ತಾಪಂ ಇಒ ಯಕ್ಕುಂಡಿ ಹಠಾತ್ ವರ್ಗಾವಣೆ

0
23

ಖಾನಾಪುರ 2: ಮಹತ್ವದ ಬೆಳವಣಿಗೆಯೊಂದರಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಬೆಳಗಾವಿ ಜಿಪಂನ ಸಹಾಯಕ ಇಂಜಿನಿಯರ್ ಎ.ಎಂ ಪಾಟೀಲ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಜು.30ರಂದು ಗ್ರಾಮೀಣಾಭಿವೃದ್ದಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಯಕ್ಕುಂಡಿಯವರಿಗೆ ಯಾವುದೇ ಸ್ಥಾನ ತೋರಿಸದೇ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ತಿಳಿಸಿದೆ. ಕಳೆದ ವರ್ಷವಷ್ಟೇ ಈ ಸ್ಥಾನವನ್ನು ಅಲಂಕರಿಸಿದ್ದ ಯಕ್ಕುಂಡಿ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ತಾಪಂ ಅಧ್ಯಕ್ಷೆ ಪ್ರೇಮಾ ದೊಡಮನಿ, ಉಪಾಧ್ಯಕ್ಷ ಸುರೇಶ ದೇಸಾಯಿ ಹಾಗೂ ಎಲ್ಲ ತಾಪಂ ಸದಸ್ಯರು ಮತ್ತು ಜಿಪಂ ಸದಸ್ಯರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

ಶುಕ್ರವಾರ ತಾಪಂ ಸಭಾಗೃಹದಲ್ಲಿ ಸಭೆ ಸೇರಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ತಾಪಂ ಸದಸ್ಯರು ಕಳೆದ ವರ್ಷ ಜುಲೈನಲ್ಲಿ ಈ ಸ್ಥಾನಕ್ಕೆ ಹಾಜರಾಗಿದ್ದ ಯಕ್ಕುಂಡಿಯವರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತವನ್ನು ನಡೆಸಿದ್ದರು. ಒಬ್ಬ ಅಧಿಕಾರಿ ಒಂದು ಸ್ಥಾನದಲ್ಲಿ ಮೂರು ವರ್ಷ ಇರಬೇಕೆಂಬ ಕಾನೂನು ಇದ್ದರೂ ಒಂದೇ ವರ್ಷಕ್ಕೆ ಅವರನ್ನು ವರ್ಗಾವಣೆ ಮಾಡಿರುವುದನ್ನು ನಾವೆಲ್ಲ ವಿರೋಧಿಸುತ್ತೇವೆ ಎಂದು ತಾಪಂ ಸದಸ್ಯರು ಒಕ್ಕೂರಲಿನಿಂದ ಹೇಳಿದರು.

ಈ ಮಧ್ಯೆ ನೂತನ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಎ.ಎಂ ಪಾಟೀಲ ಶುಕ್ರವಾರ ಮಧ್ಯಾಹ್ನ ನಿಕಟಪೂರ್ವ ಅಧಿಕಾರಿ ಯಕ್ಕುಂಡಿಯವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನ ಅಭಿವೃದ್ದಿಗೆ ಶ್ರಮಿಸುವ ಮೂಲಕ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದಾಗಿ ಹೇಳಿದರು.

loading...

LEAVE A REPLY

Please enter your comment!
Please enter your name here