ಎನ್ಎಸ್ಎಸ್ನ ವಿಶೇಷ ಶಿಬಿರ ಮರಿಯಮ್ಮನಹಳ್ಳಿ

0
20
loading...

ಅ. 13: ಸ್ವಚ್ಛ ಭಾರತದ ಅಭಿಯಾನ ಅಷ್ಟು ಸುಲಭದ ಮಾತಲ್ಲ, ಇದನ್ನು ಕೇವಲ ರಾಜಕಾರಣಿಗಳು, ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ ಬದಲಾಗಿ ವಿದ್ಯಾರ್ಥಿಗಳು ಪಣತೊಟ್ಟರೇ ಮಾತ್ರ ಸಾಧ್ಯ ಎಂದು ಹ.ಬೊ.ಹಳ್ಳಿ ಶಾಸಕ ಭೀಮನಾಯ್ಕ್ ನುಡಿದರು. ಅವರು ಮರಿಯಮ್ಮನಹಳ್ಳಿಯ ಪ್ರಿಯದರ್ಶಿನಿ ಸ್ವತಂತ್ರ ಪ.ಪೂ ಕಾಲೇಜಿನ ಎನ್ಎಸ್ಎಸ್ನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಧ್ವಜಾರೋಹಣೆಯನ್ನು ಸಮೀಪದ ವೆಂಕಟಾಪುರ ಗ್ರಾಮದ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ನೆರವೇರಿಸಿ ಮಾತನಾಡಿದರು. ಗ್ರಾಮದ ಸುಭಿಕ್ಷೆ ಗಾಂಧೀಜಿಯವರ ಕನಸಾಗಿತ್ತು. ಗ್ರಾಮಗಳು ಉದ್ದಾರವಾದಾಗ ಮಾತ್ರ ಅವರ ರಾಮರಾಜ್ಯದ ಕನಸು ನನಸುಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಪರಿಸರ ನಾಶವಾಗುತ್ತಿದೆ. ಜೊತೆಗೆ ಅರಣ್ಯ ನಾಶವೂ ಅಷ್ಟೇ ವೇಗವಾಗಿ ನಡೆಯುತ್ತಿರುವುದರಿಂದ ಶುದ್ಧ ಗಾಳಿ ನೀರು ದೊರೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೇ ಎನ್ಎನ್ಎಸ್ ಸ್ವಯಂಸೇವಕರುಗಳಿಗೆ ಪರಿಸರ ಕಾಳಜಿ ಬೆಳೆಸಿಕೊಳ್ಳುವಂತೆ ಹಾಗೂ ಶಿಬಿರಕ್ಕೆ ಗ್ರಾಮದ ಜನತೆ ಸಹಕರಿಸುವಂತೆ ಸಲಹೆ ಮಾಡಿದರು. ಮತ್ತೋರ್ವ ಅತಿಥಿ ಕುರಿ ಶಿವಮೂರ್ತಿ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಮೂಲಾಧಾರ ಈ ರಾಷ್ಟ್ರೀಯ ಸೇವಾ ಯೋಜನೆಯಾಗಿದ್ದು, ಇದರ ಮೂಲಕ ಶಿಬಿರಾರ್ಥಿಗಳು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುವಂತೆ ತಿಳಿಸಿದರು. ಅಲ್ಲದೇ ಎನ್ಎಸ್ಎಸ್ನಿಂದ ಮಾತ್ರ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಶಿಬಿರದಲ್ಲಿ ದಿವ್ಯಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಮರಿಯಮ್ಮನಹಳ್ಳಿಯ ಶ್ರೀ ಗುರುಪಾದ ಧೇವರ ಮಠದ ಷ.ಬ್ರ.ಶ್ರೀಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡುತ್ತಾ, ಭವ್ಯರಾಷ್ಟ್ರ ನಿರ್ಮಾಣಕ್ಕೆ ಯುವಕರ ಜವಾಬ್ದಾರಿ ಬಹಳ ಪ್ರಮುಖವಾದುದು. ಯುವಕರು ಧರ್ಮಕ್ಕಿಂತ ಮುಖ್ಯವಾಗಿ ದೇಶವನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿದೆ. ಅಲ್ಲದೇ ಬಸವಣ್ಣನವರ ವಚನದಂತೆ ನುಡಿದಂತೆ ನಡೆದಾಗ ಮಾತ್ರ ಉತ್ತಮ ವ್ಯಕ್ತಿತ್ವ್ವದ ಜೊತೆಗೆ ಸದೃಢ ರಾಷ್ಟ್ರವನ್ನು ಕಟ್ಟಬಹುದು ಎಂದು ಸಲಹೆ ನೀಡಿದರು. ನಂತರ ಎಸ್ಎಸ್ಎನ್ಎ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಸತ್ಯನಾರಾಯಣ ಹಾಗೂ ಕಾಲೇಜಿನ ಪ್ರಾಚಾರ್ಯ ಎಂ ಅಶೋಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಶಿಬಿರಾಧಿಕಾರಿ ಪಿ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಎನ್ಎಸ್ಎಸ್ನ ಧ್ಯೇಯೋದ್ಧೇಶಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ಎನ್ಎಸ್ಎಸ್ ಶಿಬಿರಾರ್ಥಿಗಳು ಪ್ರಾರ್ಥಿಸಿದರೆ, ಉಪನ್ಯಾಸಕ ಅಕ್ಕಿ ಮೃತ್ಯುಂಜಯ ನಿರೂಪಿಸಿದರು. ಉಪನ್ಯಾಸಕ ಎಸ್ ನವೀನ್ ಪ್ರತಿಜ್ಞಾವಿಧಿ ಬೋಧಿಸಿ, ಉಪನ್ಯಾಸಕ ಪ್ರಶಾಂತ್ ನೀರಗಂಟಿ ವಂದಿಸಿದರು. ಈ ಸಂದರ್ಭದಲ್ಲಿ ಹಂಪಿನಕಟ್ಟಿ ವೆಂಕಟಾಪುರದ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸೇವ್ಯಾನಾಯ್ಕ, ಡಣಾಪುರ ಗ್ರಾ.ಪಂನ ಉಪಾಧ್ಯಕ್ಷ ಕಡ್ಡಿ ಹನುಮಂತಪ್ಪ, ಮುಖಂಡರಾದ ವೆಂಕಟೇಶಪ್ಪ, ಗ್ರಾ.ಪಂ. ಸದಸ್ಯರಾದ ಶಿವಮೂರ್ತೆಪ್ಪ, ಎಸ್ಡಿಎಂಸಿ ಅಧ್ಯಕ್ಷ ಎಲ್ ಗಾಳೆಪ್ಪ, ಉಪಾಧ್ಯಕ್ಷ ನಾಗರಾಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here