ಸಹಕಾರಿ ಸಂಘಗಳು ರೈತರ ಅಭಿವೃದ್ದಿಗೆ ಶ್ರಮಿಸಲಿ

0
25
loading...

ಮೂಡಲಗಿ 9- ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ, ರೈತರು ಬೆಳೆಯುವ ಬೆಳೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಲು ಹುಟ್ಟಿಕೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಅಭಿವೃದ್ದಿಗೆ ಶ್ರಮಿಸುವಂತೆ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದರು.

ಸಮೀಪದ ನಾಗನೂರ ಗ್ರಾಮದಲ್ಲಿ ಗುರುವಾರದಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.   ನಾಗನೂರು ಪಿಕೆಪಿಎಸ್ ಸಂಘ 75 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಶತಮಾನೋತ್ಸವದತ್ತ ದಾಪುಗಾಲು ಹಾಕುತ್ತಿರುವ ಸಂಘದ ಕಾರ್ಯ ಶ್ಲಾಘನೀಯವೆಂದರು. ಸಹಕಾರಿ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಲಕ್ಷ್ಮಣ ಸವದಿಯವರು ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಾನೂನು ತಿದ್ದುಪಡಿ ಮಾಡುವ ಮೂಲಕ ಸಹಕಾರಿಗಳಿಗೆ ಹಾಗೂ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟರು. ಸವದಿಯವರು ಡಿಸಿಸಿ ಬ್ಯಾಂಕ ಅಧ್ಯಕ್ಷರಾಗಿ ವರ್ಷದೊಳಗೆ 1600 ಕೋಟಿ ರೂ.ಗಳನ್ನು ಠೇವಣಿ ಹಣ ಸಂಗ್ರಹಿಸಿ ಡಿಸಿಸಿ ಬ್ಯಾಂಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ 1200 ಕೋಟಿ ರೂ.ಗಳು ಠೇವಣಿ ಹಣ ಸಂಗ್ರಹವಾಗಿತ್ತು ಎಂದು ಹೇಳಿದರು. ತಮ್ಮ ಪೂಜ್ಯ ತಂದೆ-ತಾಯಿಯವರ ಸ್ಮರಣಾರ್ಥ ಸ್ಥಾಪಿಸಿರುವ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟಿನ ಅಪಘಾತ ವಿಮಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮ್ಯಾನೇಜಿಂಗ್ ಟ್ರಸ್ಟಿಯೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಕೋರಿದರು.

ಶಾಸಕರಿದ್ದ ಅವಧಿಯಲ್ಲಿ ಬಿಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಲಕ್ಷ್ಮಣ ಸವದಿಯವರು ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗೈದಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳ ಅಭ್ಯುದಯಕ್ಕೆ ಅಪಾರವಾಗಿ ಶ್ರಮಿಸುತ್ತ ಬಂದಿದ್ದಾರೆ. ಇವರ ಸಹಕಾರದಿಂದ ಅರಭಾವಿ ಕ್ಷೇತ್ರದಲ್ಲಿ 12 ಸೇರಿದಂತೆ ಗೋಕಾಕ ತಾಲ್ಲೂಕಿನಲ್ಲಿ 25 ಸಹಕಾರಿ ಸಂಘಗಳು ಹೊಸದಾಗಿ ಅಸ್ಥಿತ್ವಕ್ಕೆ ಬಂದಿವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕ್ಯಾಶ್ ಕೌಂಟರ ಉದ್ಘಾಟಿಸಿ ಮಾತನಾಡಿದ ಅಥಣಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಲಕ್ಷ್ಮಣ ಸವದಿ, ಬಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಯಲ್ಲಿ 700 ಕೋಟಿ ರೂ. ಸಾಲ ನೀಡಿದ್ದೇವೆ. ಮುಂದೆ 1000 ಕೋಟಿ ರೂ.ಗಳ ರೈತರಿಗೆ ಬಡ್ಡಿ ರಹಿತ ಕೃಷಿ ಸಾಲ ನೀಡುವ ಸಂಕಲ್ಪ ಹೊಂದಿದ್ದೇವೆ. ಗೋಕಾಕ ತಾಲ್ಲೂಕಿನಲ್ಲಿ 83 ಸಂಘಗಳಿದ್ದು ಸುಮಾರು 65 ಕೋಟಿ ರೂ.ಗಳನ್ನು ರೈತರಿಗೆ ಸಾಲ ನೀಡಲಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುತ್ತೇವೆ. ಈಗಾಗಲೇ 1600 ಕೋಟಿ ರೂ. ಠೇವಣಿ ಹಣ ಹಾಗೂ 2400 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ ರಾಜ್ಯದಲ್ಲಿಯೇ ನಂ.1 ಬ್ಯಾಂಕ ಆಗಿ ಪರಿವರ್ತನೆ ಹೊಂದಿದೆ. 2013-14ನೇ ಸಾಲಿನಲ್ಲಿ 18 ಲಕ್ಷ ರೈತರಿಗೆ 25 ಸಾವಿರ ಸಾಲ ಮನ್ನಾ ಮಾಡಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಲಾಭಾಂಶ ನೀಡಬೇಕೆಂಬ ಉದ್ದೇಶದಿಂದ ರೈತರ ಏಳ್ಗೆಗೆ ನಮ್ಮ ಬ್ಯಾಂಕು ಸದಾ ಬದ್ಧವಾಗಿದೆ. ಗೋಕಾಕ ತಾಲ್ಲೂಕಿನಲ್ಲಿ ಹೊಸ ಸಂಘಗಳನ್ನು ಸ್ಥಾಪಿಸುವುದಾದರೆ ಅದಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಸವದಿ ಹೇಳಿದರು.

