ಹಗಲು ದರೋಡೆ ಮಾಡುತ್ತಿವೆಯೇ ನಮ್ಮ ಆಟೋಗಳು ?

0
19
loading...

ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತು ಪಡಿಸಿ ನಮ್ಮ ಇಡಿ ರಾಜ್ಯದ ಇನ್ನ್ಯಾವುದೇ ನಗರಗಳಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ದಾಯವಾಗಿಲ್ಲವೆನ್ನಿಸುತ್ತದೆ , ಬೆಳಗಾಗೆದ್ದರೆ ಅದೆಷ್ಟೋ ಮೂಲಭೂತ ಅವಶ್ಯಕತೆಗಳಿಗೆ ಸಾರಿಗೆ ಕಡೆಗೆ ಮುಖ ಮಾಡುವ ಸಣ್ಣ ಹಾಗು ಮಧ್ಯಮ ವರ್ಗದ ಕುಟುಂಬಗಳಿಗೆ ಹಾಗು ಜನರಿಗೆ ಆಟೋ ರಾಜರ ಲೂಟಿ ಗೊತ್ತಿರೋ ವಿಷಯವೇ . ಆದರೆ ಯಾಕೆ ನಮ್ಮ ಈ ಎಲ್ಲ ಊರುಗಳಲ್ಲಿ ಆಟೋ ಗಳಿಗೆ ಮೀಟರ್ ಕಡ್ದಾಯವಾಗಿಲ್ಲ ? ಇನ್ನು ಅದೆಷ್ಟು ದಿನ ಇದೆ ರೀತಿ ಇವರು ನಮ್ಮನ್ನು ಲೂಟಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು ಇಲ್ಲ …

ಬೆಳಗಾವಿ, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಇಂದಿನ ಪರಿಸ್ತಿತಿ ಹೇಗಿದೆ ನೋಡಿ, ೧.೫ ನಿಂದ ೨ ಕಿ ಮೀ ದೂರದ ಪ್ರಯಾಣಕ್ಕೆ ಆಟೋ ಚಾಲಕರು ಬಾಯಿಗೆ ಬಂದಂತೆ ಬಾಡಿಗೆ ಹೇಳುತ್ತಾರೆ , ಹಗಲಲ್ಲೇ ದರೋಡೆ ಮಾಡುವ ಈ ದೂರಕ್ಕೆ ಜನಸಾಮಾನ್ಯರು ತೆತ್ತಬೇಕಾದದ್ದು ೫೦ – ೬೦ ರೂಪಾಯಿ. ಇನ್ನು ರಾತ್ರಿ ೯ ಘಂಟೆಯ ನಂತರ ಇವರ ಬೆಲೆ ದುಪ್ಪಟ್ತಾಗಿರುತ್ತದೆ . ಘಂಟೆಗಟ್ಟಲೆ ಪ್ರಯಾನಿಕರಿಲ್ಲದೆ ತಮ್ಮ ನಿಲ್ದಾಣಗಳಲ್ಲಿ ಈ ಆಟೋ ಚಾಲಕರು ಕಾಯುತ್ತಾರೆಯೇ ಹೊರತು ನ್ಯಾಯವಾದ ಬೆಲೆಗೆ ಬಾಡಿಗೆಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ, ಸಾರಿಗೆ ಇಲಾಖೆ, ಅಧಿಕಾರಿಗಳು ಹಾಗು ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಏನು ಮಾಡುತ್ತಿರುವರು ಎನ್ನುವುದೇ ಅರ್ಥವಾಗುವುದಿಲ್ಲ. ಶಾಲಾ ಮಕ್ಕಳನ್ನು ಕುರಿ ಮರಿಗಳ ಹಾಗೆ ಸಾಗಿಸುವ ಇದೆ ಆಟೋ ಚಾಲಕರು ಅಲ್ಲಿಯೂ ಪೋಶಕರಿಂದ ದುಡ್ಡು ಕೀಳುವುದು ಸಾಮಾನ್ಯವೇ ಆದರೆ ಅಲ್ಲಿಯೂ ಅದೆಷ್ಟೋ ನಿಯಮಗಳ ಉಲ್ಲಂಘನೆ ಮಾಡುವುದು, ಅಸುರಕ್ಷಿತವಾಗಿ ಮಕ್ಕಳನ್ನು ಸಾಗಿಸುವುದು ಹೀಗೆ ಪ್ರತಿ ದಿನ ಎಡವಟ್ಟುಗಳ ಸರಮಾಲೆಯಲ್ಲೇ ಜೀವನ ಸಾಗಿಸುವ ಈ ಮಹಾನುಭಾವರಿಗೆ ಶಿಸ್ತಿನ ಸಂಭಾವನೆ ನೀಡುವುದು ಹೇಗೆ ಎಂಬುದೇ ನಮ್ಮೆಲ್ಲರನ್ನೂ ಕಾಡುವ ದೊಡ್ಡ ಪ್ರಶ್ನೆ.

