ಅಂಗಡಿಗಳಿಗೆ ಕಡಿಮೆ ಪ್ರಮಾಣದ ಧಾನ್ಯ ಪೂರೈಕೆ

0
13
loading...

ಖಾನಾಪುರ 28: ಬಡವರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ತಾಲೂಕಿನಾದ್ಯಂತ ಇರುವ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಪೂರೈಕೆಯಾಗುವ ಅಕ್ಕಿ, ಸಕ್ಕರೆ ಹಾಗೂ ಗೋಧಿಗಳ ತೂಕದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದ ಪಡಿತರ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಇಲಾಖೆಯಿಂದ ತಮ್ಮ ಅಂಗಡಿಗಳಿಗೆ ಸರಬರಾಜು ಆಗುವ ಆಹಾರ ಧಾನ್ಯಗಳ ಚೀಲಗಳು ನಿಗದಿತ ತೂಕದಲ್ಲಿರದೇ ಕಡಿಮೆಯಿರುವ ಕಾರಣ ಇವುಗಳನ್ನು ಗ್ರಾಹಕರಿಗೆ ಹಂಚುವ ಸಂದರ್ಭದಲ್ಲಿ ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗುತ್ತದೆ ಎಂದು ತಾಲೂಕಿನ ಹಲವು ನ್ಯಾಯಬೆಲೆ ಅಂಗಡಿಯವರು ತಮ್ಮ ಅಳವನ್ನು ತೋಡಿಕೊಂಡಿದ್ದಾರೆ. ಇದರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ, ಆಹಾರ ಸರಬರಾಜು ಮಾಡುವ ಹಮಾಲರು ಮತ್ತು ಚಾಲಕರ ಹಾಗೂ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿಯ ಕೈವಾಡವಿದ್ದು, ಈ ಬಗ್ಗೆ ಅವರಲ್ಲಿ ವಿಚಾರಿಸಿದರೆ, ಇದನ್ನು ಸಮರ್ಥಿಸಿಕೊಂಡು ತಮ್ಮ ಮೇಲೆಯೇ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಚೀಲದ ತೂಕದಲ್ಲಿ ವ್ಯತ್ಯಾಸ: ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ನೂರಾರು 50 ಕೆಜಿ ತೂಕದ ಅಕ್ಕಿಯ ಚೀಲಗಳು ಬರುತ್ತವೆ. ಅದರಲ್ಲಿ ಹಲವು ಚೀಲಗಳು ಹರಿದಿರುತ್ತವೆ, ಮತ್ತೆ ಕೆಲವು ಚೀಲಗಳನ್ನು ಉದ್ದೇಶಪೂರ್ವಕವಾಗಿಯೇ ಹರಿದು ಅಕ್ಕಿಯನ್ನು ತೆಗೆಯಲಾಗಿರುತ್ತದೆ. ಹೀಗಾಗಿ 50 ಕೆಜಿ ಚೀಲದಲ್ಲಿ ಸರಾಸರಿ 45ರಿಂದ 48 ಕೆಜಿ ಅಕ್ಕಿ ಇರುತ್ತದೆ. ಇದೇ ರೀತಿ ಗೋಧಿ ಮತ್ತು ಸಕ್ಕರೆಯ ಚೀಲದಲ್ಲೂ ತೂಕದ ವ್ಯತ್ಯಾಸವಿರುತ್ತದೆ. ಈ ಬಗ್ಗೆ ಆಹಾರಧಾನ್ಯ ಹೊತ್ತು ತಂದ ಲಾರಿಯ ಹಮಾಲರನ್ನು ವಿಚಾರಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಆಹಾರ ಅಧಿಕಾರಿಗಳನ್ನು ವಿಚಾರಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಡಿತರ ಧಾನ್ಯ ವಿತರಣೆ ಅಂಗಡಿಯವರು ಆರೋಪಿಸಿದ್ದಾರೆ.

ಪ್ರತಿ ತಿಂಗಳ ಕೊನೆಯ ವಾರ ತಮ್ಮ ಅಂಗಡಿಗೆ ಬಂದು ಬೀಳುವ ಈ ಧಾನ್ಯದ ತೂಕದಲ್ಲಿ ಇಷ್ಟೊಂದು ಪ್ರಮಾಣದ ವ್ಯತ್ಯಾಸವಿದ್ದರೂ ಇದನ್ನು ಪಡಿತರ ಗ್ರಾಹಕರಿಗೆ ನೀಡುವಾಗ ಸರಿಯಾಗಿ ನೀಡದಿದ್ದರೆ ಅವರಿಂದಲೂ ಆಕ್ಷೇಪಣೆ ಎದುರಿಸಬೇಕಾಗಿದೆ. ಇಷ್ಟು ದಿನ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರತಿ ಕೆಜಿಗೆ ರೂ.3.50 ಗಳಿಗೆ ಸಿಗುತ್ತಿದ್ದ ಅಕ್ಕಿ ಈ ತಿಂಗಳಿಂದ 1 ರೂಪಾಯಿಗೆ ಸಿಗುತ್ತಿದೆ. ಆದರೆ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ತಮಗೆ ಅಧಿಕಾರಿಗಳು ಹಾಗೂ ವಿತರಕರು ಮಾಡುವ ಗೋಲಮಾಲ್ನಿಂದ ತೊಂದರೆಯುಂಟಾಗುತ್ತಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಿಸಿ ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಈ ಮೂಲಕ ಅವರು ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here