ನಿವೇಶನಗಳ ಬೆಲೆ ನಿಯಂತ್ರಿಸಲು ವಸತಿ ಸಹಕಾರಗಳು ಒಂದಾಗಬೇಕು : ಸಿಎಂ

0
29
loading...

ಬೆಂಗಳೂರು, ನ.23- ವಸತಿ ಸಹಕಾರ ಸಂಘಗಳು ಒಟ್ಟಾದರೆ ನಗರ ಪ್ರದೇಶದಲ್ಲಿ ತೀವ್ರ ಗತಿಯಲ್ಲಿ ಏರುತ್ತಿರುವ ನಿವೇಶನಗಳ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜರಾಜೇಶ್ವರಿನಗರದ ದಿ ಐಡಿಯಲ್ ಹೋಂ ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್‍ನ ಸುರ್ವಣ ಮಹೋತ್ಸವ ಹಾಗೂ ಸುವರ್ಣಭವನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಂತಹ ಬೆಳೆಯುತ್ತಿರುವ ನಗರಗಳಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ ಸಮಸ್ಯೆಗಳು ಬಗೆಹರಿಸಲಾಗದಷ್ಟು ಬಿಕ್ಕಟ್ಟಿಗೆ ತಲುಪಿವೆ. ನಿವೇಶನಗಳ ಬೆಲೆ ಬಡವರ ಕೈಗೆ ಎಟಕದಂತೆ ಹೆಚ್ಚಾಗಿದೆ.
ಎಲ್ಲರಿಗೂ ತಾವು ಒಂದು ಮನೆ ಕಟ್ಟಿಸಬೇಕು ಎಂಬ ಗುರಿ ಇದ್ದೇ ಇರುತ್ತದೆ. ಆದರೆ ಈಗಿನ ನಿವೇಶನ ಬೆಲೆ ನೋಡಿದರೆ ಜನ ಸಾಮಾನ್ಯರು ನಿವೇಶನ ಕೊಳ್ಳಲು ಸಾಧ್ಯವಿಲ್ಲ, ಮನೆ ಕಟ್ಟಿಸಲು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ ಎಂದರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾದ ದಿನದಿಂದ ಈವರೆಗೆ ಸುಮಾರು 1.20 ಲಕ್ಷ ನಿವೇಶನಗಳನ್ನು ನೀಡಿದೆ. ಆದರೆ ರಾಜ್ಯಾದ್ಯಂತ ನಗರ ಪ್ರದೇಶದಲ್ಲಿರುವ ಸುಮಾರು 2500 ಗೃಹ ನಿರ್ಮಾಣ ಸಹಕಾರ ಸಂಘಗಳು ಸುಮಾರು 2.5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಿವೆ. ಇನ್ನಾರು ತಿಂಗಳಲ್ಲಿ ಇನ್ನೂ 50 ಸಾವಿರ ನಿವೇಶನ ಹಂಚಿಕೆ ಮಾಡುವ ಸಿದ್ದತೆ ನಡೆಸಿವೆ. ಸರ್ಕಾರದಿಂದ ಎಲ್ಲರಿಗೂ ನಿವೇಶನ ನೀಡಲು ಕಷ್ಟ. ಹೃಹ ನಿರ್ಮಾಣ ಸಹಕಾರ ಸಂಘಗಳು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ. ಎಲ್ಲಾ ಸಂಘಗಳು ಒಟ್ಟಾಗಿ ಕೆಲಸ ಮಾಡಿದರೆ ಕಡಿಮೆ ದರದಲ್ಲಿ ಭೂಮಿ ಪಡೆದು ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ರಿಯಾಯಿತಿ ಬೆಲೆಗೆ ಹಂಚಿಕೆ ಮಾಡಬಹುದು ಎಂದು ವಿವರಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವತಿಯಿಂದ ಬೆಂಗಳೂರು ನಗರ ವಾಸಿಗಳಿಗೆ ಈ ವರ್ಷ 12,610 ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ 24 ಯೋಜನೆಗಳನ್ನು ರೂಪಿಸಲಾಗಿದ್ದು, ಐದು ಯೋಜನೆಗಳು ಪೂರ್ಣಗೊಂಡಿವೆ ಎಂದರು.