ಉತ್ತರ ಕರ್ನಾಟಕದ ಅಥವಾ ಕರ್ನಾಟಕದ ಅದೆಷ್ಟೋ ನಗರಗಳಿಗೆ ಭೇಟಿ ನೀಡಿದಾಗ ಗಮನಿಸಿದರೆ ರೇಲ್ವೆ ನಿಲ್ದಾಣದ ಮುಂದಿರುವ ಎಲ್ಲ ಪ್ರೀ-ಪೇಡ ಕೌಂಟರ್ಗಳು ಇದಾಗಲೇ ತುಕ್ಕು ಹಿಡಿದಿವೆ, ಆ ಕೌಂಟರ್ಗಳ ಬಳಿ ಒಂದೇ ಒಂದು ಆಟೋ ಕೂಡ ಇರುವುದಿಲ್ಲ, ಅದೇ ಸ್ವಲ್ಪ ಆಚೆ ಬಂದರೆ ರಸ್ತೆಯ ಪಕ್ಕ ಸಾಲು ಸಾಲಾಗಿ ಆಟೋಗಳನ್ನು ನಿಲ್ಲಿಸಲಾಗಿರುತ್ತದೆ. ನಿಲ್ದಾಣದಿಂದ ಆಚೆ ಬರುವ ಎಲ್ಲ ಪ್ರಯಾನಿಕರಿನ್ನು ಕರೆದು , ತಮ್ಮದೇ ಆದ ಬೆಲೆ ಹೇಳಿ ಒಲ್ಲದಿದ್ದರು ಎಳೆದೊಯ್ಯುವ ಅಥವಾ ಒಪ್ಪಿಕೊಳ್ಳದಿದ್ದಲ್ಲಿ ತೆಗಳುವ ಅದೆಷ್ಟೋ ಆಟೋ ಚಾಲಕರನ್ನು ನಾವು ನೋಡಿರಬಹುದು. ಆದರೆ ಇವರು ಕೊಡುವ ಗೋಳಿನಿಂದಾಗಿ , ಕೇಳುವ ಹೆಚ್ಚಿನ ಬೆಲೆಯಿಂದಾಗಿ ಅದೆಷ್ಟೋ ಜನ ಯಾಕಪ್ಪ ಇವರ ಉಸಾಬರಿ ಅನ್ಕೊಂಡು ಬರಿಗಾಲಲ್ಲೇ ನಡೆದುಕೊಂಡು ಹೋಗುತ್ತಾರೆ, ನಿಯತ್ತಿನ ಬೆಲೆಗೆ ಸೌಜನ್ಯದಿಂದ ಆಟೋಗಳು ಓಡಿದ್ದೆ ಆದರೆ ಅದೆಷ್ಟೋ ಜನ ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಈ ಸಾರಿಗೆಯನ್ನು ಉಪಯೋಗಿಸಬಹುದಲ್ಲವೇ ? ಲೂಟಿ ಮಾಡಿ ದಿನಕ್ಕೆ ೧೦ ಬಾಡಿಗೆ ಓಡಿಸುವುದಕ್ಕಿಂತ ನಿಯತ್ತಿನ ೫೦ ಬಾಡಿಗೆಗಳು ನಿಮಗೂ ಒಳ್ಳೆಯದಲ್ಲವೇ ಆಟೋ ಚಾಲಕರೇ ? ಹಾಗಾದಲ್ಲಿ ನಿಮ್ಮ ಉತ್ಪನ್ನವು ಹೆಚ್ಚುವುದು, ನಿಮ್ಮ ಸಾರಿಗೆ ಬಯಸುವ ಜನರಿಗೂ ನೆಮ್ಮದಿ ಸಿಗುವುದು, ಆದರೆ ಇದಕ್ಕೆಲ್ಲ ಕಿವಿ ಕೊಡದೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಮೀಟರ್ ಕಡ್ಡಾಯ ಮಾಡುವ ಕ್ರಮಕ್ಕೆ ಅದ್ಯಾಕೆ ನೀವುಗಳು ಕಲ್ಲು ಹಾಕುತ್ತೀರಿ ಎಂಬುವುದು ನನ್ನ ಪ್ರಶ್ನೆ …!

