ವಚನಭ್ರಷ್ಟ ಮುಖ್ಯಮಂತ್ರಿ: ಸಚಿವ ಬಾಲಚಂದ್ರ ಆರೋಪ

0
14
loading...

ಗೋಕಾಕ, ಸೆ. 12: ಮುಖ್ಯಮಂತ್ರಿ ಜಗದೀಶ ಶೆಟ್ಟರ ವಚನ ಭ್ರಷ್ಟರಾಗಿದ್ದಾರೆ. ಅವರಿಂದ ಇದನ್ನು ನೀರೀಕ್ಷಿಸಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ತಾವು ಕೊಟ್ಟ ಮಾತಿನಂತೆ ಸಚಿವ ಸಂಪುಟದ ಸದಸ್ಯರ ಖಾತೆಗಳನ್ನು ಮರು ಹಂಚಿಕೆ ಮಾಡಲಿ. ತಮ್ಮ ಹಾಗೂ ಗೋವಿಂದ ಕಾರಜೋಳ ಅವರ ಖಾತೆಗಳನ್ನು ತಕ್ಷಣವೇ ಬದಲಾಯಿಸಿ ತಮಗಂಟಿದ ವಚನಭ್ರಷ್ಟ ಆರೋಪವನ್ನು ಕಳೆದುಕೊಳ್ಳಲಿ. ಜೊತೆಗೆ ರಾಜ್ಯದ ಬಿಜೆಪಿಯ ಹೊಣೆಗಾರಿಕೆಯನ್ನು ಉತ್ತರ ಕರ್ನಾಟಕದವರಿಗೆ ವಹಿಸಲಿ. ಗೋವಿಂದ ಕಾರಜೋಳ ಅವರನ್ನು ಸಾಧ್ಯವಾಗದಿದ್ದರೆ ಸಂಸದ ಪ್ರಹ್ಲಾದ ಜೋಷಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿ ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಗೆ ಒತ್ತು ಕೊಡಬೇಕೆಂದು ಸಚಿವ ಬಾಲಚಂದ್ರ ಜಾರಕಿಹೊಳಿ ಆರೋಪದೊಂದಿಗೆ ಆಗ್ರಹಿಸಿದರು.

ಬುಧವಾರದಂದು ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ನಡೆದ ಅರಭಾವಿ ಮತ ಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿಗಳು ತಮಗೂ ಹಾಗೂ ಗೋವಿಂದ ಕಾರಜೋಳ ಅವರಿಗೆ ಹೊಸ ಖಾತೆಗಳನ್ನು ನೀಡುವ ಭರವಸೆಯನ್ನು ನೀಡಿದ್ದರು. ಆದರೆ 3 ತಿಂಗಳು ಗತಿಸಿದರೂ ಸುಳ್ಳು ಹೇಳುತ್ತಾ ಎಲ್ಲವನ್ನೂ ಮುಂದೂಡುತ್ತಿದ್ದಾರೆ. ಈ ರೀತಿ ವಚನಭ್ರಷ್ಟ ಆದರೆ ಅವರನ್ನು ನಂಬುವುದಾದರೂ ಹೇಗೆ? ಬೇರೆ ಸಚಿವರಿಗೆ ಬೇರೆ ಸಚಿವರಿಗೆ ಇತರ ಖಾತೆಗಳ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಾರೆ. ಆದರೆ ನಮ್ಮಿಬ್ಬರಿಗೂ ಕೈಕೊಟ್ಟಿದ್ದಾರೆ. ಗೋವಿಂದಕಾರಜೋಳ ಅವರಿಗೆ ಸಣ್ಣ ನೀರಾವರಿ ಜೊತೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ಖಾತೆಯನ್ನು ನೀಡಬೇಕು. ಆದರೆ ವರಿಷ್ಟರು ಸಣ್ಣ ನೀರಾವರಿ ಖಾತೆಯನ್ನು ಬಿಟ್ಟು ಕೊಡು ಎಂದು ಕೇಳುತ್ತಿರುವುದು ಯಾವ ಲೆಕ್ಕಚಾರ ನಮ್ಮಿಬ್ಬರ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವ ಇವರು ಮಾಧ್ಯಮದ ಮುಂದೆ ಈ ವಿಷಯ ಎತ್ತಿಬೇಡಿ ಎಂದು ಹೇಳಿದ್ದರು. ಆದರೆ ಈಗ ಅನಿವಾರ್ಯವಾಗಿ ನಾವು ಈ ವಿಷವಯವನ್ನು ಬಹಿರಂಗಗೊಳಿಸುತ್ತಿದ್ದೇವೆ ಎಂದರು.

