ಕರುಣಾಮಯಿ ಉಮಾದೇವಿ ಟೋಪಣ್ಣವರ

0
17
loading...

ಮಲ್ಲಿಖಾರ್ಜುನ ಬಟಕುರ್ಕಿ
ನಾನು ಜಲಮಂಡಳಿಯಲ್ಲಿ ಉದ್ಯೋಗ ಮಾಡುತ್ತಿರುವಾಗ ನನ್ನ ವೇತನ ಮನೆಯ ವೆಚ್ಚಕ್ಕೆ ಸಾಲುತ್ತಿರಲಿಲ್ಲ ಹೀಗಾಗಿ ಮತ್ತೊಂದು ಉಪ ಉದ್ಯೋಗವನ್ನು ಮಾಡಬೇಕೆಂದು ಅನೇಕ ಕಡೆಗೆ ಪ್ರಯತ್ನ ಮಾಡಿದೆ. ಆಗ 1985 ರಲ್ಲಿ ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾದ ಮಹಾದೇವಪ್ಪ ಟೋಪಣ್ಣವರ ಅವರು ನನಗೆ ಅಲ್ಪಾವಧಿ ಉಪ ಸಂಪಾದಕ ಹುದ್ದೆಯನ್ನು ನೀಡಿದರು. 5 ವರ್ಷ ಕಾರ್ಯ ಮಾಡಿದ ಮೇಲೆ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದಾಗ ಅವರ ಪತ್ನಿ ಉಮಾದೇವಿ ಟೋಪಣ್ಣವರ ಸಂಪಾದಕರಾಗಿ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಅಂದಿನಿಂದ ಅವರ ಮತ್ತು ನನ್ನ ನಡುವಿನ ಸಂಭಂಧ ಇಂದಿನವರೆಗೂ ಗಾಢವಾಗಿ ಬೆಳೆಯುತ್ತಲೇ ಬಂದಿತು. ನಾನು ನನ್ನ ಜಲಮಂಡಳಿಯ ಕಛೇರಿಯ ಕಾರ್ಯ ಮುಗಿಸಿ ಸಂಜೆ 6ಗಂಟೆಗೆ ಕನ್ನಡಮ್ಮ ಕಾರ್ಯಾಲಯಕ್ಕೆ ಬರುತ್ತಿದ್ದೆ ಆದರೂ ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿದ್ದ ಉಮಾದೇವಿ ಅವರು ಸಂಪಾದಕಿಯ ವಿಭಾಗದ ಉಸ್ತುವಾರಿಯನ್ನು ನನಗೆ ವಹಿಸಿಕೊಟ್ಟಿದ್ದರು. ಸಂಪಾದಕಿಯ ಮುಖ ಪುಟಗಳ ಜವಾಬ್ದಾರಿಯನ್ನು ನೀಡಿದ್ದರು ಅಷ್ಟೇ ಅಲ್ಲ ನೀವು ಜಲಮಂಡಳಿಯ ಉದ್ಯೋಗ ಬಿಟ್ಟು ಪತ್ರಿಕೆಯ ಕೆಲಸಕ್ಕೆ ಸಂಪೂರ್ಣವಾಗಿ ಬಂದರೆ ನಿಮಗೆ ಜಲಮಂಡಳಿಯಲ್ಲಿ ನೀಡುವ ವೇತನವನ್ನೆ ನೀಡುತ್ತೇನೆ ಎಂದು ಹೇಳಿದ್ದರು
ಅಷ್ಟೊಂದು ವಿಶ್ವಾಸವನ್ನು ಪ್ರೀತಿಯನ್ನು ನನ್ನ ಮೇಲೆ ಅವರು ತೋರಿಸುತ್ತಲೇ ಬಂದಿದ್ದರು ಅನೇಕ ಕಾರ್ಯಾಲಯಗಳಿಂದ ನಾನು ಪತ್ರಿಕೆಯ ಕಾರ್ಯವನ್ನು ಬಿಟ್ಟು ಬೇರೆ ಕಡೆಗೆ ಕೆಲಸಕ್ಕೆ ಹೋದರೂ ಪ್ರತಿಭಾರಿ ಮತ್ತೆ ನನ್ನನ್ನು ಕರೆದು ನನಗೆ ಕೆಲಸ ಕೊಡುವ ಕಾರ್ಯವನ್ನು ಮಾಡಿದ್ದರು. ಮಹಾದೇವಪ್ಪ ಟೋಪಣ್ಣವರ ನಿಧನಹೊಂದಿದಾಗ ಒಬ್ಬ ಮಗಳ ಮದುವೆ ಮಾತ್ರ ಆಗಿತ್ತು ಉಳಿದ ಎಲ್ಲ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು ವಾಸಕ್ಕೆ ಸ್ವಂತ ಮನೆ ಇರಲಿಲ್ಲ ಪತ್ರಿಕೆಯ ಆಡಳಿತದ ಅನುಭವವೂ ಉಮಾದೇವಿ ಅವರಿಗೆ ಇರಲಿಲ್ಲ ಆದ್ದರಿಂದ ಅನೇಕ ಸಂಘ ಸಂಸ್ಥೆಯವರು ಪತ್ರಿಕೆಯನ್ನು ನಮಗೆ ನಡೆಸಲು ಕೊಡಿ ನಾವು ನಿಮಗೆ ಹಣ ಕೊಡುತ್ತೆವೆ. ಎಂದು ಕೇಳಿದರೂ ಸಹ ಉಮಾದೇವಿ ಅವರು ತಾವೇ ಪತ್ರಿಕ ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಂಡರು ಪತ್ರಿಕೆಯ ನಿರ್ವಹಣೆ ಜೊತೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿದ್ದರು ಮನಗೆದ್ದು ಮಾರುಗೆದೆಯಬೇಕು ಎಂಬ ಮಾತಿನಂತೆ ತಮ್ಮ ವಾಸಕ್ಕೆ ಭವ್ಯ ಮನೆಯನ್ನು ನಿರ್ಮಿಸಿದ ಅವರು ಎಲ್ಲ ಮಕ್ಕಳ ವಿವಾಹವನ್ನು ಅದ್ದೂರಿಯಾಗಿ ಮಾಡಿದ್ದರು ಅವರ ಧೈರ್ಯ ಕಾರ್ಯ ನಿಷ್ಠೆ ಕಷ್ಟಗಳನ್ನು ಎದುರಿಸುವ ರೀತಿ ನನ್ನ ಜೀವನದಲ್ಲಿ ಬಹು ದೊಡ್ಡ ಪ್ರೇರಣೆಯಾಗಿದೆ. ಅವರು ಸಿಬ್ಬಂದಿಯ ಕಷ್ಟ ಸುಖದಲ್ಲಿ ಸದಾಪಾಲುಗಾರರಾಗುತ್ತಿದ್ದರು ಸಿಬ್ಬಂದಿಯ ಮನೆಗಳಲ್ಲಿ ಸಮಾರಂಭಗಳಿದ್ದರೆ ತಪ್ಪದೇ ಭಾಗವಹಿಸುವ ಕಾರ್ಯವನ್ನು ಮಾಡುತ್ತಿದ್ದರು ಅಲ್ಲದೇ ಆ ಸಮಯದಲ್ಲಿ ಅವರಿಗೆ ವಿಶೇಷ ಆರ್ಥಿಕ ನೆರವನ್ನು ನೀಡುತ್ತಿದ್ದರು. 1997ರಲ್ಲಿ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ ಅವರು ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಲು ಮುಂದಾದಾಗ ಉಮಾದೇವಿ ಅದರ ವಿರುದ್ದ ಕೆರಳಿ ಕಿತ್ತೂರ ರಾಣಿ ಚನ್ನಮ್ಮನಂತೆ ಹೋರಾಟ ಮಾಡಿದ್ದರು ನಾನು ಆ ಸಮಯದಲ್ಲಿ ಚಿಕ್ಕೋಡಿ ಮತ್ತು ಗೋಕಾಕ ಜನರಿಗೆ ಚುಚ್ಚುವ ರೀತಿಯಲ್ಲಿ ಸಂಪಾದಕೀಯ ಬರೆದಾಗ ಗೋಕಾಕ ಮತ್ತು ಚಿಕ್ಕೋಡಿಯಲ್ಲಿ ನಮ್ಮ ಪತ್ರಿಕೆಯ ಬಂಡಲಗಳನ್ನು ಸುಟ್ಟು ಹಾಕಿದರು. ಆದರೆ ಉಮಾದೇವಿ ಟೋಪಣ್ಣವರ ನನಗೆ ಧೈರ್ಯ ತುಂಬಿ ನನ್ನ ಪೇಪರ ಸುಟ್ಟರೂ ಚಿಂತೆಯಿಲ್ಲ ನಿಮ್ಮ ಬರಹ ನಿಲ್ಲಿಸಬೇಡಿ ಎಂದು ಹೇಳಿದ್ದು ನ್ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ. ಈ ರೀತಿಯಾಗಿ ಅವರ ಮತ್ತು ನನ್ನ ಸಂಬಂಧ ಇಂದಿನವರೆಗೂ ಬೆಳೆಯುತ್ತಲೇ ಬಂದಿತು. ಇತ್ತೀಚಿನ ದಿನಗಳಲ್ಲಿ ಅವರು ಬಹಳ ಕಡಿಮೆ ಭಾರಿ ಕಛೇರಿಗೆ ಬರುತ್ತಿದ್ದರು. ಬಂದಾಗ ಅವರು ತಪ್ಪದೇ ನ್ನನ್ನ ಬಳಿ ಬಂದು ಮಾತನಾಡಿಸಿ ಹೋಗುತ್ತಿದ್ದರು ಯಾವುದೇ ಕಾರ್ಯನಿಮಿತ್ಯ ನಾನು ಅವರ ಮನೆಗೆ ಹೋದರೆ ಉಪಚರಿಸಿ ಕಳುಹಿಸುತ್ತಿದ್ದರು ಈ ರೀತಿ ಅವರ ಮತ್ತು ನನ್ನ ಸಂಬಂಧ ಸ್ನೇಹ ಮಯವಾಗಿತ್ತು ಈಗ ಅವರು ನಮ್ಮಿಂದ ದೂರವಾಗಿದ್ದರು ಅವರ ನೆನೆಪು ಮಾತ್ರ ನ್ನನ್ನ ಹೃದಯದಲ್ಲಿ ನಿರಂತರವಾಗಿ ಉಳಿಯುತ್ತದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಹಾಗೂ ಅವರು ಹಾಕಿಕೊಟ್ಟ ಪ್ರೇರಣೆ ಕನ್ನಡಮ್ಮ ಬಳಗಕ್ಕೆ ನಿರಂತರವಾಗಿ ಬೆನ್ನೆಲುಬುವಾಗಿ ನಿಲ್ಲಲಿ ಎಂದು ಹಾರೈಸುತ್ತ ಅವರಿಗೆ ಸಾವಿರ ಸಾವಿರ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇನೆ.

loading...

LEAVE A REPLY

Please enter your comment!
Please enter your name here