”ದುಡಿಮೆಯೇ ದುಡ್ಡಿನ ತಾಯಿ” ಅನ್ನೋ ಮಾತಿದೆ, ಆದರೆ ಈ ಆಟೋಗಳ ವಿಷಯದಲ್ಲಿ ಮಾತ್ರ ಅದ್ಯಾಕೋ ನನಗೆ ”ದರೋಡೆಯೇ ದುಡ್ಡಿನ ತಾಯಿ” ಎಂಬಂತೆ ಕೇಳಿಸುತ್ತದೆ, ಬಾಯಿಗೆ ಬರೋ ಬೆಲೆ ಹೇಳಿ ಹಾಡು ಹಗಲೇ ಜನರನ್ನು ಲೂಟಿ ಮಾಡುವ ಈ ಚಾಲಕರು ಮೀಟರ್ ಕಡ್ಡಾಯದ ವಿಷಯ ಬಂದಾಗ ಮಾತ್ರ ‘ನಮ್ಮ ಬಳಿ ಬಾಡಿಗೆ ಬರುವ ಜನ ಕಡಿಮೆ, ಸಾಲ ಕಟ್ಟಬೇಕು, ಸಂಸಾರ ನಡೆಸಬೇಕು’ ಎಂಬಿತ್ತ್ಯಾದಿ ಕಾರಣಗಳನ್ನು ಹೇಳಿ ಸರ್ಕಾರದಿಂದ ಅನುದಾನ ಪಡೆಯುತ್ತಾರೆ, ಸರ್ಕಾರದಿಂದ ಅವರ ಬೇಡಿಕೆಯಂತೆ ಮೀಟರ್ ಅಳವಡಿಕೆಯು ಸಡಿಲಗೊಳ್ಳುತ್ತದೆ ಆದರೆ ಇದಾದಮೆಲಿನ ಪರಿಸ್ತಿತಿಯ ಬಗ್ಗೆ ನಾವು ಯೊಚಿಸಬೆಕು. ಈ ಕುಂಟು ನೆಪವೊಡ್ಡಿ ಆಟೋ ಓಡಿಸಿ ಮೀಟರ್ ಅಳವಡಿಸದ ಅದೆಷ್ಟೋ ಚಾಲಕರ ಆಟೋಗಳಿಗೆ DOLBY DIGITAL Music System ಬೇಕು, ಸಕತ್ ಆಗಿರೋ ಮೇಲ್ಚಾವಣಿ (Body built roof top) ಬೇಕು . ರಂಗು ರಂಗಿನ ಸೀಟುಗಳು . Radium ಸ್ತಿಕ್ಕರ್ಗಳು , ಬಣ್ಣ ಬಣ್ಣ ಬಲ್ಬುಗಳನ್ನು ಆಟೋಗಳಿಗೆ ಹಾಕಿಕೊಂಡು ಶೋಕಿ ಹೊಡೆಯೋದಕ್ಕೆ ಇವರ ಬಳಿ ಕಾಸು, ಸಮಯ ಇರುತ್ತದೆ, ಆದರೆ ಮೀಟರ್ ಪ್ರಕಾರ ಆಟೋ ಓಡಿಸುವ ಸಂಧರ್ಬ ಬಂದಲ್ಲಿ ಇವರು ಸಪ್ತ ಸ್ವರಗಳಲ್ಲಿ ರಾಗಗಳನ್ನು ಹಾಡುತ್ತಾರೆ . ಸಾಮಾನ್ಯ ಪ್ರಯಾನಿಕನೆಂದಾದರು ಆಟೋ ಚಾಲಕನಿಗೆ ಈ ಎಲ್ಲ ಸೌಲಭ್ಯಗಳು ಬೇಕಪ್ಪ ಎಂದು ಕೆಳಿರುವುದಿದೆಯೇ ?