ಕೇಂದ್ರ ಸರ್ಕಾರದ ಆರ್ಬಿಐ ಮತ್ತು ನಬಾರ್ಡ ಯೋಜನೆ ಈಗಿರುವ ತ್ರೀಟೈರ್ ಸಿಸ್ಟ್ಮ್ ತೆಗೆದು ಟುಟೈರ್ ಸಿಸ್ಟಮ್ ಅಳವಡಿಸಿ ಆದೇಶ ಹೊರಡಿಸಿರುವುದು ಖಂಡನೀಯ. ನಬಾರ್ಡ ಅಧ್ಯಕ್ಷ ಪ್ರಕಾಶ ಅವರು ನೀಡಿದ ವರದಿಯನ್ವಯ ಆರ್ಬಿಐ ಈ ಸುತ್ತೌಲೆ ಹೊರಡಿಸಿದ್ದು ಇದು ಸಹಕಾರಿ ಸಂಘಗಳಿಗೆ ಮಾರಕವಾಗಲಿದೆ. ಬೆಂಗಳೂರಿನಲ್ಲಿ ಇದೇ ದಿ. 16 ರಂದು ಸಂಘಗಳ ಪದಾಧಿಕಾರಿಗಳು ಸಭೆ ನಡೆಸಿ ಪ್ರತಿಭಟನೆಗೆ ಅಣಿಯಾಗುತ್ತಿದ್ದೇವೆ. ಆರ್ಬಿಐ ಸುತ್ತೌಲೆ ಹಿಂದಕ್ಕೆ ಪಡೆಯದಿದ್ದಲ್ಲಿ ರಾಜ್ಯದಲ್ಲಿರುವ ಸುಮಾರು 4800 ಕೃಷಿ ಪತ್ತಿನ ಸಂಘಗಳು ಬಾಗಿಲು ಮುಚ್ಚಬೇಕಾದ ಪ್ರಸಂಗ ಒದಗಿ ಬರುತ್ತದೆ ಎಂದು ವಿಷಾದದಿಂದ ನುಡಿದರು. ಕೃಷಿ ಪತ್ತಿನ ಸಂಘಗಳು ಇರುವುದರಿಂದಲೇ ರೈತ ಸಮುದಾಯಕ್ಕೆ ಅಪಾರ ಲಾಭವಾಗುತ್ತಿದೆ. ಕೇಂದ್ರ ಸರ್ಕಾರ ಸಹಕಾರಿ ಸಂಘಗಳ ಮೇಲೆ ಮಹ್ಮದ ತುಘಲಕ ಆಡಳಿತ ನಡೆಸುತ್ತಿರುವುದು ಖೇದನೀಯವೆಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಬಸಗೌಡ ರಾಮನಗೌಡ ಪಾಟೀಲ ವಹಿಸಿದ್ದರು.

ನಾಗನೂರ ಪಿಕೆಪಿಎಸ್ ಸಂಘದ ಅಧ್ಯಕ್ಷ ಶಂಕರ ಹೊಸಮನಿ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸುಭಾಷ ಢವಳೇಶ್ವರ, ತಮ್ಮಣ್ಣ ಪಾರ್ಶಿ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಸಂಘದ ನಿರ್ದೇಶಕರಾದ ಸಿದ್ರಾಮ ಬಾಗೇವಾಡಿ, ಕೆಂಚಪ್ಪ ಹಳೇಗೌಡರ, ಬಸವರಾಜ ಪಾಟೀಲ, ಭೀಮಪ್ಪ ಗುಡೆನ್ನವರ, ರಾಮಪ್ಪ ಬಿ.ನಾಯ್ಕ, ಕೆಂಚಪ್ಪ ಸಕ್ರೆಪ್ಪಗೋಳ, ಸಿದ್ದಪ್ಪ ಹೆಬ್ಬಾಳ, ಬಿಡಿಸಿಸಿ ಬ್ಯಾಂಕ ತಾಲ್ಲೂಕಾ ನಿಯಂತ್ರಣಾಧಿಕಾರಿ ಜಿ.ಬಿ. ಕೌಜಲಗಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಬಸಯ್ಯಾ ಮಠಪತಿ, ಮುಂತಾದವರು ಉಪಸ್ಥಿತರಿದ್ದರು.

ನೂತನವಾಗಿ ನಿರ್ಮಿಸಿದ ವ್ಯಾಪಾರ ಮಳಿಗೆಗಳ ಉದ್ಘಾಟನೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ನೂತನವಾಗಿ ನಿರ್ಮಿಸಿದ ಸಂಘದ ಕಾರ್ಯಾಲಯವನ್ನು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಎನ್.ವಾಯ್. ಗುತ್ತಿಗೆ ಸಂಪಾದಕತ್ವದಲ್ಲಿ ಹೊರತಂದ ಅಮೃತ ಸಿಂಚನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಂಘದ ಉಪಾಧ್ಯಕ್ಷ ಬಲವಂತ ಕರಬನ್ನವರ ಸ್ವಾಗತಿಸಿದರು. ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿದರು. ಬಸವರಾಜ ಹೊಸಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here