ಆಘಾತ

0
31
loading...

ಕನ್ನಡಮ್ಮ ದಿನ ಪತ್ರಿಕೆಯ ಸಂಪಾದಕರು ಹಾಗೂ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷರಾದ ಶ್ರೀಮತಿ ಉಮಾದೇವಿ ಟೋಪಣ್ಣವರ ಗುರುವಾರ ರಾತ್ರಿ ವಿಧಿವಶರಾಗಿರುವದು ಕನ್ನಡಮ್ಮ ದಿನಪತ್ರಿಕೆಗೆ, ಸಿಬ್ಬಂದಿಗೆ ಹಾಗೂ ಬೆಳಗಾವಿಯ ಕನ್ನಡ ಹೋರಾಟಗಾರರ ಸಮುದಾಯಕ್ಕೆ ವಜ್ರಾಘಾತವನ್ನು ಉಂಟು ಮಾಡಿದೆ. ಪತಿ ಮಹಾದೇವ ಅವರ ನಿಧನದ ನಂತರ ಕಳೆದ 25 ವರ್ಷಗಳಿಂದ ಕನ್ನಡಮ್ಮ ಪತ್ರಿಕೆಯ ಸಾರಥ್ಯವನ್ನು ವಹಿಸಿಕೊಂಡು ಅದನ್ನು ರಾಜ್ಯ ಮಟ್ಟದ ಪತ್ರಿಕೆಯನ್ನಾಗಿ ಬೆಳೆಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ನಾಲ್ಕು ಪುಟ ಪತ್ರಿಕೆಯನ್ನು 12ಕ್ಕೆ ಹೆಚ್ಚಿಸಿ ನಾಲ್ಕು ಪುಟಗಳ ವರ್ಣರಂಜಿತ ಸುದ್ದಿಗಳನ್ನು ನೀಡುತ್ತ ಬಂದಿದ್ದರು. ಪತ್ರಿಕೆಯ ನಿರ್ವಹಣೆಯ ಜೊತೆಗೆ ಕನ್ನಡ ಚಳುವಳಿಗಾರರ ಪಡೆಯನ್ನು ನಿರ್ಮಿಸಿ ಕನ್ನಡಕ್ಕೆ ಆಪತ್ತು ಬಂದಾಗ ಸಿಂಹಿನಿಯಂತೆ ಕೆರಳಿ ನಿಂತು ಸತತ ಹೋರಾಟವನ್ನು ಮಾಡುತ್ತಾ ಬಂದಿದ್ದರು. ಅವರು ಮಾಡಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ.
ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುದ್ರಗೊಳಿಸಿ ಮನೆ ನಿರ್ಮಿಸಿ ಎಲ್ಲ ಮಕ್ಕಳ ಮದುವೆ ಮಾಡಿದ್ದರು. ಸಿಬ್ಬಂದಿಯನ್ನು ತಮ್ಮ ಮಕ್ಕಳಂತೆ ಭಾವಿಸಿಕೊಂಡು ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾ ಬಂದಿದ್ದರು. ಸಿಬ್ಬಂದಿಗಳ ಮನೆಯಲ್ಲಿ ಯಾವುದೇ ಶುಭ ಸಮಾರಂಭ ಇದ್ದರೂ ಸಹ ಅದರಲ್ಲಿ ಪಾಲ್ಗೊಳುವ ಪರಿಪಾಠವನ್ನು ಹಾಕಿಕೊಂಡಿದ್ದರು. ಈ ರೀತಿಯಾಗಿ ಅವರು ಜನ ಮನದಲ್ಲಿ ತಮ್ಮದೇಯಾದ ವಿಶಿಷ್ಟ ರೂಪವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬ ಗಾದೆ ಮಾತನ್ನು ತಮ್ಮ ನಡೆ ನುಡಿಯಿಂದ ಅವರು ಸಾಬೀತುಪಡಿಸಿದ್ದರು. 1997 ರಲ್ಲಿ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಬೆಳಗಾವಿ ಜಿಲ್ಲೆಯನ್ನು ವಿಜಿಸಲು ಮುಂದಾದಾಗ ಅದನ್ನು ವಿರೋಧಿಸಿ ದಿಟ್ಟ ಹೋರಾಟ ಮಾಡಿ ಸರಕಾರ ಆ ಪ್ರಸ್ತಾವನೆ ಹಿಂದಕ್ಕೆ ಪಡೆಯುವಂತೆ ಮಾಡಿದ ಸಂಪೂರ್ಣ ಕೀರ್ತಿ ಉಮಾದೇವಿ ಟೋಪಣ್ಣವರ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸುತ್ತಿದ್ದ ಅವರು ಕನ್ನಡ ಸಮಾರಂಗಳಲ್ಲಿ ಭಾಗವಹಿಸುತ್ತಿದ್ದರು. ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುವದರ ಜೊತೆಗೆ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪವನ್ನು ನಾವು ಮಾಡುವದರ ಜೊತೆಗೆ ಅವರ ದಿವ್ಯ ಚೇತನಕ್ಕೆ ಸಾವಿರ ಸಾವಿರ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ.

loading...

LEAVE A REPLY

Please enter your comment!
Please enter your name here