ಪಕ್ಷದೊಳಗೆ ಏನೇ ಸಮಸ್ಯೆ ಭಿನ್ನಾಭಿಪ್ರಾಯ ಇದ್ದರೂ ಅವುಗಳನ್ನು ಪಕ್ಷದ ವೇದಿಕೆಯಲ್ಲಿ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಭರವಸೆ ನೀಡುವ ಜಗದೀಶ ಶೆಟ್ಟರ ನಮ್ಮನ್ನು ಕಂಡಕೂಡಲೇ ಎಲ್ಲವನ್ನು ಮರೆತು ತಾರಮ್ಮಯ್ಯ ಆಡಿಸುತ್ತಿದ್ದಾರೆ. ಇದು ಯಾವ ಪರಿಣಾಮವನ್ನು ಬಿರುತ್ತದೆ ಎಂಬ ಬಗ್ಗೆ ಮುಖ್ಯಮಂತ್ರಿಗೆ ಗೊತ್ತೆಯಿಲ್ಲ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ನಾಯಕರನ್ನು ಈ ರೀತಿ ಕಡೆಗಣಿಸಿದರೆ ಚುನಾವಣೆಯಲ್ಲಿ ನಾವು ಯಾವ ರೀತಿ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದ ಜಾರಕಿಹೊಳಿ ಮುಖ್ಯಮಂತ್ರಿ ಏನೇ ಮಾಡಲಿ ವಚನಭ್ರಷ್ಟರಾಗಲಿ ನಾವಂತೂ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಗೊಳಿಸಿ ಮುಂದಿನ ಚುನಾವಣೆಯಲ್ಲಿ ಖಚಿತವಾಗಿ 15 ಶಾಸಕರನ್ನು ಆರಿಸಿ ತರುತ್ತೇವೆ ಎಂದು ಭರವಸೆ ಮಾತು ಹೇಳಿದರು.

ನಾವು ಇಷ್ಟೆಲ್ಲ ಹೇಳಿದ ಮೇಲೂ ನಮ್ಮ ಇಬ್ಬರ ಖಾತೆಗಳನ್ನು ತಕ್ಷಣವೇ ಬದಲಾಯಿಸದಿದ್ದರೆ ಈ ಮುಖ್ಯಮಂತ್ರಿಗಳಾದರೂ ಇದ್ದಾದರೂ ಏನು ಪ್ರಯೋಜನ ಎಂದು ವಿಷಾದ ವ್ಯಕ್ತಪಡಿಸಿದರು.

ಪಕ್ಷಕ್ಕೆ ಕಾರ್ಯಕರ್ತರೇ ನಿಜವಾದ ಆಸ್ತಿ. ಕಾರ್ಯಕರ್ತರನ್ನು ಕಡೆಗಣಿಸದೇ ಅವರನ್ನು ಗೌರವಯುತವಾಗಿ ಕಾಣಬೇಕು. 2004 ರಿಂದ ಈಚೆಗೆ ಅರಭಾಂವಿ ಮತಕ್ಷೇತ್ರದ ಅಭಿವೃದ್ದಿಗೆ ನೂರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದ್ದೇವೆ. ಸರ್ಕಾರದ ವಿವಿಧ ಇಲಾಖೆಗಳಿಂದ ಸಾಕಷ್ಟು ಅಭಿವೃದ್ದಿ ಪರ ಕೆಲಸಗಳನ್ನು ಹಮ್ಮಿಕೊಂಡಿದ್ದೇವೆ. ಆದರೂ ಚಿಕ್ಕ ಗುಡಿಯನ್ನು ನಿರ್ಮಿಸದ ವಿರೋಧಿಗಳು ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೇ ಕಾರ್ಯಕರ್ತರು ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವಂತಹ ಪ್ರಾಮಾಣಿಕ ಕೆಲಸವನ್ನು ಮಾಡಬೇಕು. ಬಿಜೆಪಿಯಿಂದಲೇ ಮುಂದಿನ 2013ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನಮ್ಮ ಬೆಂಬಲಿಗ ಶಾಸಕರಿಗೆ ಹಾಗೂ ಇನ್ನೂ 15 ಜನ ಮುಖಂಡರಿಗೆ ಬಿಜೆಪಿಯಿಂದ ಟಿಕೇಟ ಕೊಡಿಸಿ ಅವರನ್ನು ಗೆಲ್ಲಿಸುತ್ತೇನೆಂದು ತಿಳಿಸಿದರು.

ಬಿಜೆಪಿಯನ್ನು ಮತ್ತೇ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರೊಂದಿಗೆ ರಾಜ್ಯಾಧ್ಯಂತ ಪ್ರವಾಸ ಮಾಡುತ್ತೇನೆ. ಅಕ್ಟೌಬರ 15 ರ ನಂತರ ಬೆಳಗಾವಿ ಹಾಗೂ ಚಿಕ್ಕೌಡಿ ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸುತ್ತೇನೆ. ಕನಿಷ್ಠವೆಂದರೂ ಜಿಲ್ಲೆಯಲ್ಲಿ 15 ಸ್ಥಾನಗಳಲ್ಲಿ ಗೆಲುವನ್ನು ಸಂಪಾದಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಬಿಜೆಪಿಯನ್ನು ಕಟ್ಟಿ ಬೆಳೆಸೋಣ. ಪಕ್ಷದ ಅಭಿವೃದ್ದಿಗೆ ಎಲ್ಲರೂ ತಮ್ಮತಮ್ಮಲ್ಲಿನ ವೈಯಕ್ತಿಕ ವೈಷಮ್ಯಗಳನ್ನು ಮರೆತು ಒಂದಾಗಿ ಮತ್ತೇ ಅಧಿಕಾರಕ್ಕೆ ತರುತ್ತೇವೆ ಎಂದು ತಿಳಿಸಿದರು. ಎಲ್ಲ ಸಮುದಾಯದವರೊಂದಿಗೆ ಸಹೋದರತ್ವ ಭಾವನೆಯಿಂದ ಇರುವ ತಮಗೆ ಅರಭಾಂವಿಯಲ್ಲಿ ಸಾಮಾಜಿಕ ನ್ಯಾಯ ನೀಡಿದ್ದೇವೆ. ಎಲ್ಲರನ್ನು ಒಂದಾಗಿ, ಒಗ್ಗಟ್ಟಾಗಿ ತೆಗೆದುಕೊಂಡು ಅರಭಾಂವಿಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆಂದು ಹೇಳಿದರು.

ಕಾರಜೋಳ ಅಥವಾ ಜೋಶಿಗೆ ಅಧ್ಯಕ್ಷ ಸ್ಥಾನ ನೀಡಿ : ಬಿಜೆಪಿಯ ಅಧ್ಯಕ್ಷ ಗಾದೆಗಾಗಿ ಮೂರ್ನಾಲ್ಕು ಜನರ ಹೆಸರುಗಳು ಕೇಳಿ ಬರುತ್ತಿವೆ. ಆದರೇ ನಮ್ಮ ಉತ್ತರ ಕರ್ನಾಟಕದವರಾದ ಹಿರಿಯ ದಲಿತ ಮುಖಂಡ ಗೋವಿಂದ ಕಾರಜೋಳ ಅಥವಾ ಸಂಸದ ಪ್ರಲ್ಹಾದ ಜೋಶಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರನ್ನು ಬೆಂಗಳೂರಿಗೆ ತೆರಳಿ ಒತ್ತಾಯ ಮಾಡುತ್ತೇನೆಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ಮಾತನಾಡಿ, 2009 ರಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಪ್ರತಿ 5 ವರ್ಷಕ್ಕೊಮ್ಮೆ ಅಭಿಯಾನ ಕಾರ್ಯ ನಡೆಯುತ್ತದೆ. ಪದಾಧಿಕಾರಿಗಳ ಆಯ್ಕೆ 3 ವರ್ಷಕ್ಕೆ ಸೀಮಿತವಾಗಿದೆ. ನಮ್ಮ ಪಕ್ಷದ ಮುಖಂಡರಲ್ಲಿ ಕೆಲವು ವ್ಯತ್ಯಾಸಗಳಿರಬಹುದು. ಆದರೇ ಕಾರ್ಯಕರ್ತರಲ್ಲಿ ಯಾವುದೇ ಒಡಕು ಅಥವಾ ಗುಂಪುಗಳಿಲ್ಲ. ನಾವೆಲ್ಲ ಬಿಜೆಪಿಯ ಬಲವರ್ಧನೆಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಸಾಧನೆಗಳು ಮತ್ತು ಅಭಿವೃದ್ದಿ ಕಾರ್ಯಗಳನ್ನು ಪ್ರಶಂಸಿದರು.

