ಮಹಾದಾಯಿ ನ್ಯಾಯಾಧಿಕರಣ ತಂಡದಿಂದ ಬಂಡೂರಿ ನಾಲಾ ವೀಕ್ಷಣೆ

0
21
loading...

ಖಾನಾಪುರ: ಮಲಪ್ರಭಾ ನದಿಗೆ ಜೋಡಿಸಲು ಉದ್ದೇಶಿಸಲಾದ ಬಂಡೂರಿ ನಾಲೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಬಂಡೂರಿ ತಿರುವು ಯೋಜನೆಗಾಗಿ ನಿಗದಿಪಡಿಸಿದ ಪ್ರದೇಶವನ್ನು ಗುರುವಾರ ಮಹದಾಯಿ ಜಲ ನ್ಯಾಯಾಧಿಕರಣ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ ಪಾಂಚಾಲ್ ನೇತೃತ್ವದಲ್ಲಿ 55 ಸದಸ್ಯರಿದ್ದ ತಂಡ ಭೇಟಿ ನೀಡಿ ಪರೀಶೀಲನೆ ನಡೆಸಿತು.

ತಾಲೂಕಿನ ನೇರಸಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇರಸಾ-ಕೊಂಗಳಾ ಗ್ರಾಮಗಳ ನಡುವೆ ಬರುವ ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿದ ನ್ಯಾಯಾಧಿಕರಣ ಸಮಿತಿಯ ತಂಡ ನೇರಸಾ ಗ್ರಾಮದಿಂದ 2 ಕಿಮೀ ಅಂತರದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಬಂಡೂರಿ ಹಳ್ಳದ ಬಳಿ ಇರುವ ಅರಣ್ಯ ಪ್ರದೇಶ, ರಸ್ತೆ, ತಿರುವು ಯೋಜನೆಗೆ ಮೀಸಲಾದ ಉದ್ದೇಶಿತ ಸ್ಥಳವನ್ನು ಪರೀಶೀಲಿಸಿತು.

ಬೆಳಗಾವಿಯಿಂದ ಗುರುವಾರ ಮುಂಜಾನೆ ಹೊರಟ ತಂಡ ನೇರಸಾ ಗ್ರಾಮದ ಮೂಲಕ ಬಂಡೂರಿ ನಾಲೆಯ ಬಳಿ ತೆರಳಿ ಬಂಡೂರಿ ತಿಒರುವು ಯೋಜನೆಯ ಪ್ರಸಕ್ತ ವಸ್ತುಸ್ಥಿತಿಯ ಸಮೀಕ್ಷೆ ನಡೆಸಿತು. ಪಶ್ಚಿಮ ಘಟ್ಟದ ಭೀಮಗಡ ಅರಣ್ಯ ಪ್ರದೇಶದ ಮೂಲಕ ಹರಿಯುವ ಬಂಡೂರಿ ನಾಲಾ ಬಳಿ ತೆರಳಲು ನ್ಯಾಯಾಧಿಕರಣದ ತಂಡ ಹಾಗೂ ನೀರಾವರಿ ನಿಗಮದ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಕಾರಣ ನೇರಸಾ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಪತ್ರಕರ್ತರು ನೇರಸಾ ಗ್ರಾಮದಿಂದ ಮುಂದೆ ಬಂಡೂರಿ ನಾಲಾ ಬಳಿಗೆ ಹೋಗಲು ಪ್ರವೇಶ ನಿರ್ಬಂಧಿಸಲಾಗಿತ್ತು.

ಮಹಾದಾಯಿ ನ್ಯಾಯಾಧಿಕರಣದ ಬಳಿ ತಮ್ಮ ಊರಿಗೂ ಕುಡಿಯುವ ನೀರಿಗಾಗಿ ಅವಕಾಶ ಕಲ್ಪಿಸಬೇಕೆಂಬ ಮನವಿಯನ್ನು ನೀಡಲು ಯೋಚಿಸಿ ಸೂಕ್ತ ಸಿದ್ಧತೆ ಮಾಡಿಕೊಂಡಿದ್ದ ನೇರಸಾ ಹಾಗೂ ಅಶೋಕ ನಗರ ಗ್ರಾಮಸ್ಥರು ನ್ಯಾಯಾಧಿಕರಣದ ತಂಡವನ್ನು ಭೇಟಿ ಮಾಡಲು ಪರದಾಡುವಂತಾಯಿತು. ಬಂಡೂರಿ ನಾಲಾ ಸ್ಥಳ ಪರೀಶೀಲನೆಯ ನಂತರ ನ್ಯಾಯಾಧಿಕರಣದ ತಂಡ ಬಂಡೂರಿ ನಾಲಾ ಸಮೀಪದಲ್ಲಿ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ಶೆಡ್ನಲ್ಲಿ ನೀರಾವರಿ ನಿಗಮ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡಿತು. ನ್ಯಾಯಾಧಿಕರಣ ಸಮಿತಿಯ ಸದಸ್ಯರಾದ ನ್ಯಾ.ವಿನಯ ಮಿತ್ತಲ್, ಪಿ.ಎಸ್ ನಾರಾಯಣ ಸೇರಿದಂತೆ ಕಂದಾಯ, ಅರಣ್ಯ, ಪೊಲೀಸ್ ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಪಟ್ಟಣದ ಲೋಕೋಪಯೋಗಿ ಇಲಾಖೆಯ ನೀರೀಕ್ಷಣಾ ಮಂದಿರದಲ್ಲಿ ಊಟ ಮುಗಿಸಿದ ತಂಡ ಮಧ್ಯಾಹ್ನ ಬೆಳಗಾವಿಯತ್ತ ತನ್ನ ಪ್ರಯಾಣ ಬೆಳೆಸಿತು. ನ್ಯಾಯ ಮಂಡಳಿಯು ಡಿಸೆಂಬರ್ 20 ರಂದು ಸುಪಾ ಜಲಾಶಯ ಹಾಗೂ ಅಂಬಿಕಾ ನಗರ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಲಿದೆ. ಡಿಸೆಂಬರ್ 21 ರಂದು ಮಲಪ್ರಭಾ ಜಲಾಶಯ, ಧಾರವಾಡದ ಜಿಲ್ಲೆಯ ಅಮ್ಮಿನಭಾವಿ ಹಾಗೂ ಮದರಮಡ್ಡಿ ಕೆರೆಗೆ ಭೇಟಿ ನೀಡಿ ಡಿಸೆಂಬರ್ 22 ರಂದು ಬೆಂಗಳೂರಿಗೆ ತೆರಳಲಿದೆ.

loading...

LEAVE A REPLY

Please enter your comment!
Please enter your name here