ಜನರ ಹಿತಕ್ಕೆ ಧಕ್ಕೆ ತರುತ್ತಿರುವ ಜನಸ್ನೇಹಿ ಕೇಂದ್ರ

0
34

ನಿತ್ಯ ಅಲೆದಾಟದ ಪರದಾಟ- ಸುಸ್ತಾದ ಜನತೆ

loading...

ಚಿಕ್ಕೌಡಿ 21: ತಾಲೂಕಿನ ಸದಲಗಾ ಪಟ್ಟಣದಲ್ಲಿ ಕಳೆದ ಜನೇವರಿ ತಿಂಗಳಿನಿಂದ ನೂತನವಾಗಿ ಪ್ರಾರಂಭಿಸಿದ ಅಟಲಜೀ ಜನಸ್ನೇಹಿ ಕೇಂದ್ರದಿಂದ ಅವಶ್ಯಕ ಕಾಗದ ಪತ್ರಗಳನ್ನು ಪಡೆಯಲು ಸಾರ್ವಜನಿಕರು, ವಯೋವೃಧ್ಧರು, ರೈತರು, ವಿದ್ಯಾರ್ಥಿಗಳು ದಿನನಿತ್ಯ ಪರದಾಡುವ ಪ್ರಸಂಗ ಬಂದೊದಗಿದೆ.

ಈ ಹಿಂದೆ ಸರಕಾರ ಗ್ರಾಮೀಣ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನೆಮ್ಮದಿ ಕೇಂದ್ರಗಳನ್ನು ಪ್ರಾರಂಭಿಸಿದ್ದರು. ಆದರೆ ಕಳೆದ 5-6 ತಿಂಗಳಿಂದ ಸಂಪೂರ್ಣವಾಗಿ ಬಂದ್ ಮಾಡಿದ್ದು, ಪರ್ಯಾಯವಾಗಿ ಕೆಲವೆಡೆ ಮಾತ್ರ ಅಟಲಜಿ ಜನಸ್ನೇಹಿ ಕೇಂದ್ರಗಳನ್ನು ಸ್ಥಾಪಿಸಿದ್ದರೂ ಕೂಡಾ ಗ್ರಾಮೀಣ ಪ್ರದೇಶದ ರೈತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬೇಕಾದ ಕಾಗದಪತ್ರಗಳನ್ನು ಪಡೆಯಲು ಪರದಾಡುವ ಪ್ರಸಂಗ ಬಂದೊದಗಿದೆ.

ತಾಲೂಕಿನಲ್ಲಿ ಯಕ್ಸಂಬಾ, ಸದಲಗಾ, ಬೋರಗಾಂವ, ಮಾಂಜರಿ, ಅಂಕಲಿ, ನಾಗರಮುನ್ನೌಳಿ, ಚಿಕ್ಕೌಡಿ, ನಿಪ್ಪಾಣಿ, ಖಡಕಲಾಟ, ಕರೋಶಿ ಮತ್ತು ಸೌಂದಲಗಾ ಗ್ರಾಮಗಳಲ್ಲಿ ಹೀಗೆ ಒಟ್ಟು 11 ನೆಮ್ಮದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಎಲ್ಲಾ ಗ್ರಾಮಗಳಲ್ಲಿನ ನೆಮ್ಮದಿ ಕೇಂದ್ರಗಳನ್ನು ಬಂದ್ ಮಾಡಿ ತಾಲೂಕಿನಲ್ಲಿ ಕೇವಲ ನಿಪ್ಪಾಣಿ, ಸದಲಗಾ, ನಾಗರಮುನ್ನೌಳಿ ಮತ್ತು ಚಿಕ್ಕೌಡಿ ಪಟ್ಟಣಗಳಲ್ಲಿ ಮಾತ್ರ ಅಟಲಜೀ ಜನಸ್ನೇಹಿ ಕೇಂದ್ರ ಪ್ರಾರಂಭಿಸಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಲಿದೆ.

