ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ವಿವೇಕಾನಂದರ 150ನೇ ವರ್ಷಾಚರಣೆ

0
37
loading...

ಭಾರತ ರಜೆಯ ರಾಷ್ಟ್ತ್ರವಾಗದೆ ದುಡಿಯುವ ರಾಷ್ಟ್ತ್ರವಾಗಲಿ ಹಂಪನಾ

ಬೆಳಗಾವಿ 12- ಸ್ವಾಮಿ ವಿವೇಕಾನಂದರು ಮಂತ್ರಕಣ, ಶಕ್ತಿಕಣ, ಚೈತನ್ಯ ಕಣವಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ವಾಮಿ ವಿವೇಕಾನಂದರು ಹುಟ್ಟಿದ ಜನೇವರಿ 12 ರಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಕಾರ್ಯಕ್ರಮ ಆಚರಿಸುವ ಸಂಕಲ್ಪವಾಗಬೇಕು. ಈದಿನ ರಜೆಯಾಗದಿರಲಿ. ಭಾರತ ರಜೆಯ ರಾಷ್ಟ್ತ್ರವಾಗದೆ, ದುಡಿಯುವವರ ರಾಷ್ಟ್ತ್ರವಾಗಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಇಂದಿಲ್ಲಿ ನುಡಿದರು.

ಅವರು ನಗರದ ಕೋಟೆ ಪ್ರದೇಶದಲ್ಲಿ ಶನಿವಾರ ರಾಮಕೃಷ್ಣ ಮಿಶನ್ ಆಶ್ರಮ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಸಮಾರಂಭದಲ್ಲಿ ಯುವ ಜನಾಂಗಕ್ಕೆ ವಿವೇಕಾನಂದರ ಪ್ರಸ್ತುತತೆ ವಿಷಯವಾಗಿ ಭಾಷಣ ಮಾಡಿದರು.

ಮುಂದುವರದು ಮಾತನಾಡಿದ ಅವರು, ವಿವೇಕಾನಂದ ಇಲ್ಲದೇ ಹೋಗಿದ್ದಲ್ಲಿ ಈ ನಾಡಿಗೆ ಕುವೆಂಪು ಸಿಗುತ್ತಿರಲಿಲ್ಲ. ವಿವೇಕಾನಂದರನ್ನು ಅಂತಃಕಣ ಕಣದಲ್ಲಿ ಕೂಡಿಟ್ಟುಕೊಳ್ಳಬೇಕು. ವಿವೇಕ ಮತ್ತು ಆನಂದ ಜೀವನದಲ್ಲಿ ಬರಬೇಕಾದರೆ ಅವರ ತತ್ವ ಸಂದೇಶ ಮತ್ತು ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಪಾಲಿಸುವ ಅಗತ್ಯವಿದೆ ಎಂದರು.

ಸಾವಿರ ವರ್ಷದ ಭಾರತದ ಇತಿಹಾಸ ತಿಂದು ತೇಗುವ ಮತ್ತು ಹಸಿದವರ ಕೂಗಿನಿಂದ ಕೂಡಿದೆ. ವಿವೇಕಾನಂದರನ್ನು ಗುರಿ ಮತ್ತು ಗುರುವಾಗಿಟ್ಟುಕೊಂಡು ಇಂದಿನ ಯುವ ಪೀಳಿಗೆ ಸಾಗಬೇಕಾಗಿದೆ. ದುರ್ಬಲರು ಓಡಿ ಹೋಗುತ್ತಾರೆ. ಆತ್ಮವಿಶ್ವಾಸ, ದೃಢತೆ, ಸ್ವಾಭಿಮಾನದಿಂದ ಎಲ್ಲವನ್ನು ಎದುರಿಸಬೇಕಿದೆ. ಈ ಸಂದೇಶವನ್ನು ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಕೊಡಮಾಡಿದ್ದಾರೆ. ನಮ್ಮ ದೇಶದ ಹೃದಯ ಮತ್ತು ತಾಯಿ ವಿವೇಕಾನಂದರಾಗಿದ್ದಾರೆ ಎಂದು ಹಂಪ ನಾಗರಾಜ ನುಡಿದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರನ್ನು ವಿವೇಕಾನಂದರು ಪ್ರತಿಪಾದಿಸಿದ ಯುವ ಜೀವನದ ಮೌಲ್ಯಗಳು ವಿಸಯವಾಗಿ ಮಾತನಾಡುತ್ತ, ಜೀವನದ ಮೌಲ್ಯಗಳನ್ನು ಸಮೃದ್ಧಗೊಳಿಸಬೇಕೆಂದರೆ ಸನಾತನ ಧರ್ಮದ ಪಾಲನೆ ಅತ್ಯಗತ್ಯ. ಸನಾತನ ಧರ್ಮ ಅಳಿದು ಹೋದರೆ ಪ್ರಯಳವಾಗುತ್ತದೆ ಎನ್ನುವ ಸಂದೇಶವನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ ಎಂದರು.

