ಖಾನಾಪುರದಲ್ಲಿ ಹೆಸ್ಕಾಂ ಕುಂದು ಕೊರತೆ ಸಭೆ

0
16
loading...

ಖಾನಾಪುರ 23: ತಾಲೂಕಿನಾದ್ಯಂತ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿ ಹಗಲು ಹೊತ್ತಿನಲ್ಲೂ ದೀಪಗಳು ಬೆಳಗುತ್ತಿರುತ್ತವೆ. ಗ್ರಾಮ ಪಂಚಾಯತಿಯ ಸಿಬ್ಬಂದಿ ಇದಕ್ಕೆ ನೇರ ಹೊಣೆಗಾರರಾದರೂ ಹೆಸ್ಕಾಂ ಸಿಬ್ಬಂದಿಯೂ ಇತ್ತ ಗಮನಹರಿಸುವ ಅವಶ್ಯತಕತೆಯಿದೆ. ಇದರಿಂದ ಅನವಶ್ಯಕವಾಗಿ ವಿದ್ಯುತ್ತಿನ ಅಪವ್ಯಯವಾಗುತ್ತಿದ್ದು, ಹೆಸ್ಕಾಂ ಸಿಬ್ಬಂದಿ ಈ ಬಗ್ಗೆ ಮೇಲಿಂದ ಮೇಲೆ ಪರೀಶೀಲನೆ ನಡೆಸಿ ಹಗಲು ಹೊತ್ತಿನಲ್ಲಿ ದೀಪ ಉರಿಸುವ ಗ್ರಾಮ ಪಂಚಾಯತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬೋಗೂರು ಗ್ರಾಮದ ಹೆಸ್ಕಾಂ ಗ್ರಾಹಕ ಸುಂದರ ಕುಲಕರ್ಣಿ ಆಗ್ರಹಿಸಿದರು.

ಪಟ್ಟಣದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ಸೋಮವಾರ ಜರುಗಿದ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ತಾಲೂಕುಮಟ್ಟದ ಕುಂದು ಕೊರತೆ ಸಭೆಯಲ್ಲಿ ಈ ದೂರು ನೀಡಿದ ಅವರು ಕೂಡಲೇ ಹಗಲು ಹೊತ್ತಿನಲ್ಲಿ ಉರಿಯುವ ದೀಪಗಳ ಬಗ್ಗೆ ಹೆಸ್ಕಾಂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಸಮಳಗಿ ಗ್ರಾಮದ ರೈತ ಬಾಬು ಮಡಾಕರ ಮಾತನಾಡಿ, ನಿರಂತರ ಜ್ಯೌತಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಹೊಸ ಲೈನುಗಳ ನಿರ್ಮಾಣ ಕಾಮಗಾರಿಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಗುಂಡಿ ನಿರ್ಮಿಸುವುದನ್ನು ಕೂಡಲೇ ಸ್ಥಗಿತಗೊಳಿಸಿ ಮಾನವ ಶಕ್ತಿಯನ್ನು ಬಳಸಿ ಗುಂಡಿ ತೋಡಬೇಕು ಎಂದರು. ಗಂದಿಗವಾಡದ ಎಂ.ಎಂ ರಾಜೀಭಾಯಿ ಗಂದಿಗವಾಡ ಗ್ರಾಮದ ಪರಂಜ್ಯೌತಿ ಪ್ರೌಢಶಾಲೆ ಮತ್ತು ಮುಗಳಿಹಾಳ ಗ್ರಾಮದ ಶಂಕರಕಾಶಿ ಪ್ರೌಢಶಾಲೆಯ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾರ್ಯ ಮತ್ತು ಪಾಲನೆ ವಿಭಾಗದ ಎಇಇ ಎನ್.ಎಸ್ ಕಾತ್ರಾಳ ಸಭೆಯಲ್ಲಿ ಖಾನಾಪುರ ಶಹರ ಹಾಗೂ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಹೆಸ್ಕಾಂ ಗ್ರಾಹಕರಿಂದ ದೂರು ಹಾಗೂ ಮನವಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹೆಸ್ಕಾಂ ಗ್ರಾಹಕರಾದ ಮನೋಹರ ಕುಲಕರ್ಣಿ, ಬಸವರಾಜ ಶಂಡೂರಿ, ಸುಹಾಸ ಪಾಟೀಲ, ಪಾರೇಕರ, ಸಲೀಂ ನಾಯ್ಕವಾಡಿ, ಮಹಾದೇವ ನಿಲಜಕರ ಮತ್ತಿತರರು ಹಾಗೂ ಹೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಹಕರಿಂದ ದೂರು ಸ್ವೀಕರಿಸಿದ ಎಇಇ ಕಾತ್ರಾಳ ಅವರು ಈ ಬಗ್ಗೆ ಆದಷ್ಟು ಶೀಘ್ರದಲ್ಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸೆಕ್ಷನ್ ಅಧಿಕಾರಿ ಜಿ.ಹೆಚ್ ಬಂಗೇರಾ ಸ್ವಾಗತಿಸಿದರು. ಎಂ.ಡಿ ಪಠಾಣ ನಿರೂಪಿಸಿದರು. ಸಿ.ಎಸ್ ರಂಗನಾಥ ವಂದಿಸಿದರು.

loading...

LEAVE A REPLY

Please enter your comment!
Please enter your name here