ಆಟೋ ಚಾಲಕರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ರ ಸಮಾಲೋಚನೆ

0
20

ಆಟೋ ಮೀಟರ ಹಿಂಪಡೆಯಲಾಗದು ಚಾಲಕರ ಸಮಸ್ಯೆ ಪರಿಹರಿಸುವೆ

loading...

ಬೆಳಗಾವಿ 2: ಸಂಚಾರ ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಆಟೋಗಳಿಗೆ ಮೀಟರ್ ಕಡ್ಡಾಯ ಅಗತ್ಯ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಡಳಿತವೂ ಯಾವುದೆ ಕಾರಣಕ್ಕೂ ಕಡ್ಡಾಯ ಮೀಟರ್ ಆದೇಶ ಹಿಂಪಡೆಯಲು ಸಾಧ್ಯವಿಲ್ಲ. ಆದರೆ, ಆಟೋ ಚಾಲಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವ ಭರವಸೆ ನೀಡಿದೆ.

ಕಡ್ಡಾಯ ಮೀಟರ್ ಅಳವಡಿಕೆಯನು ವಿರೋಧಿಸಿ ಆಟೋ ಚಾಲಕರು ನಡೆಸುತ್ತಿರುವ ಪ್ರತಿಭಟನೆ ಮತ್ತು ಕಡ್ಡಾಯ ಮೀಟರ್ ಅಳವಡಿಕೆಗೆ ಆಟೋ ಚಾಲಕರು ವಿರೋಧೀಸಲು ನೀಡುತ್ತಿರುವ ಕಾರಣಗಳ ಬಗ್ಗೆ ಚರ್ಚಿಸಲು ಶುಕ್ರವಾರದಂದು ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ. ಚಂದ್ರಗುಪ್ತ ಅವರು ತಮ್ಮ ಕಚೇರಿಯ ಸಭಾ ಭವನದಲ್ಲಿ ಆಟೋ ಚಾಲಕರೊಂದಿಗೆ ಸಭೆ ನಡೆಸಿದರು.

ಸಭೆಯ ಆರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಡಾ. ಚಂದ್ರಗುಪ್ತ ಅವರು, ಬೆಳಗಾವಿ ಮಹಾನಗರದಲ್ಲಿ ಒಂದು ಸುವ್ಯವಸ್ಥೆ ಜಾರಿಗೆ ತರುವ ದಿಸೆಯಲ್ಲಿ ಮೀಟರ್ ಕಡ್ಡಾಯದಂತಹ ನಿರ್ಣಯ ಕೈಗೊಳ್ಳಲಾಗಿದೆ. ಈಗ ಹೊರಡಿಸುವ ಆದೇಶ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದರು.

ಅಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆ ಮಹಾನಗರಗಳಲ್ಲಿ ಸಾಮಾನ್ಯ. ಬೆಳಗಾವಿಯಲ್ಲಿ ಇದುವರೆಗೆ ಇಂಥ ವ್ಯವಸ್ಥೆ ಇಲ್ಲವಾದ್ದರಿಂದ ಹಲವು ಸಮಸ್ಯೆ ಸೃಷ್ಟಿಗೊಂಡಿದೆ. ಸಾರ್ವಜನಿಕರು ಹಾಗೂ ಹೊರಗಿನ ಪ್ರದೇಶಗಳಿಂದ ಬರುವವರಿಂದ ರಿಕ್ಷಾ ಚಾಲಕರು ಸುಲಿಗೆ ಹಾಗೂ ಕಿರಿಕಿರಿ ಅನುಭವಿಸುವ ಆರೋಪದ ಹಿನ್ನೆಲೆಯಲ್ಲಿ ಮೀಟರ್ ಅಳವಡಿಕೆ ಸಾರ್ವಜನಿಕ ಹಿತಾಸಕ್ತಿಯಿಂದ ಉತ್ತಮ ಸಂದೇಶ ರವಾನಿಸುತ್ತದೆ ಎಂದು ತಿಳಿಸಿದರು.

