ಸ್ವಚ್ಛತೆಯ ಅರಿವು ಶಿಕ್ಷಣದ ಒಂದು ಭಾಗವಾಗಬೇಕು-ಡಿ.ಕೆ. ರವಿ

0
108
loading...

ಕೊಪ್ಪಳ ಫೆ. 18: ಗ್ರಾಮೀಣ ನೈರ್ಮಲ್ಯ, ಸ್ವಚ್ಛತೆ ಬಗ್ಗೆ ಮಕ್ಕಳಿಗೆ ಬಾಲ್ಯಾವಸ್ಥೆಯಿಂದಲೇ ಅರಿವು ಮೂಡಿಸುವಂತಾಗಲು, ಸ್ವಚ್ಛತೆಯ ಮಹತ್ವವನ್ನು ಶಿಕ್ಷಣದ ಒಂದು ಭಾಗವನ್ನಾಗಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಅಭಿಪ್ರಾಯಪಟ್ಟರು.

ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿ ಕುಟುಂಬಗಳ ಸಮೀಕ್ಷೆ ಕುರಿತಂತೆ ನಗರದ ಸಾಹಿತ್ಯ ಭವನದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಇದೀಗ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮವಾಗಿ ಪರಿಷ್ಕರಿಸಲಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಸರ್ಕಾರ ಹಲವಾರು ರೀತಿಯಿಂದ ಯತ್ನಿಸುತ್ತಿದೆಯಾದರೂ, ಗ್ರಾಮಗಳಲ್ಲಿ ವಯಕ್ತಿಕ ಸ್ವಚ್ಛತೆಗೆ ಜನತೆ ಆದ್ಯತೆ ನೀಡುತ್ತಿಲ್ಲ.  ಸ್ವಾತಂತ್ರ್ಯ ಬಂದು ಹಲವಾರು ದಶಕಗಳೇ ಕಳೆದಿದ್ದರೂ, ಶೌಚಾಲಯದ ಮಹತ್ವದ ಬಗ್ಗೆ ನಾಗರೀಕರು ಅರಿವು ಹೊಂದದೇ ಇರುವುದು ವಿಷಾದದ ಸಂಗತಿಯಾಗಿದೆ.  ಉತ್ತಮ ಹಾಗೂ ಆರೋಗ್ಯಪೂರ್ಣ ಜೀವನ ಸಾಗಿಸಲು ಸಣ್ಣ, ಸಣ್ಣ ಅಗತ್ಯತೆಗೂ ಹೆಚ್ಚಿನ ಮಹತ್ವ ನೀಡುವ ನಾವು, ವಯಕ್ತಿಕ ಸ್ವಚ್ಛತೆಯ ಬಗ್ಗೆ ಕಾಳಜಿ ಹೊಂದದೇ ಇರುವುದು ವಿಪರ್ಯಾಸವಾಗಿದೆ.  ಊಟದ ನಂತರ ಚೆನ್ನಾಗಿ ಕೈತೊಳೆದುಕೊಳ್ಳುವ ನಾವು, ಊಟಕ್ಕೂ ಮುನ್ನ ಕೈಯನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಲು ಯತ್ನಿಸುವುದಿಲ್ಲ.  ಮನೆಗಳ ಮುಂದೆಯೇ ತಿಪ್ಪೆಯ ರಾಶಿಯನ್ನು ಇಟ್ಟುಕೊಂಡು, ಇನ್ನು ಗ್ರಾಮೀಣ ನೈರ್ಮಲ್ಯಕ್ಕೆ ಆದ್ಯತೆ ನೀಡುವುದಾದರೂ ಹೇಗೆ?.  ಗ್ರಾಮೀಣ ಭಾಗಗಳಲ್ಲಿನ ಸಾರ್ವಜನಿಕರಿಗೆ ನೈರ್ಮಲ್ಯದ ಅರಿವು ಹಾಗೂ ವಯಕ್ತಿಕ ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಮಹತ್ವಪೂರ್ಣ ಜವಾಬ್ದಾರಿ ಆಯಾ ಗ್ರಾಮದ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೇಲಿದೆ.  ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳ ಸಮೀಕ್ಷೆಯ ಹೊಣೆಯನ್ನು ಅವರಿಗೆ ವಹಿಸಲಾಗಿದ್ದು, ಆಯಾ ಕುಟುಂಬಗಳು ಹೊಂದಿರುವ ನೈರ್ಮಲ್ಯ ವ್ಯವಸ್ಥೆ, ಶೌಚಾಲಯ, ಇತ್ಯಾದಿ ಮೂಲಭೂತ ಸೌಕರ್ಯಗಳ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ.  ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಇದಕ್ಕಾಗಿ ಆಯಾ ತಾಲೂಕು ಮಟ್ಟದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಸೂಕ್ತ ತರಬೇತಿಯ ನಂತರ ಅವರು ಸಮರ್ಪಕ ಅಂಕಿ-ಅಂಶಗಳೊಂದಿಗೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಸಮೀಕ್ಷಾ ಕಾರ್ಯದ ಯಶಸ್ವಿಗೆ ಶ್ರಮಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಮನವಿ ಮಾಡಿಕೊಂಡರು.

ಕಾರ್ಯಾಗಾರದಲ್ಲಿ ನಿರ್ಮಲ ಭಾರತ ಅಭಿಯಾನದ ರಾಜ್ಯ ಸಂಯೋಜಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಅನ್ನಪೂರ್ಣ ಉಪ್ಪಿನ್ ಅವರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಕೊಪ್ಪಳ ತಾಲೂಕು ವೈದ್ಯಾಧಿಕಾರಿ ಡಾ. ದಾನರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here