ಸದಲಗಾ ಪಟ್ಟಣದಲ್ಲಿ ಪ್ರಾರಂಭಿಸಲಾದ ಅಟಲಜೀ ಜನಸ್ನೇಹಿ ಕೇಂದ್ರದಲ್ಲಿ ರೈತರು ಸಾಲ ಪಡೆಯಲು, ಹಕ್ಕು ಬದಲಾವಣೆ ಮಾಡಲು ಮತ್ತು ವಿವಿಧ ಕಾರ್ಯಗಳಿಗೆ ಬೇಕಾದ ಪಹಣಿ ಪತ್ರ, ಹಿಡುವಳಿ, ರಹವಾಸಿ, ವಾರಸು ಪ್ರಮಾಣ ಪತ್ರ, ಕ.ಡ. ಉತಾರ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾಗುವ ಜಾತಿ ಮತ್ತು ಆದಾಯ ಪತ್ರಗಳು, ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ಜನರು ಪರದಾಡುತ್ತಿದ್ದಾರೆ.

ಸದಲಗಾ ಪರಿಸರದ ಸುಮಾರು 23 ಹಳ್ಳಿಯ ಜನ ಸದಲಗಾ ಜನಸ್ನೇಹಿ ಕೇಂದ್ರಕ್ಕೆ ಬಂದು ಕಾಗದ ಪತ್ರಗಳನ್ನು ಪಡೆಯಲು ದಿನನಿತ್ಯ ನೂರಾರು ಜನ ಆಗಮಿಸುತ್ತಾರೆ. ಆದರೆ ಒಂದೇ ದಿನದಲ್ಲಿ ಕಾಗದ ಪತ್ರ ಸಿಗುವುದು ಕಷ್ಟದ ಕೆಲಸವಾಗಿದೆ. ಈ ಕೇಂದ್ರದಲ್ಲಿ ಒರ್ವ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಒಂದೇ ದಿನದಲ್ಲಿ ಎಲ್ಲರಿಗೂ ಕಾಗದ ಪತ್ರ ನೀಡಿ ಸಮಾಧಾನ ಪಡಿಸಲು ಸಾಧ್ಯವಾಗುತ್ತಿಲ್ಲ. ಕಾಗದ ಪತ್ರ ಪಡೆಯಬೇಕಾದರೆ ಒಂದು ದಿನ ಸಂಪೂರ್ಣವಾಗಿ ಕಳೆಯಬೇಕಾಗುತ್ತದೆ. ಹಣದ ಜೊತೆಗೆ ವೇಳೆಯೂ ವ್ಯರ್ಥವಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ಮೊದಲಿರುವ ನೆಮ್ಮದಿ ಕೇಂದ್ರಗಳ ಸ್ಥಳಗಳಲ್ಲಿ ಅಟಲಜೀ ಜನಸ್ನೇಹಿ ಕೇಂದ್ರಳನ್ನು ಸ್ಥಾಪಿಸಬೇಕು ಇಲ್ಲವೇ ಮೊದಲಿನಂತೆ ನೆಮ್ಮದಿ ಕೇಂದ್ರಗಳನ್ನು ಗ್ರಾಮೀಣ ಪ್ರದೇಶದ ಗ್ರಾಮಗಳಲ್ಲಿ ಪುನರಾರಭಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಕೆಲ ದಿನಗಳ ಹಿಂದೆ ಅಂಕಲಿ ಗ್ರಾಮದಲ್ಲಿ ಅಟಲಜೀ ಜನಸ್ನೇಹಿ ಕೇಂದ್ರ ಪ್ರಾರಂಭಿಸಿದ್ದು, ಅದರಂತೆ ಯಕ್ಸಂಬಾ, ಬೋರಗಾಂವ, ಮಾಂಜರಿ, ಖಡಕಲಾಟ, ಕರೋಶಿ, ಸೌಂದಲಗಾ ಗ್ರಾಮಗಳಲ್ಲೂ ಅಟಲಜೀ ಜನಸ್ನೇಹಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.

loading...

LEAVE A REPLY

Please enter your comment!
Please enter your name here