ಕಾಲೇಜುಗಳಿಗೆ ಮೂಲಭೂತ ಸೌಲಭ್ಯಕ್ಕೆ 300 ಕೋಟಿ ರೂ.

0
11
loading...

ಬೆಳಗಾವಿ,26-ರಾಜ್ಯದಲ್ಲಿರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಸಕ್ತ ವರ್ಷ 300 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಖಾತೆ ಸಚಿವರಾದ ಸಿ.ಟಿ. ರವಿ ಅವರು ಇಂದಿಲ್ಲಿ ಹೇಳಿದರು.

ವಿಶ್ವೇಶ್ವರಯ್ಯಾ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ 360 ಸರ್ಕಾರಿ ಕಾಲೇಜುಗಳಿದ್ದು, ಈ ಎಲ್ಲ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯವನ್ನು ಒದಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ವಿಜ್ಞಾನ ಮಹಾವಿದ್ಯಾನಿಲಯಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲು 48 ಕೋಟಿ ರೂ.ಗಳನ್ನು ಹಾಗೂ ಶೌಚಾಲಯಗಳನ್ನು ಸ್ಥಾಪಿಸಲು 14 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇನ್ನುಳಿದ ಹಣವನ್ನು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಬಳಸಲಾಗುವುದೆಂದು ಹೇಳಿದ ಅವರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿಯೊಂದು ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬಂದು ಸ್ವಯಂ ಉದ್ಯೌಗ ಪಡೆದು ಸ್ವಾವಲಂಬಿಯಾಗಿ ಬದುಕಲು ಅವಶ್ಯವಿರುವ ಶಿಕ್ಷಣವನ್ನು ನಾವಿಂದು ನೀಡಬೇಕಾಗಿದೆ. ಇದಕ್ಕಾಗಿ ಹೊಸ ನೀತಿಯನ್ನು ಅಳವಡಿಸಲಾಗುತ್ತಿದೆ. ಮೊದಲನೇ ವರ್ಷದ ಡಿಗ್ರಿ ಪದವಿಗೆ ಆಗಮಿಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲೀಷ ಮಾತನಾಡುವ ಭಯವಿರುವುದರಿಂದ ಈ ವಿದ್ಯಾರ್ಥಿಗಳಿಗೆ ವಿಶೇಷವಾಗಿ 3 ಗಂಟೆಗಳ ಕಾಲ ಇಂಗ್ಲೀಷ ಹೇಳಿಕೊಡುವ ಆಂಗ್ಲ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2ನೇ ವರ್ಷದ ಡಿಗ್ರಿಯಲ್ಲಿ ನೈತಿಕ ಶಿಕ್ಷಣ ಹಾಗೂ ಮಾನಸಿಕ ವಿಕಾಸಕ್ಕೆ ಆದ್ಯತೆ ನೀಡಲಾಗುವುದು. 3ನೇ ವರ್ಷದ ತರಗತಿಯಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣವನ್ನು ಕೊಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 7 ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳನ್ನು ಡಿಮ್ಡ್ ವಿಶ್ವವಿದ್ಯಾಲಯಗಳೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಅರ್ಜಿ ಹಾಕಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ, ಶಿಲ್ಕು ನಿಗದಿ ಹಾಗೂ ಮೀಸಲಾತಿ ಕುರಿತು ಚರ್ಚೆಗಳು ನಡೆದಿವೆ. ಸರ್ಕಾರದ ನಿಯಮಗಳಿಗೆ ಈ ಸಂಸ್ಥೆಗಳು ಒಪ್ಪಿಗೆ ನೀಡಿದಲ್ಲಿ ಮುಂದಿನ ವಿಧಾನಮಂಡಲ ಅಧಿವೇಶನಗಳಲ್ಲಿ ಖಾಸಗಿ ವಿಶ್ವವಿದ್ಯಾನಿಲಯದ ಮಸೂದೆಯನ್ನು ಮಂಡಿಸಲಾಗುವುದು. ಇದಕ್ಕಿಂತ ಮೊದಲು ಶಿಕ್ಷಣ ತಜ್ಞರ ಸಭೆಯನ್ನು ಸಹ ನಡೆಸಲಾಗುವುದೆಂದು ಅವರು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 17 ವಿಶ್ವವಿದ್ಯಾಲಯಗಳು ಬರುತ್ತವೆ. ಈಗಾಗಲೇ ತಾವು 14 ವಿಶ್ವವಿದ್ಯಾನಿಲಯಗಳನ್ನು ಭೇಟಿ ನೀಡಿದ್ದು, ಬರುವ ಅಕ್ಟೌಬರ್ ತಿಂಗಳಲ್ಲಿ ಜಾನಪದ ವಿಶ್ವವಿದ್ಯಾನಿಲಯಕ್ಕೂ ಭೇಟಿ ನೀಡಿ ನಂತರ ಈ ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಚಿಂತನೆ ನಡೆಸುವುದಾಗಿ ಸಿ.ಟಿ. ರವಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ. ಸಂಜಯ ಪಾಟೀಲ, ಅರುಣ ಶಹಾಪೂರಕರ, ವಿಶ್ವವಿದ್ಯಾನಿಲಯದ ಕುಲಪತಿ ಡಾ|| ಮಹೇಶಪ್ಪ ಅವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here