ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ: ಓತಗೇರಿ

0
6
loading...

ಖಾನಾಪುರ 19: ಅಪಘಾತ ಅಥವಾ ಅನೀರೀಕ್ಷಿತ ಅನಾರೋಗ್ಯಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರಕ್ತವನ್ನು ದಾನ ಮಾಡುವುದರಿಂದ ಒಂದು ವ್ಯಕ್ತಿಯ ಜೀವವನ್ನು ಉಳಿಸಿದ ಪುಣ್ಯ ಸಂಪಾದಿಸಬಹುದು. ಹೀಗಾಗಿ ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ ಎಂದು ಸ್ಥಳೀಯ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಎಸ್.ಜಿ ಓತಗೇರಿ ಅಭಿಪ್ರಾಯ ಪಟ್ಟರು.

ಪೊಲೀಸ್ ತರಬೇತಿ ಶಾಲೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ರಕ್ತ ಭಂಡಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ಉಚಿತ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದ ಕೃತಕ ಉತ್ಪಾದನೆ ಸಾಧ್ಯವಿಲ್ಲ. ಕೆಲವು ಗರ್ಭಿಣಿ ಸ್ತ್ತ್ರೀಯರ ಪ್ರಸೂತಿ ಸಮಯದಲ್ಲಿ, ರಸ್ತೆ ಅಪಘಾತಗಳು ಸಂಭವಿಸಿದಾಗ ಹಾಗೂ ಅನೇಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹೀಗಾಗಿ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ಸ್ವಯಂಪ್ರೇರಣೆಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ರಕ್ತದಾನ ಮಾಡಲು ಇಚ್ಛಿಸಿದರು. ಅದರಂತೆ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಂದ್ರ ಬಾಳಿಕಾಯಿ ಮಾತನಾಡಿ, ರಕ್ತದ ಕೊರತೆಯಿಂದ ಬಳಲುತ್ತಿದ್ದ ತಾಲೂಕು ಆಸ್ಪತ್ರೆಯ ರಕ್ತ ಬಂಢಾರಕ್ಕೆ ಪೊಲೀಸ್ ತರಬೇತಿ ಶಾಲೆಯ 49 ಪ್ರಶಿಕ್ಷಣಾರ್ಥಿಗಳು ದಾನ ಮಾಡಿದ ರಕ್ತ ಅತ್ಯಮೂಲ್ಯವೆನಿಸಿದೆ. ತಾಲೂಕಿನ ಇತಿಹಾಸದಲ್ಲೇ ಇದು ಅತೀ ಹೆಚ್ಚು ಪ್ರಮಾಣದ ರಕ್ತ ದಾನ ಮಾಡಿದ ಶಿಬಿರ ಎಂಬ ದಾಖಲೆ ನಿರ್ಮಿಸಿದೆ. ಈ ಸಾಧನೆಗೆ ಕಾರಣೀಭೂತರಾದ ತರಬೇತಿ ಶಾಲೆಯ ಪ್ರಾಚಾರ್ಯರು ಮತ್ತು ಪ್ರಶಿಕ್ಷಣಾರ್ಥಿಗಳು ನಿಜಕ್ಕೂ ಅಭಿನಂದನಾರ್ಹರು ಎಂದರು. ರಕ್ತ ಬಂಢಾರದ ವೈದ್ಯ ಡಾ.ಅಮಿತ ಗಾಯಕವಾಡ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಮಾನವೀಯತೆಯ ದೃಷ್ಟಿಯಿಂದ ರಕ್ತದಾನ ಮಾಡಲು ಕರೆ ನೀಡಿದರು.

ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್ ಮುತ್ನಾಳ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪ್ರಧಾನ ಕವಾಯತು ಬೋಧಕ ಟಿ.ಎಸ್ ಜರಳಿ ಉಸ್ತುವಾರಿ ವಹಿಸಿದ್ದರು. ತರಬೇತಿ ಶಾಲೆಯ ಅಧಿಕಾರಿಗಳು, ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು, ತಾಲೂಕು ಆಸ್ಪತ್ರೆಯ ತಂತ್ರಜ್ಞರು ಹಾಗೂ ರಕ್ತ ಭಂಡಾರದ ಸಿಬ್ಬಂದಿ ಪಾಲ್ಗೊಂಡು ರಕ್ತದಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

loading...

LEAVE A REPLY

Please enter your comment!
Please enter your name here