ಸರಕಾರಕ್ಕೆ ಡೆಡ್ಲೈನ್ ಕೊಡಲಾರೆ

0
14
loading...

ಹಾಸನ, ಜ.15-ಇನ್ನು ಮುಂದೆ ಸರ್ಕಾರ­ಕ್ಕೆ ಯಾವುದೇ ಹೊಸ ಡೆಡ್ ಲೈನ್ ನೀಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಅಚ್ಚರಿಮೂಡಿಸಿದ್ದಾರೆ.

ಸಂಕ್ರಾಂತಿ ನಂತರ ಸರ್ಕಾರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಘೋಸಿದ್ದ ಯಡಿಯೂರಪ್ಪ ಇಂದು ಮೆತ್ತಗಾಗಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಹಳೇಬೀಡಿನಲ್ಲಿ ನಡೆಯುತ್ತಿರುವ ಗುರು ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮಾರ್ಗ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ನಾನು ಯಾವುದೇ ರೀತಿಯಲ್ಲೂ ಸರ್ಕಾರ­ಕ್ಕೆ ಡೆಡ್ಲೈನ್ ನೀಡಲು ಹೋಗುವುದಿಲ್ಲ. ಇನ್ನು ನಾಲ್ಕು ತಿಂಗಳು ಹೇಗೋ ಸರ್ಕಾರ ನಡೆದುಕೊಂಡು ಹೋಗಲಿ ಎಂದು ಹೇಳಿದ್ದಾರೆ .

ಹೀಗಿರುವ ಪರಿಸ್ಥಿತಿ ಯಲ್ಲಿ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಆದರೆ ಸರ್ಕಾರವನ್ನು ಬೀಳಿಸಿದೆವು ಎಂಬ ಅಪವಾದ ನಮ್ಮ ಮೇಲೆ ಬರುವುದು ಬೇಡ ಎಂದು ಅವರು ಜಾಣ್ಮೆಯ ಮಾತುಗಳನ್ನಾಡಿದ್ದಾರೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರತಿಯಾಗಿ ಬಿಜೆಪಿಯವರು ಕೂಡ ಪ್ರತಿತಂತ್ರ ಮಾಡುತ್ತಿದ್ದಾರೆ. ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರಾದ ಶೋಭಾಕರಂದ್ಲಾಜೆ ಮತ್ತು ಸಿಎಂ. ಉದಾಸಿಯವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಯಡಿಯೂರಪ್ಪ ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳಿದರು.

ಈ ತಿಂಗಳ ಅಂತ್ಯ­ಕ್ಕೆ ಕೆಜೆಪಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು ಈಗಾಗಲೇ ಪಕ್ಷ ಸಂಘಟನೆಗಾಗಿ ಪ್ರವಾಸ ಕಾರ್ಯ ಕೈಗೊಂಡಿದ್ದೇನೆ. ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ ಆಶಾಭಾವನೆ ವ್ಯಕ್ತಪಡಿಸಿದರು.

ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಪ್ರಕ್ರಿಯೆ ಮುಂದುವರೆದಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದರು.

 

loading...

LEAVE A REPLY

Please enter your comment!
Please enter your name here