ಮೀಟರ್ ಅಳವಡಿಕೆಗೆ ಸಂಬಂಧಿಸಿ ಅಟೋ ಚಾಲಕರು ಇನ್ನು ಕೆಲ ಸಮಯದವರೆಗೆ ಕಾಲಾವಕಾಶ ಕೋರಿದರೂ ಅದನ್ನು ನಯವಾಗಿಯೇ ತಿರಸ್ಕರಿಸಿದ ಎಸ್ಪಿ, ಆಟೋ ಮೀಟರ್ ಕಡ್ಡಾಯ ಜಾರಿಯಾಗಲಿ, ಒಂದು ವ್ಯವಸ್ಥೆ ರೂಪುಗೊಂಡ ನಂತರ ಸುಧಾರಣೆ ಸಾಧ್ಯ.  ಜುಲೈ ತಿಂಗಳಲ್ಲೇ ಮೀಟರ್ ಕಡ್ಡಾಯಗೊಳಿಸಲಾಗಿದ್ದರೂ ಚಾಲಕರು ಅನುಷ್ಠಾನಗೊಳಿಸಿಲ್ಲ. ಇನ್ನು ಕಾಲಾವಕಾಶಕ್ಕೆ ಅವಕಾಶ ಇಲ್ಲ. ಮೀಟರ್ ಅಳವಡಿಕೆ ಮೂಲಕ ಸುಧಾರಿತ ವ್ಯವಸ್ಥೆ ಜಾರಿಗೆ ಸಹಕರಿಸುವಂತೆ ಮನವಿ ಮಾಡಿದರು.

ಮೀಟರ್ ಕಡ್ಡಾಯಗೊಳಿಸಲು ಏನೇ ಸಮಸ್ಯೆ ಬಂದರೂ ಹೇಳಿ. ಅದನ್ನು ನಿಭಾಯಿಸಲು ಜಿಲ್ಲಾ ಪೊಲೀಸ್ ಸಿದ್ಧವಿದೆ. ಕಡ್ಡಾಯ ಮೀಟರ್ ಅಳವಡಿಕೆಗೆ ಸಂಬಂಧಿಸಿ ಪೊಲೀಸರು ವಶಪಡಿಸಿಕೊಂಡಿರುವ ರಿಕ್ಷಾಗಳನ್ನು ವಾಪಾಸ್ ನೀಡಲಾಗುತ್ತದೆ. ಯಾವುದೇ ದಂಡವನ್ನು ಹಾಕುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ಅಟೋಗಳನ್ನು ವಶಪಡಿಸಿಕೊಳ್ಳುವ ಪೊಲೀಸರಿಗೆ ಸೌಜನ್ಯಯುತವಾಗಿ ಮಾತನಾಡುವಂತೆ ತಿಳಿಸುವುದಾಗಿ ಅವರು ವಾಗ್ದಾನ ನೀಡಿದರು.

ಮೀಟರ್ ಅಳವಡಿಕೆಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ ಇದೆ. ಮೀಟರ್ ಜೋಡಣೆಗೆ ಹೆಚ್ಚು ಹಣ ಪಡೆದುಕೊಂಡರೆ ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಪ್ರಾದೇಶಿಕ ಸಾರಿಗೆ ಇಲಾಖೆ ಮೀಟರ್ ರೀಡಿಂಗ್ಗೆ ಸಂಬಂಧಿಸಿ ಪರಿಷ್ಕ್ಕತ ದರಪಟ್ಟಿಯನ್ನು ಹಂಚಲು ಕ್ರಮ ತೆಗೆದುಕೊಳ್ಳಬೇಕು. ಪೆಟ್ರೌಲ್, ಡಿಸೇಲ್ ಬೆಲೆ ಆಗಾಗ ಏರುತ್ತಿರುವುದರಿಂದ ಆರ್ಟಿಎ ಸಭೆಯನ್ನು ಕರೆದು ಮತ್ತೆ ದರ ಪರಿಷ್ಕರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ವಚನ ನೀಡಿದರು.