ಕಿವಿಗಿಡಿಚಿಕ್ಕುವ ಆ ದ್ವನಿವರ್ಧಕಗಳು, ಅಸಹ್ಯವಾಗಿ ಕಿರುಚಾಡುವ ಹಾರ್ನಗಳು , ಕಣ್ಣು ಕುಕ್ಕುವ ಹೆಡ್ ಲ್ಯಾಂಪ್ ಗಳು, ಸಮವಸ್ತ್ರ ಧರಿಸದೆ ಅಡ್ಡಾದಿಡ್ಡಿ ವಾಹನ ಚಲಾಯಿಸುವ ಆಟೋ ಚಾಲಕರು ಇಂತಹ ಅದೆಷ್ಟೋ ಸಹಿಸಲಾಗದ ವಿಷಯಗಳು ನಮ್ಮ ದೈನಂದಿನ ಜೀವನದಲ್ಲಿ ಕಣ್ಣ ಮುಂದೆ ಕಂಡರೂ ಜನ ಸಾಮಾನ್ಯರು ಅದನ್ನೆಲ್ಲ ಪ್ರಶ್ನಿಸುವುದಿಲ್ಲ. ಪ್ರಶ್ನ್ನಿಸಬೇಕಾದ ಅಧಿಕಾರಿಗಳು ಇದೆಲ್ಲ ತಮಗೆ ಸಂಭಂದವಿಲ್ಲವೇನೋ ಎನ್ನುವ ರೀತಿಯಲ್ಲಿ ಬದುಕುತ್ತಾರೆ. ಮೂಗದಾರವಿಲ್ಲದೆ ಮಾರಮ್ಮನ ಕೋಣನ ತರ ಊರೂರು ಸುತ್ತಿ ತಮ್ಮದೇ ಕಾನೂನು, ತಮ್ಮದೇ ಬೆಲೆ, ತಮ್ಮದೇ ಕಲೆ ಎನ್ನುವ ಹಾಗೆ ಬದುಕುವ ಈ ಆಟೋ ಚಾಲಕರಿಗೆ ಬುದ್ದಿ ಬರೋ ದಿನ ಇನ್ನು ಅದೆಷ್ಟು ದೂರವಿದೆಯೋ ಆ ಭಗವಂತನಿಗೆ ಗೊತ್ತು . ಆದರೆ ನಾವ್ಯಾಕೆ ಇದನ್ನೆಲ್ಲಾ ಸಹಿಸಿಕೊಂಡು ಹೀಗೆ ಜೀವನ ತಳ್ಳಬೇಕು ಎಂಬುವುದು ನನ್ನ ಪ್ರಶ್ನೆ, ಭಾರತಿಯ ವಾಹನ ಕಾಯ್ದೆಯಡಿ ಆಟೋ ಚಾಲಕರು ಪ್ರಯಾಣಿಕರ ಕೋರಿಕೆಗೆ ವಿರುದ್ಧವಾಗಿ ನಡೆದುಕೊಳ್ಳುವ ಹಾಗಿಲ್ಲ, ಅಂದರೆ ಅವರು ಕರೆದ ಸ್ಥಳಕ್ಕೆ ಬರುವುದನ್ನು ನಿರಾಕರಿಸುವುದಾಗಲಿ (ಆಯಾ ನಗರದ ಪರಿಮಿತಿಯ ಒಳಗೆ) , ಮಿತಿಗಿಂತ ಹೆಚ್ಚಿನ ಹಣ ಕೆಳುವುದಾಗಲಿ ಮಾಡುವ ಹಾಗಿಲ್ಲ. ಅಲ್ಲದೆ ಪರಿಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವದು ಕೂಡ ಶಿಕ್ಷಾರ್ಹ ಅಪರಾಧ. ಆದರೆ ಇವುಗಳನ್ನೆಲ್ಲ ನಾವು ಪ್ರಶ್ನಿಸದಿದ್ದಲ್ಲಿ ಆಟೋ ಚಾಲಕರು ತಾವು ಮಾಡಿದ್ದೆ ರಾಜ್ಯಭಾರ ಎನ್ನುವ ಹಾಗೆ ನಡೆಕೊಳ್ಳುವುದಂತು ಸತ್ಯ .

