPLY

Please enter your comment!
Please enter your name here