ಹತಾಶರಾಗಿರುವ ಯಡಿಯೂರಪ್ಪ

0
13
loading...

ವಿಜಾಪುರ,9- ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರ ಹಾಗೂ ಬಿಜೆಪಿಯ ಹಿರಿಯ ನಾಯಕರ ಕುರಿತು ಲಘುವಾಗಿ ಮಾತನಾಡುತ್ತಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದ ರಮೇಶ ಜಿಗಜಿಣಗಿ ಅವರು, ಯಡಿಯೂರಪ್ಪನವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ನಿಜಕ್ಕೂ ಅವರು ರಾಜಕೀಯದಲ್ಲಿ ಹತಾಶರಾಗಿದ್ದಾರೆ ಎನಿಸುತ್ತದೆ ಎಂದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರಾದ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಬಿಜೆಪಿ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಸೇರಿದಂತೆ ಹಲವರ ಬಗ್ಗೆ ಯಡಿಯೂರಪ್ಪ ಅವರು ಅವಾಚ್ಯ ಶಬ್ಧ ಬಳಸಿ ಹೇಳಿಕೆ ನೀಡುತ್ತಿರುತ್ತಿದ್ದು, ಇದು ಅವರ ಘನತೆಗೆ ಗೌರವ ತರುವುದಿಲ್ಲ ಎಂದರು.

ರಾಜ್ಯದಲ್ಲಿ ನಾನೇ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಒಂದು ಸರ್ಕಾರದಲ್ಲಿ ಕೇವಲ ಮುಖ್ಯಮಂತ್ರಿಯಿಂದಲೇ ಅಭಿವೃದ್ದಿ ಪರ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ.

ಮಂತ್ರಿಮಂಡಳದ ಎಲ್ಲ ಸದಸ್ಯರ ಸಹಕಾರದಿಂದ ಮಾತ್ರ ನಿರ್ಣಯ ಕೈಗೊಳ್ಳಲು ಸಾಧ್ಯ. ಸರ್ಕಾರ ಕೈಗೊಳ್ಳುವ ಅಭಿವೃದ್ದಿ ಕೆಲಸದ ಶ್ರೇಯಸ್ಸು ಸಚಿವ ಸಂಪುಟದ ಪ್ರತಿಯೊಬ್ಬರಿಗೂ ಸಲ್ಲುತ್ತದೆ, ಇದನ್ನು ಯಡಿಯೂರಪ್ಪ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಾನು ಬಿಜೆಪಿ ತೊರೆದು ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಬಿಜೆಪಿಯಲ್ಲಿಯೇ ಗಟ್ಟಿಯಾಗಿ ಉಳಿದುಕೊಳ್ಳುತ್ತೇನೆ ಎಂದು ಪುನರುಚ್ಚರಿಸಿದ ಜಿಗಜಿಣಗಿಯವರು, ತಾವು ಬೇರೆ ಪಕ್ಷಕ್ಕೆ ಹೋಗುತ್ತೇನೆಂದು ಕೆಲವರು ಏಕೆ ಪುಕಾರು ಎಬ್ಬಿಸಿದ್ದಾರೆ ಎಂಬುದೇ ತಮಗೆ ತಿಳಿಯದಾಗಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಮುಂಬರುವ ಚುನಾವಣೆಯಲ್ಲಿ ಕೆಜೆಪಿ ಗೆಲ್ಲಲು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ.

ಅವರಿಗೆ ಗೆಲ್ಲುವುದು ಬೇಕಾಗಿಲ್ಲ. ಬಿಜೆಪಿ ಗೆಲುವಿಗೆ ಅಡ್ಡಗಾಲು ಹಾಕಲು ಮಾತ್ರ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ರಾಜ್ಯದಲ್ಲಿ ಮುಂದಿನ ಚುನಾವಣೆಯ ಜವಾಬ್ದಾರಿ ವಹಿಸಿಕೊಟ್ಟಿರುವುದು ನನಗೆ ಅತೀವ ಸಂತಸ ತಂದಿದೆ. ಉತ್ತರ ಕರ್ನಾಟಕದ ಓರ್ವ ನಾಯಕನಿಗೆ ಈ ಜವಾಬ್ದಾರಿ ವಹಿಸಿರುವುದರಿಂದ ತಾವು ಅವರ ಕೈ ಬಲಪಡಿಸಲು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವುದಾಗಿ ಅವರು ಹೇಳಿದರು.

ಸೋಲಾಪುರ-ವಿಜಾಪುರ-ಯಶವಂತಪುರ ರೈಲು ವೇಳಾಪಟ್ಟಿಯನ್ನು ಬದಲಾಯಿಸಬೇಕು ಎಂಬ ಈ ಭಾಗದ ಜನತೆಯ ಬೇಡಿಕೆಯ ಹಿನ್ನೆಲೆಯಲ್ಲಿ ತಾವು, ಈ ಕುರಿತು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದ್ದು, ಅದಕ್ಕೆ ಅವರು ವೇಳಾಪಟ್ಟಿ ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದಾರೆ. ಬಾಗಲಕೋಟ ಹಾಗೂ ಗದಗದಲ್ಲಿ ನಡೆದ ಬ್ರಾಡ್ಗೇಜ್ ಅಭಿವೃದ್ದಿ ಕೆಲಸ ಸಂಪೂರ್ಣಗೊಂಡ ನಂತರ ರೈಲು ವೇಳಾಪಟ್ಟಿಯು ಬದಲಾವಣೆಯಾಗಲಿದೆ ಎಂದು ತಿಳಿಸಿದರು.

loading...

LEAVE A REPLY

Please enter your comment!
Please enter your name here