ಸನಾತನ ಧರ್ಮದ ರಕ್ಷಣೆಗಾಗಿ ಸ್ವಾಮಿ ವಿವೇಕಾನಂದರು ನಿರಂತರವಾಗಿ ಶ್ರಮಿಸಿದರು. ಇದರಲ್ಲಿ ಶಾಶ್ವತ ತತ್ವಗಳಿವೆ. ಹಿಂದುತ್ವದ ಅಘಾದ ಶಕ್ತಿಯಿದೆ. ರಾಮಕೃಷ್ಣ ಪರಮಹಂಸರು ಮೂಲ ಮೂರ್ತಿಯಾದರೆ, ಸ್ವಾಮಿ ವಿವೇಕಾನಂದರು ಉತ್ಸವ ಮೂರ್ತಿಯಾಗಿದ್ದಾರೆ. ನಿರ್ಭೀತಿಯ ಸಂಕೇತ, ಧೈರ್ಯ ಸಾಹಸ ದೇಶದ ಯುವಕರಲ್ಲಿ ಶಾಶ್ವತವಾಗಿ ಉಳಿಯಬೇಕಾಗಿದೆ. ಯುವಕರು ವಿವೇಕಾನಂದರ ತತ್ವ ಪಾಲನೆ ಮಾಡಿದರೆ ಇದೆಲ್ಲ ಸಾಧ್ಯ. ಜೊತೆಗೆ ರಾಷ್ಟ್ತ್ರಕ್ಕೊಂದು ಮುನ್ನುಡಿ ಬರೆದಂತಾಗುತ್ತದೆ ಎಂದು ಡಾ.ಕೆ.ಅನಂತರಾಮು ಅಭಿಪ್ರಾಯಪಟ್ಟರು.

ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮದ ಸ್ವಾಮಿ ಯುಕ್ತೇಶಾನಂದಜಿ ಅವರು, ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿ, ಅವರ ಜೀವನ ಸಂದೇಶ ಹಾಗೂ ಬದುಕು, ರಾಷ್ಟ್ತ್ರಭಕ್ತಿ, ಆಧ್ಯಾತ್ಮ ಶಕ್ತಿ ಇವೆಲ್ಲ ಇಂದಿನ ಯುವ ಪೀಳಿಗೆಯಲ್ಲಿ ಬೆಳೆದು ಬರಬೇಕೆಂದರು. ವಿಶ್ರಾಂತ ಐಎಎಸ್ ಅಧಿಕಾರಿ ವಿವೇಕ ಕುಲಕರ್ಣಿ ವಿವೇಕಾನಂದರ ಜೀವನ ಸಾಧನೆಗಳ ಕುರಿತು ಮಾತನಾಡಿದರು.

ಯುವ ಸಮ್ಮೇಳನದಲ್ಲಿ ಸಾವಿರಾರು ಯುವ ಸಮೂಹ ಹಾಗೂ ರಾಮಕೃಷ್ಣ ಮಿಶನ್ ಆಶ್ರಮದ ಭಕ್ತರು, ವಿವೇಕಾನಂದರ ಅಭಿಮಾನಿಗಳು ಭಾಗವಹಿಸಿದ್ದರು.

ಸಾಯಂಕಾಲ ಆಶ್ರಮದಿಂದ ಆಯೋಜಿಸಿದ ಸ್ಪರ್ಧಾ ವಿಜೇತರಿಗೆ ಪ್ರತಿಭಾ ಪ್ರದರ್ಶನ ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಬೆಂಗಳೂರಿನ ಪ್ರಭಾತ ಕಲಾವಿದರಿಂದ ದೇಶದ ಸಂಸ್ಕ್ಕತಿ, ಪರಂಪರೆ, ಸಿರಿವಂತಿಕೆಯನ್ನು ಬಿಂಬಿಸುವ ಧರ್ಮಭೂಮಿ ನೃತ್ಯ ನಾಟಕ ಪ್ರದರ್ಶಿಸಲಾಯಿತು.

ಇಂದಿನ ಕಾರ್ಯಕ್ರಮ: ರವಿವಾರ ದಿ.13 ಬೆಳಿಗ್ಗೆ 10 ಗಂಟೆಗೆ ರಾಮಕೃಷ್ಣ ಮಿಶನ್ ಆಶ್ರಮದಲ್ಲಿ ಭಕ್ತ ಸಮ್ಮೇಳನ ನಡೆಯಲಿದೆ. ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರು ಗೃಹಸ್ಥರಿಗೆ ವಿವೇಕಾನಂದರ ಮಾರ್ಗದರ್ಶನ ವಿಷಯವಾಗಿ ಭಾಷಣ ಮಾಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಂಪ ನಾಗರಾಜಯ್ಯ ಅವರು ಭಕ್ತಿ-ವ್ಯಾಪ್ತಿ ವಿಷಯವಾಗಿ ಮತ್ತು ರಾಮಕೃಷ್ಣ ಮಿಶನ್ ಆಶ್ರಮದ ಸ್ವಾಮಿ ರಾಘವೇಶಾನಂದಜಿ ಅವರು ವಿವೇಕಾನಂದರ ದೇಶಪ್ರೇಮ ವಿಷಯವಾಗಿ ಭಾಷಣ ಮಾಡಲಿದ್ದಾರೆ.

ಸಾಯಂಕಾಲ 5 ಗಂಟೆಯಿಂದ ಸಾರ್ವಜನಿಕ ಸಭೆ ನಡೆಯಲಿದೆ. ಪ್ರಾರ್ಥನೆ, ಭಜನೆ, ಪುಣೆಯ ಸಮರ್ಥ ವಿದ್ಯಾಪೀಠದ ಅಧ್ಯಕ್ಷೆ ಸಮರ್ಥವ್ರತಿ, ಸುನೀಲ ಚಿಂಚೊಳಕರ ಅವರು ಸ್ವಾಮಿ ವಿವೇಕಾನಂದರ ವಿಷಯವಾಗಿ ಮರಾಠಿಯಲ್ಲಿ ಭಾಷಣ ಮಾಡಲಿದ್ದಾರೆ. ಸಂಜೆ 5 ಗಂಟೆಯಿಂದ ಪುಣೆಯ ಖ್ಯಾತ ಶಾಸ್ತ್ತ್ರೀಯ ಸಂಗೀತಗಾರ ಶೇಖರ ಉಂಭೋಜಕರ ಅವರಿಂದ ಭಜನೆ ನಡೆಯಲಿದೆ.

loading...

LEAVE A REPLY

Please enter your comment!
Please enter your name here