15 ದಿನದೊಳಗೆ ಬಿಪಿಎಲ್ ಪಡಿತರ ಕಾರ್ಡ ಆಹಾರ ಇಲಾಖೆ ಕಚೇರಿಗೆ ಒಪ್ಪಿಸಲು ಡಿಸಿ ಸೂಚನೆ

0
143
loading...

ವಿಜಯಪುರ30: : ಬಿಪಿಎಲ್ ವ್ಯಾಪ್ತಿಗೆ ಒಳಪಡದ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು 15ದಿನಗಳೊಳಗಾಗಿ ಬಿಪಿಎಲ್ ಪಡಿತರ ಕಾರ್ಡನ್ನು ಸಂಬಂಧಿಸಿದ ತಹಶೀಲ್ದಾರ ಕಚೇರಿಗೆ ಹಾಗೂ ವಿಜಯಪುರ ನಗರ ಪ್ರದೇಶಕ್ಕೆ ಸಂಬಂಧಿಸಿದ ಪಡಿತರದಾರರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಆಹಾರ ಇಲಾಖೆ ಕಚೇರಿಗೆ ಬಂದು ಒಪ್ಪಿಸಬೇಕು. ಇಲ್ಲವಾದಲ್ಲಿ ಅಂತಹ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಮೇಲೆ ಕ್ರಿಮಿನಲ್ ಮೂಕದ್ದಮೆ ಹೂಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಎಚ್ಚರಿಸಿದ್ದಾರೆ.
ಸರ್ಕಾರಿ ನೌಕರರು, ಸರ್ಕಾರಿ ನೌಕರರ ಹೆಂಡತಿಯ ಹೆಸರಿನಲ್ಲಿ ಪಡಿತರ ಚೀಟಿ ಹೊಂದಿರುವವರು, ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವವರು, ಮಾನದಂಡದಲ್ಲಿರುವ ಪ್ರಕಾರ ಹೆಚ್ಚಿನ ಜಮೀನು ಹೊಂದಿರುವ ಕುಟುಂಬದವರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ಹಾಗೂ ಒಂದೇ ಮನೆಗೆ ಒಂದಕ್ಕಿಂತ ಹೆಚ್ಚಿನ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ 15 ದಿನಗಳೊಳಗಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಸಂಬಂಧಿಸಿದ ಆಹಾರ ಕಛೇರಿಗೆ ಬಂದು ಒಪ್ಪಿಸಿ ತಕ್ಷಣದಲ್ಲಿಯೇ ಎಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡು ಹೋಗಲು ಸೂಚಿಸಲಾಗಿದೆ.
ಒಂದು ವೇಳೆ 15 ದಿನಗಳ ನಂತರವೂ ಸಹ ಪಡಿತರ ಚೀಟಿಯನ್ನು ಹಿಂದಿರುಗಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಕರ್ನಾಟಕ (ಪಡಿತರ ಚೀಟಿಗಳ ಅನಧೀಕೃತ ಸ್ವಾಧೀನತೆ ಪ್ರತಿಬಂಧ) ಆದೇಶ 1977 ರನ್ವಯ ಅಗತ್ಯ ವಸ್ತುಗಳ ಕಾಯ್ದೆ 1955 ರ ಸೆಕ್ಷನ್ 3/7 ರಡಿ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುವುದಲ್ಲದೇ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಕನಿಷ್ಟ 1 ವರ್ಷದ ಸಹಾಯಧನದ ಮೊತ್ತ ಅಂದಾಜು ರೂ 14000-00 ಗಳ ದಂಢವನ್ನು ವಿಧಿಸಲಾಗುವುದು. ಸರ್ಕಾರಿ ನೌಕರರು ಅಥವಾ ಅವರ ಪತ್ನಿಯ ಹೆಸರಿನಲ್ಲಿ ಬಿಪಿಎಲ್ ಪಡಿತರ ಚೀಟಿ ಇರುವುದು ಕಂಡು ಬಂದಲ್ಲಿ ಅಂತವರ ಸೇವೆಯನ್ನು ಅಮಾನತ್ತಿನಲ್ಲಿಡಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಹಾಲಿ ಇರುವ ಪಡಿತರ ಚೀಟಿಗಳಿಗೆ 2011 ರ ಜನಗಣತಿ ಪ್ರಕಾರ ತುಲನಾತ್ಮಕವಾಗಿ ಲೆಕ್ಕಾಚಾರ ಹಾಕಿದಾಗ 116.25 ಪ್ರತಿಶತಃ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದ್ದು, ಅದರಲ್ಲಿ ಅಂದಾಜು 98 ಪ್ರತಿಶತಃ ಬಿಪಿಎಲ್ ಪಡಿತರ ಚೀಟಿ ಇರುತ್ತವೆ. ಇನ್ನುಳಿದಂತೆ 18.54 ಪ್ರತಿಶತಃ ಎಪಿಎಲ್ ಪಡಿತರ ಚೀಟಿಗಳು ಇರುತ್ತವೆ. ಇದರಿಂದಾಗಿ ಈಗಾಗಲೇ ವಿತರಣೆ ಮಾಡಲಾಗಿರುವ ಪಡಿತರ ಚೀಟಿಗಳಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಗಣನೀಯವಾಗಿ ವಿತರಣೆ ಮಾಡಿದಂತಾಗಿರುತ್ತದೆ. ಅಲ್ಲದೇ ಹೊಸದಾಗಿ ಪಡಿತರ ಚೀಟಿ ವಿತರಣೆಗಾಗಿ ಕೋರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚಿನ ಪಡಿತರ ಚೀಟಿಗಳು ಮತ್ತು ಅನರ್ಹ ಕುಟುಂಬದವರು ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಸ್ಪಷ್ಟವಾಗುತ್ತದೆ.