ವಯಸ್ಕರರು, ಮೈ ಕೈ ಗಟ್ಟಿ ಇರುವ ನಾಗರಿಕರು ಒಂದೊಮ್ಮೆ ಆಟೋ ಚಾಲಕರು ಲೂಟಿಗಿಳಿದರೆ ಅದನ್ನು ತಿರಸ್ಕರಿಸಿ ನಡೆದುಕೊಂಡೋ ಅಥವಾ ಸರ್ಕಾರಿ ಸಾರಿಗೆಯಲ್ಲೋ ಹೋಗಬಹುದು ಆದರೆ ಪ್ರತಿ ದಿನ ಇದೆ ದೌರ್ಜನ್ಯ ಮುಂದುವರೆದಲ್ಲಿ ವಯಸ್ಸಾದ ಅಜ್ಜಿ ತಾತ , ಮಕ್ಕಳಿರುವ ಸಂಸಾರಸ್ಥರ ಗತಿ ಏನು ? ಸಣ್ಣ ಪುಟ್ಟ ನಗರಳಲ್ಲಂತೂ ಸರ್ಕಾರಿ ನಗರ ಸಾರಿಗೆ ಇಲ್ಲವೇ ಇಲ್ಲ, ಮನೆಗೊಂದು ಕಾರು ಬೈಕು ಇಟ್ಟುಕೊಳ್ಳುವ ಶ್ರೀಮಂತ ದೇಶದವರು ನಾವಲ್ಲ, ಇಂತಹ ಪರಿಸ್ಥಿತಿಯಲ್ಲಿ ಆಟೋಗಳನ್ನೇ ನೆಚ್ಚಿಕೊಂಡು ಬೀದಿಗಿಳಿಯೋ ಅದೆಷ್ಟೋ ಜನರ ಪಾಡು ಪ್ರತಿ ದಿನ ಏನಾಗುತ್ತೆ ಅನ್ನೋದನ್ನೊಮ್ಮೆ ಯೋಚಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ಪೆಟ್ರೋಲ್ ಬೆಲೆ ಹೆಚ್ಚಾಗಿದ್ದೆ ತಡ ಕ ರಾ ರ ಸಾ ಸಂ ಹಾಗು ಬಿ ಎಂ ಟಿ ಸಿ ಬಸ್ಸುಗಳ ಟಿಕೆಟ್ ದರದಲ್ಲಿ ಶೇಕಡ ೧೦ ರಷ್ಟು ಹೆಚ್ಚಿಸುವ ನಮ್ಮ ಸಾರಿಗೆ ಮಂತ್ರಿಗಳಾದ ಶ್ರೀ ರಾಮಲಿಂಗಾ ರೆಡ್ಡಿಗಳಿಗೆ ನಾನು ಹೇಳೋದು ಇಷ್ಟೇ ” ಸ್ವಾಮಿ ಒಂದ ಸರಿ ಬೆಂಗಳೂರು ಬಿಟ್ಟು ಆಚೆ ಬನ್ನಿ, ಆಟೋ , ಸೈಕಲ್. ಬೈಕು ರೈಲಲ್ಲಿ ಸ್ವಲ್ಪ ಓಡಾಡಿ, ಅವಾಗಲೆ ನಿಮಗೆ ಜನಸಾಮಾನ್ಯರ ಕಷ್ಟ ಏನು ಅನ್ನೋದು ಅರ್ಥ ಆಗೋದು, ಬೆಂಗಳೂರಲ್ಲಿ ಕೂತು ಬೆಲೆ ಏರಿಸೋದು ಎಷ್ಟು ಮುಖ್ಯನೋ, ಬೆಳಗಾವಿಲಿ ಆಟೋಗಳಿಗೆ ಮೀಟರ್ ಅಳವಡಿಸೋದು ಅಷ್ಟೇ ಮುಖ್ಯ , ಎಲ್ಲ ಕಡೆಯಿಂದಲೂ ಲೂಟಿ ಆಗಬಾರದು ಸ್ವಾಮೀ , ಒಂದ ಕಡೆಯಿಂದನಾದರು ಸಾಮಾನ್ಯ ಜನರಿಗೆ ಕಿಂಚಿತ್ತಾದರೂ ಲಾಭ ಆಗುವ ಹಾಗೆ ಒಂದೊಳ್ಳೆ ಕೆಲಸ ಮಾಡಿ, ನಮಗೂ ಬದುಕಲು ಬಿಡಿ ” .

Mahanta  Vakkunda
ಮಹಾಂತ ವಕ್ಕುಂದ
ಮ್ಯುನಿಕ್ – ಜರ್ಮನಿ

loading...

LEAVE A REPLY

Please enter your comment!
Please enter your name here