‘ಮಾನವೀಯ ಮೌಲ್ಯಗಳು, ಸಮಾಜಿಕ ಕಳಕಳಿ ಬಿಂಬಿಸುವ ಕೃತಿಗಳು ಹೆಚ್ಚೆಚ್ಚು ಪ್ರಕಟವಾಗಲಿ’ -ಡಾ. ಬಿ ಎಸ್ ಜಂಬಗಿ

0
52
loading...

ಬಳ್ಳಾರಿ, ಅ. 1: ಸಮಾಜದಲ್ಲಿ ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯಗಳ ಬಲವರ್ಧನೆಗೆ ಸಾಹಿತಿಗಳು ಒತ್ತುನೀಡುವ ಅಗತ್ಯವಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ (ರಾಜ್ಯವಲಯ) ಯ ಜಂಟಿ ನಿರ್ದೇಶಕ ಡಾ. ಬಿ. ಎಸ್. ಜಂಬಗಿ ಅವರು ತಿಳಿಸಿದರು.
ನಗರದ ಸಂಸ್ಕøತಿ ಪ್ರಕಾಶನ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ, ಬಳ್ಳಾರಿ ಜಿಲ್ಲಾ ಘಟಕ ಬುಧವಾರ ಸ್ಥಳೀಯ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ  ಪಶುವೈದ್ಯಾಧಿಕಾರಿ, ಲೇಖಕ ಡಾ. ಜೆ ಎಸ್ ಅಶ್ವತ್ಥಕುಮಾರ್ ಅವರ’ ಅಶ್ವತ್ಥಮರ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳು, ಸಮಾಜಿಕ ಕಳಕಳಿ ಬಿಂಬಿಸುವ ಕೃತಿಗಳು ಹೆಚ್ಚೆಚ್ಚು ಪ್ರಕಟವಾದರೆ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಆದರ್ಶ, ಆತ್ಮೀಯತೆ ವಾತಾವರಣ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಕೃತಿ ಪರಿಚಯಿಸಿದ ಕರ್ನಾಟಕ ಲೇಖಕಿಯರ ಸಂಘದ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷೆ, ಆಂಗ್ಲ ಉಪನ್ಯಾಸಕಿ ಸುಧಾ ಚಿದಾನಂದ ಗೌಡ ಅವರು, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಕನ್ನಡಿಗರಲ್ಲಿ ಬೆಳೆಯಬೇಕು. ಹೊಸಪುಸ್ತಕಗಳು ಮಾರುಕಟ್ಟೆಗೆ ಬಂದಾಗ ಖರೀದಿಸಿ ತಾಳ್ಮೆಯಿಂದ ಓದಿ ಅರ್ಥೈಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಫೇಸ್ ಬುಕ್, ವ್ಯಾಟ್ಸ್ ಅಪ್ ಭರಾಟೆಯಲ್ಲಿ ಸಾಹಿತಿಗಳಿಗೆ ಓದುಗರನ್ನು ತಮ್ಮ ಕೃತಿಗಳತ್ತ ಸೆಳೆಯುವ ಕಾರ್ಯ ಸವಾಲಿನಿಂದ ಕೂಡಿರುತ್ತದೆ. ಈ ಹಿನ್ನಲೆಯಲ್ಲಿ ಡಾ. ಅಶ್ವತ್ಥ ಕುಮಾರ್ ಅವರು ತಮ್ಮ ಕೃತಿಯಲ್ಲಿ ಭಾವನಾತ್ಮಕ ವಿಚಾರಗಳು, ರೋಚಕ ಪ್ರಸಂಗಗಳು ಹಾಗೂ ಮಾನವೀಯ ಗುಣಗಳ ಬಗ್ಗೆ ಹೆಚ್ಚು ಒತ್ತು ನೀಡುವ ಮೂಲಕ ಗಮನಸೆಳೆಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಕೆ ಎಲ್ ಕುಮಾರ್ ಅವರು ಮೂಕ ಪ್ರಾಣಿಗಳ ಸೇವೆ ಮಾಡುವ ಅವಕಾಶವನ್ನು ದೇವರು ನಮಗೆ ಕರುಣಿಸಿರುವುದು ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿದ್ದ ಪಶುಪಾಲನಾ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕರುಗಳಾದ  ಡಾ. ಕೆ ಬಿ ಸೋಮಶೇಖರ್, ಧಾರವಾಡದ ಡಾ. ಪ್ರಕಾಶ ಜೋಷಿ, ಡಾ. ಡಿ ಕೆ ಕನಕಾಪುರ, ಕುರಿಕುಪ್ಪೆಯ  ಡಾ. ಮಾದಪ್ಪ,  ಕೊಪ್ಪಳದ ಡಾ. ಭಾಸ್ಕರ ನಾಯ್ಕ, ರಾಯಚೂರಿನ ಡಾ. ಸುಂದರರಾಜ್,  ಡಾ. ರಾಮಚಂದ್ರಶೆಟ್ಟಿ ಲೇಖಕ ಡಾ. ಜೆ ಎಸ್ ಅಶ್ವತ್ಥಕುಮಾರ್, ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದ ಪಶುವೈದ್ಯಾಧಿಕಾರಿ ಡಾ. ಟಿ ಶಶಿಧರ್ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಸುಧಾ ಚಿದಾನಂದ ಗೌಡ, ಜಂಟಿ ನಿರ್ದೇಶಕ ಡಾ. ಬಿ ಎಸ್ ಜಂಬಗಿ, ಲೇಖಕ ಡಾ. ಜೆ ಎಸ್ ಅಶ್ವತ್ಥಕುಮಾರ್ ಅವರನ್ನು ಪ್ರಕಾಶನ ಹಾಗೂ ಪಶುವೈದ್ಯಕೀಯ ಸಂಘದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.
ಪ್ರಕಾಶಕ ಸಿ. ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶು ವೈದ್ಯ ಡಾ. ಬಸವರಾಜ ಬೆಣ್ಣಿ ಅವರು ನಿರೂಪಿಸಿದರು. ಡಾ. ಟಿ ಶಶಿಧರ್ ವಂದಿಸಿದರು.

loading...

LEAVE A REPLY

Please enter your comment!
Please enter your name here