ಬೆಳಗಾವಿ ಮಹಾನಗರದಲ್ಲಿ ಸದ್ಯ 6,156 ಅಟೋರಿಕ್ಷಾಗಳು ನೊಂದಣಿಯಾಗಿವೆ. ಇದರಲ್ಲಿ 5,514 ರಿಕ್ಷಾಗಳು ಪರ್ಮಿಟ್ ಹೊಂದಿವೆ. 3401 ಮೀಟರ್ ಇರುವ ರಿಕ್ಷಾಗಳ ಮಾಹಿತಿ ಇದೆ. ಇವೆಲ್ಲವು ಪರ್ಮಿಟ್ ಪಡೆದುಕೊಳ್ಳುವಾಗಲೇ ಮೀಟರ್ ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಬಂಧನೆಗೊಳಪಟ್ಟಿರುತ್ತವೆ. ಆದಷ್ಟು ಬೇಗ ರೀಡಿಂಗ್ ಆಗದ ರಿಕ್ಷಾಗಳು ರೀಡಿಂಗ್ ಚಾಲನಾ ಸ್ಥಿತಿಗೆ ತಲುಪುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮೀಟರ್ ಅಳವಡಿಕೆಯ ತಾಂತ್ರಿಕ ಕೆಲಸಗಾರರು ನಗರದಲ್ಲಿ ಇಲ್ಲದೇ ಹೋದಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಿಂದ ಕರೆ ತಂದು ಸೂಕ್ತ ವ್ಯವಸ್ಥೆ ಮಾಡಿ ಮೀಟರ್ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಡಾ. ಚಂದ್ರಗುಪ್ತ ಅವರ ಸ್ಪಷ್ಟ ನಿಲುವಿನ ಮುಂದೆ ಏನು ಮಾಡಲಾಗದ ಆಟೋ ಚಾಲಕರು ಮೀಟರ್ ಅಳವಡಿಕೆಗೆ ಒಪ್ಪಿಗೆ ಸೂಚಿಸಿದರು. ಅಟೋರಿಕ್ಷಾ ಚಾಲಕರು ಮಾತನಾಡಿ, ಮೀಟರ್ ಅಳವಡಿಕೆಗೆ ತಮ್ಮ ವಿರೋಧ ಇಲ್ಲ. ಆದರೆ, ಸರಿಯಾದ ರಸ್ತೆ ಸಮಸ್ಯೆ,ಪೆಟ್ರೌಲ್-ಡಿಸೇಲ್ ಬೆಲೆ ಏರಿಕೆ, ಮೀಟರ್ ಅಳವಡಿಕೆಗೆ ಹೆಚ್ಚು ಹಣ ನೀಡಬೇಕಾಗಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಆರ್ಟಿಒ ಅಧಿಕಾರಿಗಳು ಇರುವ ಕಾನೂನನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ಮಹಾನಗರದಿಂದ 16 ಕಿ.ಮೀ. ದೂರ ಟೆಂಪೋ ಮುಂತಾದ ಖಾಸಗಿ ವಾಹನಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳದಂತೆ ಆಡಳಿತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಆರ್ಟಿಒ ಹೇಮಾದ್ರಿ ಉಪಸ್ಥಿತರಿದ್ದರು.

ಶುಕ್ರವಾರ ಆಟೋ ಸಂಚಾರ ಸ್ಥಗಿತಗೊಂಡಿದ್ದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶಗಳಿಂದ ಬಂದ ವಯೋವೃದ್ಧರು, ರೋಗಿಗಳು ಪರದಾಡುವಂತಾಯಿತು.

loading...

LEAVE A REPLY

Please enter your comment!
Please enter your name here