ಸರಕಾರದ ಆದೇಶದ ಪ್ರಕಾರ ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಎಲ್ಲಾ ಕುಟುಂಬಗಳು, ಎಲ್ಲಾ ವರ್ಗದ ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಉದ್ಯಮಗಳು/ಮಂಡಳಿಗಳು/ನಿಗಮಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆಯ / ಮಂಡಳಿಗಳ ನೌಕರರು, ಸಹಕಾರ ಸಂಘಗಳ ಖಾಯಂ ಸಿಬ್ಬಂದಿಗಳು, ವೃತ್ತಿಪರ ವರ್ಗಗಳು: ವೈದ್ಯರುಗಳು, ಆಸ್ಪತ್ರೆಗಳ ನೌಕರರು, ವಕೀಲರುಗಳು, ಲೆಕ್ಕ ಪರಿಶೋಧಕರುಗಳು, ಸೈಕಲ್ ಮೇಲೆ ಅಥವಾ ಗಾಡಿಗಳ ಮೇಲೆ ತಳ್ಳಿಕೊಂಡು ಅಥವಾ ರಸ್ತೆಯ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುವ ಮತ್ತು ತರಕಾರಿ ಮಾತ್ರ ವ್ಯಾಪಾರ ಮಾಡುವ ಹಾಗೂ ಗೂಡಂಗಡಿಗಳಲ್ಲಿ ವ್ಯಾಪಾರ ಮಾಡುವವರನ್ನು ಹೊರತುಪಡಿಸಿ, ಉಳಿದ ಎಲ್ಲಾ ವ್ಯಾಪಾರಸ್ಥರು, 3 ಹೆಕ್ಟರ್ (7 1/2 ಎಕರೆ) ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು.,ಒಂದು ಅಟೋರಿಕ್ಷಾವನ್ನು ಹೊಂದಿ, ಸ್ವತ: ಒಡಿಸುತ್ತಿದ್ದು ಬೇರೆ ಆದಾಯದ ಮೂಲವಿಲ್ಲದವರನ್ನು ಹೊರತುಪಡಿಸಿ, 100 ಸಿ.ಸಿ.ಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು (ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ) ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ, ಅನುದಾನರಹಿತ ಕನ್ನಡ ಶಾಲೆಗಳ ನೌಕರರನ್ನು ಹೊರತುಪಡಿಸಿ ಅನುದಾನಿತ / ಅನುದಾನರಹಿತ ಶಾಲಾ ಕಾಲೇಜುಗಳ ನೌಕರರು, ನೊಂದಾಯಿತ ಗುತ್ತಿಗೆದಾರರು ಎ.ಪಿ.ಎಂ.ಸಿ. ಟ್ರೇಡರ್ಸ / ಕಮಿಷನ್ ಏಜೆಂಟ್ಸ್ / ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್, ಮನೆ/ಮಳಿಗೆ/ಕಟ್ಟಡಗಳನ್ನು ಬಾಡಿಗೆ ನೀಡಿ ವರಮಾನ ಪಡೆಯುವವರು., ಪ್ರತಿ ತಿಂಗಳಿಗೆ ಸರಾಸರಿ ವಿದ್ಯುತ್ ಬಿಲ್ ರೂ. 450/- ಕ್ಕಿಂತ ಮೇಲ್ಪಟ್ಟು ಪಾವತಿಸುವ ಕುಟುಂಬಗಳು ಹಾಗೂ ಬಹುರಾಷ್ಟ್ರೀಯ ಕಂಪನಿ ಉದ್ದಿಮೆ / ಕೈಗಾರಿಕೆಗಳ ನೌಕರರು ಬಿಪಿಎಲ್ ಕುಟುಂಬದ ವ್ಯಾಪ್ತಿಗೆ ಬರುವುದಿಲ್ಲ.
ಒಂದು ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದುವುದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ಅಂದಾಜು 10 ರಿಂದ 14 ಸಾವಿರ ರೂ. ಹೊರೆಯಾಗುತ್ತದೆ. ಅಲ್ಲದೇ ಅನಧೀಕೃತವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದುವುದರಿಂದ ಕರ್ನಾಟಕ (ಪಡಿತರ ಚೀಟಿಗಳ ಅನಧೀಕೃತ ಸ್ವಾಧೀನತೆ ಪ್ರತಿಬಂಧ) ಆದೇಶ 1977 ರನ್ವಯ ಅಪರಾಧವಾಗಿರುತ್ತದೆ. ಇದರಿಂದಾಗಿ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕನಿಷ್ಟ 6 ತಿಂಗಳು ಸೆರೆಮನೆವಾಸ ಹಾಗೂ ರೂ 5000-00 ಜುಲ್ಮಾನೆ ವಿಧಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here