ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ವಚನಕಾರರು -ಕೆ. ರಾಘವೇಂದ್ರ ಹಿಟ್ನಾಳ್

0
90
loading...

ಕೊಪ್ಪಳ ಜ.21: ನಿಜಯ ಶರಣ ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದ ಕ್ರಾಂತಿಕಾರಿ ಶ್ರೇಷ್ಠ ವಚನಕಾರರಾಗಿದ್ದರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯ ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು.  ಚೌಡಯ್ಯ ಹೆಸರನ್ನೆ ಅಂಕಿತನಾಮಗೊಳಿಸಿ, ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು.  ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ-್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು.  ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು  ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು.  ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ-್ಣತೆ ತುಂಬಿಕೊಂಡಿದೆ.  ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸಮಾನತೆಗೆ ಶ್ರಮಿಸಿದವರು ಅಂಬಿಗರ ಚೌಡಯ್ಯ ಅವರು.  ಗಂಗಾಮತ ಸಮುದಾಯ ಈಗಲೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ, ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು.  ಕೊಪ್ಪಳದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

ಸಮಾರಂಭದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ, ಅಂಬಿಗರ ಚೌಡಯ್ಯ ಅವರು ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಶರಣರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸಮಾಜದಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಚಿಂತನೆಗಳು ನಡೆಯುತ್ತಿದ್ದವು.  ಅದೇ ರೀತಿ ಅನುಭವ ಮಂಟಪದ ಮಾದರಿಯಲ್ಲಿಯೇ ಈಗ ಪ್ರತಿ ಜಿಲ್ಲೆಗೊಂದು ಚಿಂತನ ಮಂಟಪಗಳು ಸ್ಥಾಪನೆ ಆಗಬೇಕಿದೆ.  ಕುಲ, ಕುಲವೆಂದು ಹೊಡೆದಾಡುವಿರೇಕೆ ಎಂದು ಶತಮಾನಗಳ ಹಿಂದೆಯೇ ದಾಸರು, ಶರಣರು ಜಾಗೃತಿ ಮೂಡಿಸಿದ್ದರೂ, ಸಹ ಈಗಲೂ ರಾಜಕೀಯ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಾತೀಯತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದು ಶರಣರ, ದಾಸರ ತತ್ವಗಳಿಗೆ ಬೆಲೆ ಇಲ್ಲದಂತಾಗಿರುವುದು ವಿಪರ್ಯಾಸವಾಗಿದೆ.  ಸರ್ಕಾರಿ ಹುದ್ದೆಗಳನ್ನು ಗುರಿಯಾಗಿಸಿಕೊಂಡು ಕಲಿಸುವಂತಹ ಶಿಕ್ಷಣ ನಮ್ಮ ಸಮಾಜಕ್ಕೆ ಅಗತ್ಯವಿಲ್ಲ.  ಮಾನವೀಯ ಮೌಲ್ಯಗಳನ್ನು ಕಲಿಸುವಂತಹ ಶಿಕ್ಷಣ ಅಗತ್ಯವಾಗಿದೆ.  ಶಿಕ್ಷಣವಂತರು, ಬುದ್ದಿಜೀವಿಗಳೇ ಜಾತಿವಾದಿಗಳಾಗಿ ಬೆಳೆಯುತ್ತಿರುವುದು ಇಂದಿನ ಆತಂಕಕಾರಿ ಸಂಗತಿಗಳಲ್ಲೊಂದಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಗಂಗಾವತಿಯ ಸಿ.ಹೆಚ್. ನಾರಿನಾಳ ಅವರು, ಅಂಬಿಗರ ಚೌಡಯ್ಯ ಅವರು ಮಾನವ ಕಲ್ಯಾಣದ ಹರಿಕಾರರಾಗಿದ್ದರು.  12 ನೇ ಶತಮಾನ ಎಂಬುದು, ಇಡೀ ವಿಶ್ವವೇ ಕಂಡ ಅದ್ಬುತ ಶತಮಾನ.  ಮೌಢ್ಯತೆಯಿಂದ ಕಂಗಾಲಾಗಿದ್ದ ಸಮಾಜಕ್ಕೆ ಹೊಸ ಸಂಚಲನ ಮೂಡಿಸಿದ ಬಹುತೇಕ ವಚನಕಾರರು ಇದೇ ಶತಮಾನದಲ್ಲಿ ಬಂದವರು.  ಈಗಿನ ಅಹಿಂದ ಆಗಿನ ಅನುಭವ ಮಂಟಪದಲ್ಲಿಯೇ ರೂಪುಗೊಂಡಿತ್ತು.  ಯಾವುದೇ ವ್ಯಕ್ತಿ ತನ್ನ ಸದ್ಗುಣಗಳಿಂದ ದೊಡ್ಡವನಾಗುತ್ತಾನೆಯೇ ಹೊರತು ಜಾತಿಯಿಂದಲ್ಲ ಎಂದರು.

ತಾಲೂಕಾ ಪಂಚಾಯತಿ ಅಧ್ಯಕ್ಷ ಮುದೇಗೌಡ ಪಾಟೀಲ ಅವರು ಸಮಾರಂಭ ಕುರಿತು ಮಾತನಾಡಿದರು.  ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಗಣ್ಯರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ಮಲ್ಲಪ್ಪ ಕವಲೂರ, ಪೂಜಾ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಸಹಾಯಕ ಆಯುಕ್ತ ಮಂಜುನಾಥ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿವಿಧ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಕಂಪ್ಲಿಯ ಮೆಹಬೂಬ್ ಸುಬಾನಿ ನೇತೃತ್ವದ ತಾಷರಂಡೋಲು, ಮಲಪನಗುಡಿಯ ಪ್ರಕಾಶ್ ಮುಖಂಡತ್ವದ ಡೊಳ್ಳು ಕುಣಿತ, ಕೊಪ್ಪಳದ ಬಸವರಾಜ ವಿಭೂತಿ ತಂಡದಿಂದ ಹಗಲುವೇಷ, ರಾಮಸಾಗರದ ರುದ್ರಪ್ಪ ತಂಡದಿಂದ ಕಹಳೆವಾದನ, ಹೊಸಪೇಟೆಯ ಯೂಸುಫ್ ತಂಡದಿಂದ ಮರಗಾಲು ಕುಣಿತ, ಗೊಂಡಬಾಳದ ಬಸವರಾಜ ಸ್ವಾಮಿ ತಂಡದಿಂದ ಬ್ಯಾಂಜ್ ಮೇಳ, ರಾಯಚೂರಿನ ಗದ್ದೆಪ್ಪ ತಂಡದಿಂದ ಕಣಿ ಹಲಗೆ ವಾದನ, ಕೋನಸಾಗರದ ಮಾಬು ತಂಡದಿಂದ ಮೋಜಿನ ಗೊಂಬೆಗಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.

loading...

LEAVE A REPLY

Please enter your comment!
Please enter your name here