ವಿವೇಕಾನಂದರು ತರುಣರಿಗೆ ಸ್ಪೂರ್ತಿ : ಸ್ವಾಮಿ ನಿರ್ಭಯಾನಂದ

0
85
loading...

ಅಥಣಿ 9- ಸ್ವಾಮಿ ವಿವೇಕಾನಂದರ ಆದರ್ಶಮಯ ಬದುಕು, ಉಪನ್ಯಾಸ, ವ್ಯಕ್ತಿತ್ವ ಮತ್ತು ಜೀವನ ಸಂದೇಶಗಳು ವಿಶ್ವದ ಕೊಟ್ಯಾಂತರ ತರುಣರಿಗೆ ಇಂದಿಗೂ ಅದಮ್ಯ ಸ್ಪೂರ್ತಿ ಎಂದು ಬಿಜಾಪೂರದ ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಮಹಾರಾಜ್ ಹೇಳಿದರು.

ಅವರು ಸ್ವಾಮಿ ವಿವೇಕಾನಂದರ 150 ನೇ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ರಾಮಕೃಷ್ಣ ಮಿಷನ್ ಆಯೋಜಿಸಿರುವ ವಿವೇಕಾನಂದ ರಥಯಾತ್ರೆಯ ಅಂಗವಾಗಿ ಸ್ಥಳೀಯ ಭೋಜರಾಜ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಭಾರತದ ಬಗೆಗೆ ಕಿಳರಿಮೆ ಹೊಂದಿದ್ದ ಆ ದಿನಗಳಲ್ಲಿ ಭಾರತದ ಗೌರವ, ಹಿರಿಮೆಯನ್ನು ಸ್ವಾಮಿ ವಿವೇಕಾನಂದರು ಕೇವಲ ತಮ್ಮ ಕೆಲವು ನಿಮಿಷಗಳ ಉಪನ್ಯಾಸದ ಮೂಲಕ ಹೆಚ್ಚಿಸಿದರು. ವಿದೇಶಗಳಲ್ಲಿ ಸಾವಿರಾರು ಅನುಯಾಯಿಗಳು ಹುಟ್ಟಿಕೊಂಡಿದ್ದಲ್ಲದೆ ಸದಾ ಭಾರತವನ್ನು ತೆಗಳುತ್ತಿದ್ದ ಇಂಗ್ಲೀಷ ಪತ್ರಿಕೆಗಳು ವರ್ಷಗಟ್ಟಲೆ ವಿವೇಕಾನಂದರ ಕುರಿತಾಗಿ ಲೇಖನಗಳನ್ನು ಪ್ರಕಟಿಸಿದವು ಎಂದ ಅವರು ಸ್ವಾಮಿ ವಿವೇಕಾನಂದರು ಚಿಕ್ಯಾಗೋದಲ್ಲಿ ಉಪನ್ಯಾಸ ನೀಡಿದ ದಿನವನ್ನು ಇಡೀ ವಿಶ್ವ ಶತಮಾನೋತ್ಸವ ಆಚರಿಸಿತು ಇದು ವಿಶ್ವದಲ್ಲಿಯೇ ಒಬ್ಬ ವ್ಯಕ್ತಿ ಉಪನ್ಯಾಸ ನೀಡಿದ ದಿನದ ಶತಮಾನೋತ್ಸವ ಆಚರಿಸಿದ್ದು ಇದೇ ಮೊಟ್ಟ ಮೊದಲು ಎಂದು ಹೇಳಿದರು.  ಅವರ ವ್ಯಕ್ತಿತ್ವದಿಂದ ಸ್ಪೂರ್ತಿ ಪಡೆದ ನೂರಾರು ತರುಣರು ತಮ್ಮ ಜೀವನವನ್ನು ದೇಶ ಮತ್ತು ಸಮಾಜ ಸೇವೆಗೆ ಮುಟುಪಿಟ್ಟಿದ್ದಾರೆ. ಅಂದು ನೇತಾಜಿ ಸುಭಾಸ್ಚಂದ್ರ ಭೋಸ್ ತಮ್ಮ ಐ.ಸಿ.ಎಸ್ ಪದವಿಯನ್ನು ಧಿಕ್ಕರಿಸಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮಿಕಿದರೆ ಇಂದು ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಕ್ರಾಂತಿ ಎಬ್ಬಿಸಿದ ಅಣ್ಣಾ ಹಜಾರೆಯವರಿಗೂ ಕೂಡ ವಿವೇಕಾನಂದರೆ ಸ್ಪೂರ್ತಿ ಚಿಲುಮೆ ಎಂದ ಅವರು ತರುಣ ಜನಾಂಗಕ್ಕೆ ವಿವೇಕಾನಂದರ ಜೀವನ ಸಂದೇಶ ತಲುಪಿಸುವ ಉದ್ದೇಶದಿಂದ ಇಡೀ ದೇಶಾದ್ಯಂತ ರಥ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಭವ್ಯ ಭಾರತದ ಕನಸು ಕಂಡಿದ್ದ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ನಮಗೆಲ್ಲ ಆದರ್ಶ ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೈತಿಕ ಬದುಕು ನಮ್ಮದಾಗಬೇಕು ಎಂದು ಹೇಳಿದರು.

ರಥ ಯಾತ್ರೆ ಸ್ವಾಗತ ಸಮಿತಿ ಸದಸ್ಯ ಅರವಿಂದ ದೇಶಪಾಂಡೆ ಮಾತನಾಡಿ, ವಿವೇಕಾನಂದರು ದಕ್ಷಿಣ ಭಾರತಕ್ಕೆ ಆಗಮಿಸಿದ್ದು ಮೊಟ್ಟ ಮೊದಲು ನಮ್ಮ ಬೆಳಗಾವಿಗೆ. ಇದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರಿನ ರಾಮಕೃಷ್ಣ ಮಠದ ರಘುರಾಮಾನಂದಜಿ ಈ ರಥ ಯಾತ್ರೆ ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಸಂಚರಿಸಿದ್ದು, ಎಲ್ಲ ಕಡೆಗೆ ಅಭೂತಪೂರ್ವ ಸ್ಪಂದನೆ ದೊರಕಿದೆ. ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಬಸವರಾಜ ಕುಳಲಿ ಕಾರ್ಯಕ್ರಮ ನಿರೂಪಿಸಿದರು, ಉಮೇಶ ಬೋಂಟಡ್ಕರ ವಂದಿಸಿದರು. ಪ್ರಮೋದ ಜೋಶಿ ಸ್ವಾಗತಿಸಿದರು. ಅನಂತ ಮುತಾಲಿಕ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

loading...

LEAVE A REPLY

Please enter your comment!
Please enter your name here