ಹಿಂದಿನ ಸರ್ಕಾರ 30 ಸಾವಿರ ನಿವೇಶನ ಹಂಚಿಕೆ ಮಾಡುವುದಾಗಿ ಹೇಳಿದ್ದರೂ ಒಂದೂ ನಿವೇಶವನ್ನು ಹಂಚಿಕೆ ಮಾಡಿಲ್ಲ. ನಮ್ಮ ಸರ್ಕಾರ 12,610 ನಿವೇಶನ ಹಂಚಿಕೆಗೆ ನಿರ್ಧರಿಸಿದೆ. ಆಡಿದ ಮಾತನ್ನು ಉಳಿಸಿಕೊಳ್ಳಲಿದೆ. ಅರ್ಜಿ ಹಾಕಿದವರಿಗೆ ಹಿರಿತನದ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿರುವ ಕಸದ ಸಮಸ್ಯೆಗೆ ಮುಂದಿನ ಆರು ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುವುದು. ಬೆಳೆಯುತ್ತಿರುವ ನಗgಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಇರಬಾರದು. ಅದನ್ನು ಶಾಶ್ವತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ನಾನು ಮುಖ್ಯಮಂತ್ರಿ ಆದ ನಂತರ ಕಸದ ಸಮಸ್ಯೆ ನಿವಾರಣೆಗೆ ಒತ್ತು ನೀಡಿದ್ದು, ಡಿ.1ರಿಂದ ಮಂಡೂರಿನಲ್ಲಿ ಕಸ ಹಾಕುವುದಿಲ್ಲ ಎಂದು ಅಲ್ಲಿನ ಜನರಿಗೆ ಆಶ್ವಾಸನೆ ನೀಡಿದಂತೆ ನಡೆದುಕೊಂಡಿದ್ದೇವೆ. ಶುಕ್ರವಾರದಿಂದ ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸುತ್ತೇವೆ ಎಂದರು.
ಬೆಂಗಳೂರಿನಲ್ಲಿ 4,500 ಟನ್ ಕಸ ಉತ್ಪಾದಣೆಯಾಗುತ್ತಿದೆ. ಅದನ್ನು ಒಂದೆಡೆ ದಾಸ್ತಾನು ಮಾಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಬದಲಿಗೆ ಸಂಸ್ಕøರಣೆ ಒತ್ತು ನೀಡಬೇಕು. ಈಗಾಗಲೇ ಬೆಂಗಳೂರಿನ 198 ವಾರ್ಡ್‍ಗಳ ಪೈಕಿ 170 ವಾರ್ಡ್‍ಗಳಲ್ಲಿ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ಸ್ಥಾಪಿಸಲಾಗಿದೆ. ಬಾಕಿ ಇರುವ ವಾರ್ಡ್‍ಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪಿಸಲಾಗುವುದು ಎಂದು ವಿವರಿಸಿದರು.
ನೇರ ಭೂಮಿ ಖರೀದಿಗೆ ಅನುಮತಿ:
ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಮಾತನಾಡಿ, ನಿವೇಶನಗಳಿಗಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳು ರೈತರಿಂದ ನೇರವಾಗಿ ಭೂಮಿ ಖರೀದಿಸಲು ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ತರುವುದಾಗಿ ಭರವಸೆ ನೀಡಿದರು.
ಈಗಿನ ವ್ಯವಸ್ಥೆಯಲ್ಲಿ ಸಹಕಾರ ಸಂಘದ ಸದಸ್ಯತ್ವ, ಭೂಮಿ ಖರೀದಿ, ನಿವೇಶನ ರಚನೆ ಹಂಚಿಕೆಗೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದು ನಿವೇಶನ ಕೈಗೆ ಬರುವ ವೇಳೆಗೆ ಅದರ ಬೆಲೆ ಚದರ ಅಡಿಗೆ 200 ರಿಂದ 300 ರೂ.ಗಳಷ್ಟು ಹೆಚ್ಚಾಗಿರುತ್ತದೆ. ಹೀಗಾಗಿ ತಮಿಳುನಾಡು ಹಾಗೂ ಗುಜರಾತ್ ಮಾದರಿಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳು ನೇರವಾಗಿ ರೈತರಿಂದಲೇ ಭೂಮಿ ಖರೀದಿಗೆ ಅನುಮತಿ ನೀಡಲಾಗುವುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದರು.
ಭೂ ಪರಿವರ್ತನೆಗೆ ಅಗತ್ಯವಾದ ಎಲ್ಲ ಅನುಮತಿಗಳನ್ನೂ ಏಕಗವಾಕ್ಷಿ ಯೋಜನೆಯಡಿ ನೀಡಲು ಪ್ರಾಧಿಕಾರ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‍ನಲ್ಲಿ ಪ್ರಕಟಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಲು ಕಂದಾಯ ಸಚಿವರು ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚುವ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸಹಕಾರ ಸಂಘಗಳು ಸಾಮಾಜಿಕ ಕಳಕಳಿಯೊಂದಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಸಚಿವರು ಕರೆ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸೋಮಶೇಖರ್, ಮುನಿರತ್ನ, ಐಡಿಯಲ್ ಸಹಕಾರ ಸಂಸ್ಥೆಯ ಅಧ್ಯಕ್ಷ ಸುಬ್ಬಯ್ಯ, ಉಪಾಧ್ಯಕ್ಷ ರಾಜ್‍ಕುಮಾರ್, ಸಹಕಾರ ಇಲಾಖೆ ನಿಬಂಧಕ ಚೆನ್ನಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here