ಜಿಪಂ ಮಾಜಿ ಸದಸ್ಯ ಡಾ: ರಾಜೇಂದ್ರ ಸಣ್ಣಕ್ಕಿ ಮತ್ತು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗೋವಿಂದ ಕೊಪ್ಪದ ಮಾತನಾಡಿ, ಸಚಿವ ಬಾಲಚಂದ್ರ ಜಾರಕಿಹೊಳಿ ಅವರು 2008 ರಲ್ಲಿ ಬಿಜೆಪಿಗೆ ಸೇರಿದ ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಕಾರಣರಾಗಿದ್ದಾರೆ. ಆದರೇ ಬಾಲಚಂದ್ರ ಜಾರಕಿಹೊಳಿ ಅವರ ಆಶೀರ್ವಾದದಿಂದಲೇ ಆಯ್ಕೆಯಾದವರು ನಂತರ ಅವರನ್ನು ಮರೆತಿದ್ದಾರೆಂದು ಟೀಕಿಸಿದರು. ಬಾಲಚಂದ್ರ ಜಾರಕಿಹೊಳಿ ಅವರು ತೆಗೆದುಕೊಳ್ಳುವ ರಾಜಕೀಯ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆಂದು ತಿಳಿಸಿದರು.

ಭಾರತ ಮಾತೆ, ಧೀನ ದಯಾಳ ಉಪಾಧ್ಯೆ, ಶ್ಯಾಮ ಪ್ರಸಾದ ಮುಖರ್ಜಿ ಅವರ ಭಾವಚಿತ್ರಗಳಿಗೆ ಸಚಿವರು ಪೂಜೆ ಸಲ್ಲಿಸಿದರು.

ಅಶೋಕ ಪಾಟೀಲ, ಬಸಗೌಡ ಪಾಟೀಲ, ಸಿದ್ಲಿಂಗಪ್ಪ ಕಂಬಳಿ, ಲಕ್ಷ್ಮಣ ತಪಸಿ, ರಾವಸಾಬ ಬೆಳಕೂಡ, ಸುಭಾಷ ಢವಳೇಶ್ವರ, ಅಶೋಕ ನಾಯ್ಕ, ಬಾಬುಸಾಬ ಬಳಿಗಾರ, ಅಜ್ಜಪ್ಪ ಗಿರಡ್ಡಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಅಪ್ಪಯ್ಯ ಬಡ್ನಿಂಗಗೋಳ, ವಿಠ್ಠಲ ಪಾಟೀಲ, ಬಾಳಗೌಡ ಪಾಟೀಲ, ಎಂ.ಎಂ. ಪಾಟೀಲ, ಶಿವಬಸಪ್ಪ ಶೀಳನವರ, ಬಿ.ಎಚ್.ಪಾಟೀಲ, ಹಣಮಂತ ಹುಚರಡ್ಡಿ, ರಂಗಪ್ಪ ಇಟ್ಟನ್ನವರ, ಬಸವಂತ ಕಮತಿ, ಭೀಮಶಿ ಹಂದಿಗುಂದ, ಲಕ್ಷ್ಮಣ ಕಡಕೋಳ, ನೂರಅಲಿ ಜಾರೆ, ಡಿ.ಬಿ. ಪಾಟೀಲ, ಮಾರುತಿ ಮಾವರಕರ, ಗೀರೀಶ ಹಳ್ಳೂರ, ಮುದಕಪ್ಪ ತಳವಾರ, ಲಕ್ಷ್ಮಣ ಮಸಗುಪ್ಪಿ, ನಾಗರತ್ನಾ ಯಮಕನಮರಡಿ, ಅಶೋಕ ಓಸ್ವಾಲ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಸ್ವಾಗತಿಸಿದರು. ಬಸವರಾಜ ಮಾಳೇದವರ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here